;Resize=(412,232))
ಬೆಂಗಳೂರು : ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರ ಪರಿಸ್ಥಿತಿ ಎದುರಿಸಲು ಎನ್‌ಡಿಆರ್‌ಎಫ್ ಅಡಿ ತುರ್ತಾಗಿ ₹20,585.73 ಕೋಟಿ ಪರಿಹಾರ ಮಂಜೂರು ಮಾಡಿ ಬಿಡುಗಡೆ ಮಾಡುವಂತೆ ಉಪ ಮುಖ್ಯಮಂತ್ರಿ ಡಾ। ಜಿ.ಪರಮೇಶ್ವರ್ ಅವರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
ಕಂದಾಯ ಸಚಿವರೂ ಆದ ಪರಮೇಶ್ವರ್ ಅವರು ಪತ್ರದ ಮೂಲಕ ರಾಜ್ಯದ ಬರ ಪರಿಸ್ಥಿತಿಯ ಗಂಭೀರತೆ ವಿವರಿಸಿದ್ದು, 226 ತಾಲೂಕುಗಳಲ್ಲಿ ತೀವ್ರ ಬರ ಆವರಿಸಿದೆ. ಇದರಿಂದ ₹62,481.88 ಕೋಟಿ ನಷ್ಟ ಉಂಟಾಗಿದ್ದು, ಹೀಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ತುರ್ತು ನೆರವು ನೀಡಬೇಕು ಎಂದು ಕೋರಿದ್ದಾರೆ.
ಪ್ರಸಕ್ತ ಮುಂಗಾರು ಅವಧಿಯಲ್ಲಿ ಕರ್ನಾಟಕದಲ್ಲಿ ಶೇ.35ರಷ್ಟು ಮಳೆ ಕೊರತೆಯಾಗಿದೆ. ಇದು 1956ರಿಂದೀಚೆಗೆ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರಿಂದ ಈಚೆಗೆ ದಾಖಲಾದ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ.
ಹೀಗಾಗಿ 226 ತಾಲೂಕುಗಳಲ್ಲಿ ಬರ ಘೋಷಣೆ ಆಗಿದ್ದು, ಒಟ್ಟು 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಇದರಲ್ಲಿ 53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಗಳು ಹಾಗೂ 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚದ ಆಧಾರದ ಮೇಲೆ ಲೆಕ್ಕಹಾಕಲಾದ ಒಟ್ಟು ಆರ್ಥಿಕ ನಷ್ಟ ₹62,481.88 ಕೋಟಿ ಆಗಿದೆ ಎಂದು ವಿವರಿಸಿದ್ದಾರೆ.
₹20,585.73 ಕೋಟಿ ಪರಿಹಾರದಲ್ಲಿ ಬೆಳೆ ಹಾನಿ ಪರಿಹಾರ ಸಹಾಯಧನಕ್ಕಾಗಿ (ಇನ್‌ಪುಟ್ ಸಬ್ಸಿಡಿ) ₹6,128.70 ಕೋಟಿ, 61.91 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ ₹12,146.99 ಕೋಟಿ, ಕುಡಿಯುವ ನೀರಿನ ಪೂರೈಕೆಗಾಗಿ ₹1,727 ಕೋಟಿ ಹಾಗೂ ಪಶುಸಂಗೋಪನೆ ಮತ್ತು ಜಾನುವಾರುಗಳ ಸಂರಕ್ಷಣೆಗಾಗಿ ₹583.04 ಕೋಟಿ ನೆರವು ಕೋರಲಾಗಿದೆ.
ರೈತರಿಗೆ ದಿನಕ್ಕೆ ₹327ರಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರ ಲೆಕ್ಕಹಾಕಲಾಗಿದೆ. ಜಾನುವಾರುಗಳ ರಕ್ಷಣೆಗಾಗಿ 476 ಗೋಶಾಲೆಗಳು ಮತ್ತು 583 ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸಲು ಸಹ ಕೇಂದ್ರದ ನೆರವು ಕೇಳಲಾಗಿದೆ.
ಬೆಳೆ ಹಾನಿ ಪರಿಹಾರ ಸಹಾಯಧನ ನಿರ್ಧರಿಸಲು ಈಗಲೂ 2015–16ರ ಹಳೆಯ ಕೃಷಿ ಗಣತಿಯ ಅಂಕಿ-ಅಂಶಗಳನ್ನು ಬಳಸುತ್ತಿರುವ ಬಗ್ಗೆ ಡಾ.ಪರಮೇಶ್ವರ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಹಳೆಯ ದತ್ತಾಂಶ ಆಧರಿಸಿ ಪರಿಹಾರ ಲೆಕ್ಕಹಾಕುವುದರಿಂದ ರಾಜ್ಯಕ್ಕೆ ಸುಮಾರು ₹1,669.50 ಕೋಟಿ ನೆರವಿನ ಕೊರತೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಫಲಾನುಭವಿ ರೈತರನ್ನು ನಿಖರವಾಗಿ ಗುರುತಿಸಲು ಹಾಗೂ ಪರಿಹಾರದ ಅಗತ್ಯವನ್ನು ಸಮರ್ಪಕವಾಗಿ ಅಂದಾಜಿಸಲು ಕರ್ನಾಟಕ ಸರ್ಕಾರದ ನವೀಕೃತ ‘ಫ್ರೂಟ್ಸ್’ ದತ್ತಾಂಶ ಪರಿಗಣಿಸಬೇಕು. ಬರಪೀಡಿತ ತಾಲೂಕುಗಳ ಶಾಲಾ ಮಕ್ಕಳಿಗೆ ಬೇಸಿಗೆ ರಜೆಯ ಅವಧಿಯಲ್ಲೂ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ಪಿಎಂ ಪೋಷಣ್ ಯೋಜನೆಯಡಿ ಹೆಚ್ಚುವರಿಯಾಗಿ ₹427.20 ಕೋಟಿ ನೆರವು ನೀಡಬೇಕು. ಅದೇ ರೀತಿ, ದುರ್ಬಲ ವರ್ಗದ ಫಲಾನುಭವಿಗಳ ಪೌಷ್ಟಿಕಾಂಶದ ಅಗತ್ಯ ಪೂರೈಸಲು ಪೂರಕ ಪೌಷ್ಟಿಕಾಂಶ ಕಾರ್ಯಕ್ರಮದಡಿ ₹70.96 ಕೋಟಿ ನೆರವು ಒದಗಿಸಬೇಕು ಎಂದು ಡಾ.ಪರಮೇಶ್ವರ್ ಮನವಿ ಮಾಡಿದ್ದಾರೆ.
ಮಾನದಂಡ ಪರಿಷ್ಕರಿಸಿ:
ಕೃಷಿ ಉತ್ಪಾದನಾ ವೆಚ್ಚ ನಿರಂತರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ 16ನೇ ಹಣಕಾಸು ಆಯೋಗದ ಅವಧಿ ಪರಿಗಣಿಸಿ, ಪ್ರಸ್ತುತ ಜಾರಿಯಲ್ಲಿರುವ ಬೆಳೆ ಹಾನಿ ಪರಿಹಾರ ಸಹಾಯಧನದ ಮಾನದಂಡಗಳನ್ನು ಪರಿಷ್ಕರಿಸುವ ಅಗತ್ಯವಿದೆ.
ನಮ್ಮ ದೇಶ ಸದೃಢ ಆಗಿರಬೇಕಾದರೆ ಈ ನಾಡಿನ ಅನ್ನದಾತರಾದ ರೈತರ ಶಕ್ತಿಯೇ ಬಹುಮುಖ್ಯ ಆಧಾರ. ಕೃಷಿ ಆಧಾರಿತ ಜೀವನೋಪಾಯವನ್ನು ರಕ್ಷಿಸಲು ಹಾಗೂ ಬರ ಸಂಕಷ್ಟದಿಂದ ರೈತರನ್ನು ಕಾಪಾಡಲು ಸಕಾಲದಲ್ಲಿ ಆರ್ಥಿಕ ನೆರವು ಒದಗಿಸುವುದು ಅತ್ಯಂತ ಅಗತ್ಯ ಎಂದು ಪರಮೇಶ್ವರ್ ಒತ್ತಿ ಹೇಳಿದ್ದಾರೆ.