ಸರ್ಕಾರಿ ಶಾಲೆ ಅಭಿವೃದ್ಧಿಗೆ ಖಾಸಗಿಗೆ ಅವಕಾಶ: ಡಿಕೆಶಿ

Published : Aug 08, 2026, 05:39 AM IST
cm dk shivakumar

ಸಾರಾಂಶ

ಖಾಸಗಿ ಕಂಪನಿಗಳು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯಡಿ ಸರ್ಕಾರಿ ಶಾಲೆಗಳನ್ನು ತಾವೇ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು. ಯಾವುದೇ ಕಮಿಷನ್ ಗೊಡವೆ ಇಲ್ಲದೆ ನಿರ್ಮಾಣದ ಗುತ್ತಿಗೆಯನ್ನು ಬೇಕಾದವರಿಗೆ ನೀಡಿ ಕಟ್ಟಡ ಕಟ್ಟಿಸಿಕೊಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

 ಬೆಂಗಳೂರು : ಖಾಸಗಿ ಕಂಪನಿಗಳು ಕಾರ್ಪೋರೆಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್‌ಆರ್‌) ಸರ್ಕಾರಿ ಶಾಲೆಗಳನ್ನು ತಾವೇ ಆಯ್ಕೆ ಮಾಡಿಕೊಂಡು ಅಭಿವೃದ್ಧಿಪಡಿಸಬಹುದು. ಯಾವುದೇ ಕಮಿಷನ್ ಗೊಡವೆ ಇಲ್ಲದೆ ನಿರ್ಮಾಣದ ಗುತ್ತಿಗೆಯನ್ನು ಬೇಕಾದವರಿಗೆ ನೀಡಿ ಕಟ್ಟಡ ಕಟ್ಟಿಸಿಕೊಡಬಹುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳು ಮತ್ತು ಕೈಗಾರಿಕೆಗಳ ಸಂಘ ಶುಕ್ರವಾರ ನಗರದಲ್ಲಿ ಆಯೋಜಿಸಿದ್ದ ‘ವಿಷನ್ 2030-ಸಿ.ಎಸ್.ಆರ್ ಸಮಾವೇಶ-2026’ರಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಮುಂದಾಗುವ ಕಂಪನಿಗೆ ಸರ್ಕಾರದಿಂದ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಅದಕ್ಕಾಗಿ ಪ್ರತ್ಯೇಕವಾಗಿ ಒಬ್ಬ ಐಎಎಸ್ ಅಧಿಕಾರಿಯನ್ನು ನೇಮಿಸುತ್ತೇವೆ. ಶಾಲೆಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದರೆ ಕಂಪನಿಯ ಹೆಸರನ್ನು ಶಾಲೆಗೆ ಇಡಬಹುದು. ಪೂರ್ಣವಾಗಿ ನಿರ್ಮಿಸಲು ಸಾಧ್ಯವಾಗದಿದ್ದರೆ, ಕಂಪ್ಯೂಟರ್, ಲ್ಯಾಬ್‌, ಕೊಠಡಿ ಸೇರಿ ಯಾವುದೇ ರೀತಿಯಿಂದ ಬೇಕಾದರೂ ಶಾಲೆಯ ಅಭಿವೃದ್ಧಿಗೆ ನೆರವಾಗಬಹುದು. ಕಂಪನಿಗಳ ಸಾಮರ್ಥ್ಯ ಅನುಸಾರ ಶಾಲೆಗಳನ್ನು ಅಭಿವೃದ್ಧಿಪಡಿಸಬಹುದು ಎಂದು ಹೇಳಿದರು.

ನಗರದ ಮಕ್ಕಳಿಗೆ ಗ್ರಾಮಗಳ ಪರಿಚಯ:

ಬೆಂಗಳೂರು ನಗರಗಳಲ್ಲಿ ಬೆಳೆಯುವ ಮಕ್ಕಳಿಗೆ ಕೃಷಿ, ಹೈನುಗಾರಿಕೆ ಸೇರಿದಂತೆ ಗ್ರಾಮೀಣ ಬದುಕಿನ ಪರಿಚಯ ಇರುವುದಿಲ್ಲ. ಹೀಗಾಗಿ, ಗ್ರಾಮೀಣ ಬದುಕನ್ನು ಪರಿಚಯಿಸುವ ಅಂಶಗಳನ್ನು ಪಠ್ಯದಲ್ಲಿ ಸೇರ್ಪಡೆಗೊಳಿಸಿ, ಮೂರು ದಿನ ಗ್ರಾಮಾಂತರ ಪ್ರದೇಶಗಳಲ್ಲಿ ವಾಸ್ತವ್ಯ ಹೂಡಿ ಅನುಭವ ಪಡೆಯುವುದನ್ನು ಕಡ್ಡಾಯಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಂಸದ ಪ್ರೊ. ಎಂ.ವಿ. ರಾಜೀವ್ ಗೌಡ, ಜಿಬಿಐಟಿಸಿಐಎ ಅಧ್ಯಕ್ಷ ಆದಿತ್ಯ ಪಿ.ಎಸ್ ಮತ್ತಿತರರು ಉಪಸ್ಥಿತರಿದ್ದರು.

ಸಿಎಂಗಳಿಂದ ಹೇಳಿಸಿದ್ರೂ ಕ್ಲಾಸ್‌ಗೆ ಪ್ರವೇಶ ಸಿಗಲಿಲ್ಲ!

ಎಂಟನೇ ತರಗತಿಗೆ ಬೆಂಗಳೂರಿನ ನ್ಯಾಷನಲ್ ಸ್ಕೂಲ್‌ಗೆ ಸೇರಬೇಕು ಎನ್ನುವುದು ನನ್ನ ಮತ್ತು ತಾತನ ಆಸೆಯಾಗಿತ್ತು. ಆದರೆ, ಪ್ರಾಂಶುಪಾಲ ಗೋಪಾಲಕೃಷ್ಣ ಅವರು ನನಗೆ ಪ್ರವೇಶ ನಿರಾಕರಿಸಿದರು. ಹೀಗಾಗಿ, ನನ್ನ ತಾತ ಕ್ಷೇತ್ರದ ಶಾಸಕ ಕರಿಯಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು. ಶಾಸಕರ ಕಾಲಿಗೆ ಬೀಳುವಂತೆ ಹೇಳಿದ ಕಾರಣ ನಾನು ಶಾಸಕರಿಗೆ ಕಾಲಿಗೆ ಬಿದ್ದೆ. ಅವರು ಪ್ರಾಂಶುಪಾಲರೊಂದಿಗೆ ಮಾತನಾಡಿ ಮನವಿ ಮಾಡಿದರೂ ಪ್ರವೇಶ ಸಿಗಲಿಲ್ಲ.

ಹೀಗಾಗಿ, ಶಿಕ್ಷಣ ಸಚಿವರಿಗೆ ನಮ್ಮ ಶಾಸಕರು ವಿಷಯ ತಿಳಿಸಿದರು. ಆದರೆ, ಸಚಿವರಿಗೂ ಪ್ರವೇಶ ಕೊಡಿಸಲು ಆಗಲಿಲ್ಲ. ಅಂತಿಮವಾಗಿ ಈ ವಿಚಾರ ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಕಚೇರಿಗೆ ತಲುಪಿತು. ಮುಖ್ಯಮಂತ್ರಿಯವರು ಸ್ವತಃ ಶಾಲೆಯ ಪ್ರಾಂಶುಪಾಲ ಗೋಪಾಲಕೃಷ್ಣ ಅವರನ್ನು ಕರೆಸಿ ಮಾತನಾಡಿದರು. ಮುಖ್ಯಮಂತ್ರಿ ಹೇಳಿದರೂ ಪ್ರಾಂಶುಪಾಲರು ಪ್ರವೇಶ ನೀಡಲು ನಿರಾಕರಿಸಿದರು. ಅಂತಿಮವಾಗಿ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ನಾನು ವಿದ್ಯಾವರ್ಧಕ ಸಂಘದ ಶಾಲೆಗೆ ಸೇರಬೇಕಾಯಿತು ಎಂದು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸ್ಮರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗಳೂರು ಕಮೀಷನರೇಟ್ ವಿಭಜನೆ - ಆ.15ಕ್ಕೆ ಮುಖ್ಯಮಂತ್ರಿ ಘೋಷಣೆ ಸಾಧ್ಯತೆ
ಬೆಂಗಳೂರು : ಸ್ಟಾರ್‌ ಹೋಟೆಲಲ್ಲಿ ಕೊಳೆತ ತರಕಾರಿ, ಹಳತಾದ ಮಾಂಸ !