;Resize=(412,232))
ಬೆಂಗಳೂರು : ಸಾರ್ವಜನಿಕರು ಕಟ್ಟುನಿಟ್ಟಾಗಿ ಹಸಿ ಮತ್ತು ಒಣ ಕಸ ವಿಂಗಡಿಸಿಕೊಟ್ಟರೆ ಒಂದು ಲಕ್ಷ ಮನೆಗಳಿಗೆ ಕಸದಿಂದ ಉತ್ಪಾದಿಸಿದ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕರೀಗೌಡ ತಿಳಿಸಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ಕರ್ನಾಟಕ ಪವರ್ ಕಾರ್ಪೊರೇಶನ್ (ಕೆಪಿಸಿಎಲ್) ಸಹಭಾಗಿತ್ವದಲ್ಲಿ ಬಿಡದಿಯಲ್ಲಿ ಸ್ಥಾಪಿಸಿರುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 314.74 ಕೋಟಿ ರು. ವೆಚ್ಚದಲ್ಲಿ ಘಟಕ ನಿರ್ಮಿಸಲಾಗಿದೆ. ಘಟಕಕ್ಕೆ ಒಂದು ವಾರದಿಂದ ಪ್ರತಿದಿನ 200 ಟನ್ ಒಣ ತ್ಯಾಜ್ಯ ಪೂರೈಕೆ ಆಗುತ್ತಿದ್ದು, ಸುಮಾರು 4 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆಗುತ್ತಿದೆ.ಘಟಕದ ಸಾಮರ್ಥ್ಯಕ್ಕೆ ತಕ್ಕಂತೆ 600 ಟನ್ ಕಸ ಒಣ ಕಸ ಪೂರೈಕೆಯಾದರೆ ನಿತ್ಯ 11.50 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಇದರಿಂದ ಪ್ರತಿ ಮನೆಗೆ ಸರಾಸರಿ 5 ಯೂನಿಟ್ ವಿದ್ಯುತ್ ಬಳಸಿದರೆ ಸುಮಾರು 25 ಸಾವಿರ ಮನೆಗಳಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ ಎಂದರು.
ನಗರದ ಎಲ್ಲ ಕಸ ವಿಂಗಡಿಸಿ ಪೂರೈಸಿದರೆರೆ, ಇದೇ ಮಾದರಿಯ ಹೆಚ್ಚುವರಿ ಮೂರು ಘಟಕಗಳನ್ನು ಸ್ಥಾಪಿಸಿ 1 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಬಹುದಾಗಿದೆ. ತ್ಯಾಜ್ಯದಲ್ಲಿ ಶೇ.35ರಷ್ಟು ಪ್ಲಾಸ್ಟಿಕ್ ಇರುವುದಾಗಿ ಅಂದಾಜಿಸಲಾಗಿದೆ. ಪುನರ್‌ಬಳಕೆ ಸಾಧ್ಯವಾದ ಪ್ಲಾಸ್ಟಿಕ್‌ಗಳನ್ನು ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳ ಮೂಲಕ ಪುನರ್‌ಬಳಕೆ ಮಾಡಲಾಗುತ್ತದೆ. ಕೆಳಮಟ್ಟದ ಪ್ಲಾಸ್ಟಿಕ್‌ಗಳನ್ನು ಮಾತ್ರ ಬಿಡದಿ ಘಟಕಕ್ಕೆ ಕಳುಹಿಸಲಾಗುತ್ತದೆ ಎಂದು ತಿಳಿಸಿದರು.
ಪ್ರಸ್ತುತ ಮಂಡೂರಿನ ಹಳೆಯ ತ್ಯಾಜ್ಯ ಹಾಗೂ ಒಣ ತ್ಯಾಜ್ಯ ಸಂಗ್ರಹಣಾ ಘಟಕಗಳಿಂದ ದಿನ 400 ಟನ್ ತ್ಯಾಜ್ಯವನ್ನು ರೆಪ್ಯೂಸ್ ಡಿರೈವ್ಡ್ ಪ್ಯೂಯಲ್ (ಆರ್‌ಡಿಎಫ್) ಘಟಕಕ್ಕೆ ಪೂರೈಸಲಾಗುತ್ತಿದೆ. ಮನೆಗಳಿಂದ ಪ್ರತಿದಿನ ಬೇರ್ಪಡಿಸಿ ಸಂಗ್ರಹಿಸುವ 200 ಟನ್ ಪ್ಲಾಸ್ಟಿಕ್ ಹಾಗೂ ಒಣ ತ್ಯಾಜ್ಯ ಸೇರಿ ಒಟ್ಟು 600 ಟನ್ ತ್ಯಾಜ್ಯವನ್ನು ಘಟಕಕ್ಕೆ ಕಳುಹಿಸಲಾಗುತ್ತಿದೆ. ನವೆಂಬರ್ ಅಂತ್ಯದೊಳಗೆ ಮನೆಗಳಿಂದ ಸಂಗ್ರಹವಾಗುವ ತ್ಯಾಜ್ಯದಲ್ಲಿ ಪ್ರತಿದಿನ 500 ಟನ್ ಒಣ ತ್ಯಾಜ್ಯ ಕಳುಹಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಕೆಪಿಸಿಎಲ್ ಕಾರ್ಯಪಾಲಕ ಅಭಿಯಂತರ ಸತೀಶ್ ಕುಮಾರ್ ಮಾತನಾಡಿ, ಬಿಡದಿಯಲ್ಲಿನ ಈ ಘಟಕವನ್ನು 163 ಎಕರೆ ಪ್ರದೇಶದಲ್ಲಿ ನಿರ್ಮಸಲಾಗಿದ್ದು, ದೇಶದಲ್ಲಿ 10 ಘಟಗಳಿದ್ದು ಕರ್ನಾಟದ ಮೊದಲ ಘಟಕ ಇದಾಗಿದೆ ಎಂದರು.
ಯಾವುದೇ ಮಾಲಿನ್ಯವಿಲ್ಲದೆ ಬೆಂಗಳೂರಿನ ಕಸದಿಂದ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಇಲ್ಲಿ ಉತ್ಪಾದನೆಯಾಗಿ ಉಳಿಯುವ ಧೂಳನ್ನು ಕೂಡ ರಸ್ತೆ ಕಾಮಗಾರಿಗೆ ಬಳಕೆ ಮಾಡುವ ಆಲೋಚನೆ ಇದೆ. ಇದಕ್ಕಾಗಿ ದೆಹಲಿ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದು ವಿವರಿಸಿದರು.
ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಸಂಸ್ಥೆಯ ಮುಖ್ಯ ಕಾರ್ಯಾಚರಣಾಧಿಕಾರಿ ರಮಾಮಣಿ ಮೊದಲಾದವರಿದ್ದರು.