ದೊಡ್ಡಬಳ್ಳಾಪುರ: ಶಾಸಕ ಧೀರಜ್‌ ಮುನಿರಾಜ್‌ ವಿರುದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಕೆಲ ಕಾಂಗ್ರೆಸ್‌ ಮುಖಂಡರ ಕ್ಷುಲ್ಲಕ ಟೀಕೆ, ಆರೋಪ ಖಂಡನೀಯ ಎಂದು ಬಿಜೆಪಿ ವಕ್ತಾರರಾದ ಪುಷ್ಪಾ ಶಿವಶಂಕರ್‌ ಹೇಳಿದರು

ದೊಡ್ಡಬಳ್ಳಾಪುರ: ಶಾಸಕ ಧೀರಜ್‌ ಮುನಿರಾಜ್‌ ವಿರುದ್ದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಹಾಗೂ ಕೆಲ ಕಾಂಗ್ರೆಸ್‌ ಮುಖಂಡರ ಕ್ಷುಲ್ಲಕ ಟೀಕೆ, ಆರೋಪ ಖಂಡನೀಯ ಎಂದು ಬಿಜೆಪಿ ವಕ್ತಾರರಾದ ಪುಷ್ಪಾ ಶಿವಶಂಕರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರ ಜಟಾಪಟಿಯ ನಡುವೆ ಕಾಂಗ್ರೆಸ್‌ನ ಎಚ್.ಎಸ್.ಶಿವಶಂಕರ್‌, ಶರತ್‌ ಪಟೇಲ್‌ ಸೇರಿದಂತೆ ಕೆಲವರು ಶಾಸಕರ ವಿರುದ್ದ ವೈಯಕ್ತಿಕ ಹಾಗೂ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವುದು ಆಕ್ಷೇಪಾರ್ಹ. ಶಿವಶಂಕರ್ ಈಗಲೂ ಬಿಜೆಪಿ ಕಾರ್ಯಕರ್ತರಾಗಿದ್ದು, ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳಿವೆ. 2021 ರಲ್ಲಿ ನಡೆದ ನಗರಸಭಾ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಹೊರತುಪಡಿಸಿ ಸ್ವತಂತ್ರ ಅಭ್ಯರ್ಥಿಗಳಿಗೆ ಸಹಕಾರ ನೀಡಿದ ಬಗ್ಗೆ ಎಲ್ಲರಿಗೂ ತಿಳಿದಿದೆ ಎಂದು ಆರೋಪಿಸಿದರು.

ಮಾಜಿ ಹಾಗೂ ಹಾಲಿ ಶಾಸಕರ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳು ಇರುವುದು ಸಹಜ. ಆದರೆ ಶಾಸಕ ಧೀರಜ್ ಮುನಿರಾಜ್ ಅವರು ಈವರೆಗೆ ಉದ್ಧಟತನದಿಂದ ನಡೆದುಕೊಂಡಿಲ್ಲ. ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಟೀಕಿಸುವ ಬದಲು ರಾಜಕೀಯ ಹಾಗೂ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸುವುದು ಸೂಕ್ತ ಎಂದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಂತಿ ವೆಂಕಟೇಶ್ ಮಾತನಾಡಿ, ಸರ್ಕಾರಿ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ಕಾಮಗಾರಿಗಳ ಗುದ್ದಲಿ ಪೂಜೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಿಗೆ ಶಿಷ್ಟಾಚಾರದಂತೆ ಎಲ್ಲ ಪಕ್ಷಗಳ ಮುಖಂಡರನ್ನು ಆಹ್ವಾನಿಸಲಾಗುತ್ತಿದೆ. ಆದರೆ ಕಾರ್ಯಕ್ರಮಗಳಿಗೆ ಭಾಗವಹಿಸದೆ ರಾಜಕೀಯ ಟೀಕೆ ಮಾಡುವುದು ಸರಿಯಲ್ಲ ಎಂದು ಹೇಳಿದರು.

ಸದನದಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಪರವಾಗಿ ಶಾಸಕ ಧೀರಜ್ ಮುನಿರಾಜ್ ನಿರಂತರವಾಗಿ ಧ್ವನಿ ಎತ್ತುತ್ತಿದ್ದಾರೆ. ಇದನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಶಾಸಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಲಾಗುತ್ತಿದೆ. ಶಾಸಕರ ತೇಜೋವಧೆ ಮಾಡುವ ಪ್ರಯತ್ನಗಳನ್ನು ನಿಲ್ಲಿಸಬೇಕು ಎಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷ ಮುದ್ದಪ್ಪ, ನಗರಸಭಾ ಸದಸ್ಯರಾದ ಎಂ.ಜಿ. ಶ್ರೀನಿವಾಸ್, ಶಿವು, ಪದ್ಮನಾಭ್, ಸುಮಿತ್ರಾ ಆನಂದ್ ಪದ್ಮನಾಭ, ಶಿವರಾಜು, ನಾಗರತ್ನ, ವತ್ಸಲಾ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

23ಕೆಡಿಬಿಪಿ2- ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ವಿವಿಧ ಘಟಕಗಳ ನೇತೃತ್ವದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಕ್ತಾರರಾದ ಪುಷ್ಪಾ ಶಿವಶಂಕರ್‌ ಮಾತನಾಡಿದರು. ತಾಲೂಕು ಅಧ್ಯಕ್ಷ ನಾಗೇಶ್, ನಗರಾಧ್ಯಕ್ಷ ಮುದ್ದಪ್ಪ ಇತರರಿದ್ದರು.