;Resize=(412,232))
ಕೋಲಾರ : ರೈಲ್ವೆ ಇಲಾಖೆಗೆ ಸಂಬಂಧಿಸಿದ ಹುದ್ದೆಗಳ ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಮ್ಮತಿಸಿದ್ದಾರೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ನಗರದ ಹೊರವಲಯದ ಸಂಸದರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈಲ್ವೆ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಕನ್ನಡಿಗರಿಗೆ ಅವಕಾಶ ನೀಡುವಂತೆ ತಾವು ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿದ್ದಾಗಿ ತಿಳಿಸಿದರು. ಇದಕ್ಕೆ ಮೋದಿ ಅವರು ಸಮ್ಮತಿಸಿದರು ಎಂದು ಮಾಹಿತಿ ನೀಡಿದರು.
ಕನ್ನಡದಲ್ಲಿ ರೈಲ್ವೆ ಇಲಾಖೆಯ ಬಡ್ತಿ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಬಗ್ಗೆ ‘ಕನ್ನಡಪ್ರಭ’ ಡಿ.18ರಂದು ವಿಶೇಷ ವರದಿ ಪ್ರಕಟಿಸಿತ್ತು. ಬೆಂಗಳೂರಿನಲ್ಲಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಇಲ್ಲದಿರುವುದನ್ನು ಗಮನ ಸೆಳೆದಿತ್ತು. ಇಲಾಖೆಯ ಬೆಂಗಳೂರು ವಿಭಾಗೀಯ ವ್ಯಾಪ್ತಿಯಲ್ಲಿ ಸೀಮಿತ ವಿಭಾಗೀಯ ಸ್ಪರ್ಧಾತ್ಮಕ, ಅಂದರೆ ಬಡ್ತಿ ಇನ್ನಿತರ ಪರೀಕ್ಷೆಗಳು ಹಿಂದಿ, ಇಂಗ್ಲಿಷ್‌ನಲ್ಲಿ ಮಾತ್ರ ಇರುವ ವಿಚಾರವನ್ನು ಬಹಿರಂಗ ಪಡಿಸಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸೋಮಣ್ಣ, ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲು ಪ್ರಧಾನಿಗಳು ಸಮ್ಮತಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ರೈಲ್ವೆ ಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗ ಅವಕಾಶ ನೀಡಿಲ್ಲ ಎಂದು ‘ಕನ್ನಡಪ್ರಭ’ ಡಿ.18ರಂದು ವರದಿ ಮಾಡಿತ್ತು. ಆ ಬಳಿಕ ಕನ್ನಡದಲ್ಲೂ ಪರೀಕ್ಷೆಗೆ ಸೋಮಣ್ಣ ಸೂಚಿಸಿದ್ದರು.