ಹವ್ಯಕರ ಜನಸಂಖ್ಯೆ ಹೆಚ್ಚಳಕ್ಕೆ ರಾಘವೇಶ್ವರ ಶ್ರೀ ಕರೆ - ಹವ್ಯಕ ದಂಪತಿ 3ನೇ ಮಗು ಹೊಂದಲಿ

ಸಾರಾಂಶ

‘ಹವ್ಯಕ ಸಮುದಾಯದವರ ಜನಸಂಖ್ಯೆ ಕುಸಿಯುತ್ತಿರುವುದುದರಿಂದ ಮುಂದಿನ ತಲೆಮಾರಿನ ಬೆಳವಣಿಗೆಗೆ ಸಂಕಷ್ಟ ಎದುರಾಗುವಂತಾಗಿದೆ. ಹೀಗಾಗಿ, ಹವ್ಯಕರು ಮೂರನೇ ಮಗುವನ್ನು ಹೊಂದುವತ್ತ ಗಮನಹರಿಸಬೇಕು’ - ರಾಘವೇಶ್ವರಭಾರತೀ ಸ್ವಾಮೀಜಿ

ಬೆಂಗಳೂರು : ‘ಹವ್ಯಕ ಸಮುದಾಯದವರ ಜನಸಂಖ್ಯೆ ಕುಸಿಯುತ್ತಿರುವುದುದರಿಂದ ಮುಂದಿನ ತಲೆಮಾರಿನ ಬೆಳವಣಿಗೆಗೆ ಸಂಕಷ್ಟ ಎದುರಾಗುವಂತಾಗಿದೆ. ಹೀಗಾಗಿ, ಹವ್ಯಕರು ಮೂರನೇ ಮಗುವನ್ನು ಹೊಂದುವತ್ತ ಗಮನಹರಿಸಬೇಕು’ ಎಂದು ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿ ಕರೆ ನೀಡಿದ್ದಾರೆ.

''ಆ ಮೂರನೇ ಮಗುವಿನ ಪಾಲನೆಯ ಹೊಣೆಯನ್ನು ನಮ್ಮ ರಾಮಚಂದ್ರಾಪುರ ಮಠ ಹೊರಲಿದೆ ಮತ್ತು ಆ ಮಗುವಿಗೆ ನಾವೇ ತಂದೆ-ತಾಯಿಯಾಗಿ ಪೋಷಿಸುತ್ತೇವೆ. ಮೂರಕ್ಕಿಂತ ಹೆಚ್ಚು ಮಗುವಿಗೆ ಜನ್ಮ ನೀಡುವ ತಾಯಿಗೆ ವೀರಮಾತೆ ಪ್ರಶಸ್ತಿ ನೀಡಲು ಉದ್ದೇಶಿಸಲಾಗಿದೆ’ ಎಂದೂ ಅವರು ಘೋಷಿಸಿದ್ದಾರೆ.

ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ‘ತೃತೀಯ ವಿಶ್ವ ಹವ್ಯಕ ಸಮ್ಮೇಳನ’ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹವ್ಯಕ ಸಮುದಾಯದವರು ಜನಸಂಖ್ಯಾ ನಿಯಂತ್ರಣ ನಿಯಮವನ್ನು ಗಂಭೀರವಾಗಿ ಪರಿಗಣಿಸಿದಂತಿದೆ. ಹೀಗಾಗಿ ಕೇವಲ ಒಂದು ಮಗುವಿಗೆ ಸುಮ್ಮನಾಗುತ್ತಿದ್ದಾರೆ. ಮಕ್ಕಳನ್ನು ಭಾರ ಎಂದು ತಿಳಿದ ಪರಿಣಾಮ ಹವ್ಯಕ ಸಮುದಾಯದ ಸಂಖ್ಯೆ ಕುಸಿಯುತ್ತಿದೆ. ಇದು ಮುಂಬರುವ ಸಂಕಷ್ಟ ಮತ್ತು ಯುವಪೀಳಿಗೆಯ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದೆ. ಹವ್ಯಕರು ಅಪರೂಪದ ತಳಿ. ಇದನ್ನು ಉಳಿಸಬೇಕಿದೆ. ಹೀಗಾಗಿ ಪ್ರತಿ ದಂಪತಿಯೂ ಕನಿಷ್ಠ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಒಂದು ವೇಳೆ ಮೂರನೇ ಮಗುವಿನ ಪಾಲನೆ ಸಾಧ್ಯವಾಗದಿದ್ದರೆ ಆ ಮಗುವಿನ ಪಾಲನೆಯನ್ನು ಶ್ರೀ ರಾಮಚಂದ್ರಾಪುರ ಮಠವೇ ಮಾಡಲಿದೆ. ಆ ಮಗುವಿಗೆ ತಂದೆ-ತಾಯಿಯಾಗಿ ಶೈಕ್ಷಣಿಕ ಸೇರಿ ಎಲ್ಲ ವಿಚಾರದಲ್ಲೂ ಪೋಷಣೆ ಮಾಡುತ್ತೇವೆ ಎಂದು ತಿಳಿಸಿದರು.

ಸಮಾವೇಶದ ಮೂಲಕ ನಾವು ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡುವ ಬದಲು, ಹವ್ಯಕ ಸಮಾಜದವರ ಮುಂದೆಯೇ ಬೇಡಿಕೆಯನ್ನಿಡಬೇಕಿದೆ. ಹವ್ಯಕ ಸಮಾಜದ ಬೆಳವಣಿಗೆಗೆ ಎಲ್ಲರೂ ಮುಂದಾಗಬೇಕು. ಎಲ್ಲರೂ ಒಟ್ಟಾಗಿ ಸಮಾಜವನ್ನು ಬೆಳೆಸಬೇಕು. ಹವ್ಯಕರು ಮಲಗಿದರೆ ಕುಂಭಕರ್ಣರ ರೀತಿ, ಎದ್ದರೆ ಹನುಮಂತರ ರೀತಿ. ಹನುಮಂತ ಏನು ಬೇಕಾದರೂ ಸಾಧನೆ ಮಾಡುತ್ತಾನೆ. ಅದೇ ರೀತಿ ಹವ್ಯಕರು ಕುಂಭಕರ್ಣನ ನಿದ್ದೆಯಿಂದ ಎದ್ದು ಹನುಮಂತನ ರೀತಿ ಸಮಾಜದ ಬೆಳವಣಿಗೆಗೆ ಕೆಲಸ ಮಾಡಬೇಕು ಎಂದರು.

ದ.ಕೊರಿಯಾ ರೀತಿ ಕಣ್ಮರೆಯಾಗುತ್ತೇವೆ: ಜಗತ್ತಿನಲ್ಲಿ ಮುಂದುವರಿದ ರಾಷ್ಟ್ರವಾಗಿರುವ ದಕ್ಷಿಣ ಕೊರಿಯಾದಲ್ಲಿ ಈಗ ಜನಸಂಖ್ಯೆ ಕುಸಿಯುತ್ತಿದೆ. ಜನಸಂಖ್ಯಾ ನಿಯಂತ್ರಣದ ನೆಪದಲ್ಲಿ ಮಕ್ಕಳನ್ನು ಹೊಂದದಂತೆ ದಕ್ಷಿಣ ಕೊರಿಯಾದಲ್ಲಿ ನಿಯಂತ್ರಣ ಹೇರಲಾಗಿತ್ತು. ಹೀಗಾಗಿ ದಕ್ಷಿಣ ಕೊರಿಯಾದಲ್ಲಿ ಜನಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಅದೇ ಪರಿಸ್ಥಿತಿ ಹವ್ಯಕ ಸಮಾಜಕ್ಕೂ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಯಾರೂ ಇದನ್ನು ತಮಾಷೆಯಾಗಿ ತೆಗೆದುಕೊಳ್ಳದೆ, ಗಂಭೀರ ಚಿಂತನೆ ನಡೆಸಬೇಕು. ಜನಸಂಖ್ಯಾ ನಿಯಂತ್ರಣ ನಿಯಮವನ್ನು ಯಾವ ಸಮುದಾಯದವರು ಅಳವಡಿಸಿಕೊಳ್ಳಬೇಕೋ ಅವರು ಅಳವಡಿಸಿಕೊಳ್ಳಲಿಲ್ಲ. ಅದನ್ನು ಹವ್ಯಕ ಸಮಾಜದವರು ಗಂಭೀರವಾಗಿ ಪರಿಗಣಿಸಿದ ಪರಿಣಾಮ ಈಗ ಸಮಸ್ಯೆ ಎದುರಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ನಾನು ಬದಲು ನಾವು ಎನ್ನುವಂತಾಗಬೇಕು: ನಾನು, ನನ್ನದು, ನನಗೆ, ನನ್ನಿಂದ ಎನ್ನುವ ಜಪ ಹೆಚ್ಚಾಗುತ್ತಿದೆ. ಕನಸಿನಲ್ಲೂ ನಾನು, ನನ್ನದು ಎಂದು ಹೇಳಲಾಗುತ್ತಿದೆ. ನಾನು ಎನ್ನುವುದು ಸತ್ತು ನಾವು ಎಂಬುದು ಬಾರದಿದ್ದರೆ ಯಾರೂ ಉದ್ಧಾರವಾಗುವುದಿಲ್ಲ. ನಮ್ಮ ಪೂರ್ವಾಶ್ರಮದಲ್ಲಿ ನಮ್ಮ ಅಜ್ಜನೊಂದಿಗೆ 13 ಮೊಮ್ಮಕ್ಕಳು ಆಟವಾಡುತ್ತಿದ್ದೆವು. ಆಗೆಲ್ಲ ಕುಟುಂಬ ಜೀವನಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದೆವು. ಈಗ ಅದು ಕಡಿಮೆಯಾಗುತ್ತಿದೆ. ನಾನು ಎನ್ನುವುದು ಸ್ವಾರ್ಥ, ನಾವು ಎನ್ನುವುದು ನಿಸ್ವಾರ್ಥ ಎಂಬುದನ್ನು ಎಲ್ಲರೂ ಅರಿಯಬೇಕು. ನಮ್ಮ ಆಚಾರ, ವಿಚಾರ, ನಡೆ-ನುಡಿ ಏನಾಗಿದೆ ಎಂಬುದುನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಹಣದ ಶ್ರೀಮಂತಿಕೆಗಿಂತ ನಮ್ಮ ಸಂಪ್ರದಾಯ ಉಳಿಸಿ, ಬೆಳೆಸುವುದು ದೊಡ್ಡ ಶ್ರೀಮಂತಿಕೆ ಎಂಬುದನ್ನು ಅರಿತು ಸಾಗಬೇಕು ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಮಂತ್ರಾಲಯ ರಾಘವೇಂದ್ರ ಮಠದ ಸುಬುಧೇಂದ್ರತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಾಖಾಮಠದ ಸೌಮ್ಯನಾಥ ಸ್ವಾಮೀಜಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಸಂಸದ ಹಾಗೂ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ, ಹಿರಿಯ ಪತ್ರಕರ್ತ ವಿಶೇಶ್ವರ ಭಟ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ, ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಹೊರನಾಡು ದೇವಸ್ಥಾನದ ಆಡಳಿತಾಧಿಕಾರಿ ಭೀಮೇಶ್ವರ ಜೋಶಿ ಇತರರಿದ್ದರು.

ನಮ್ಮ ಎದುರು ಸವಾಲು ರಾಶಿಯೇ ಇದ್ದು, ಅದನ್ನು ಮೀರಿ ನಾವೆಲ್ಲರೂ ಕೆಲಸ ಮಾಡಬೇಕು. ನಮ್ಮ ಪೂರ್ವಜರು ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಎಲ್ಲರೂ ಸಾಗಬೇಕು. ಹಿಂದೂ ಧರ್ಮದ ರಕ್ಷಣೆಗೆ ಎಲ್ಲರೂ ಒಂದಾಗಬೇಕು.

-ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಹಾಗೂ ತೃತೀಯ ವಿಶ್ವ ಹವ್ಯಕ ಸಮ್ಮೇಳನದ ಗೌರವಾಧ್ಯಕ್ಷ

ಹವ್ಯಕ ಸಮುದಾಯ ಸಮಾಜವನ್ನು ಕಟ್ಟುವ ಕಾರ್ಯ ಮಾಡುತ್ತಿದೆ. ಹವ್ಯಕ ಸಮುದಾಯವು ಪ್ರತಿಭೆಗೆ ಮತ್ತೊಂದು ಹೆಸರಾಗಿದೆ. ಶ್ರದ್ಧೆ, ಶುದ್ಧತೆ, ಮಡಿವಂತಿಕೆ, ಮಾನಸಿಕವಾಗಿಯೂ ಹವ್ಯಕ ಸಮುದಾಯದವರು ಗಟ್ಟಿಯಾಗಿದ್ದಾರೆ. ಅವರು ಬೇಡುವ ಸಮಾಜವಲ್ಲ, ಕೊಡುವ ಸಮಾಜವಾಗಿದೆ

-ಬಿ.ವೈ. ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಹವ್ಯಕ ಸಮುದಾಯದವರು ಇಲ್ಲದ ಕ್ಷೇತ್ರವಿಲ್ಲ. ಎಲ್ಲ ಕ್ಷೇತ್ರದಲ್ಲೂ ಅವರು ತಮ್ಮ ಛಾಪು ಮೂಡಿಸಿದ್ದಾರೆ. ಬ್ರಾಹ್ಮಣ ಸಮುದಾಯದ ಭಾಗವಾದ ಹವ್ಯಕ ಸಮಾಜದವರು ಎಲ್ಲ ಕಾರ್ಯಕ್ಕೂ ಬೇಕಾದವರಾಗಿದ್ದಾರೆ. ಹವ್ಯಕರ ಕಾರ್ಯ ದೇವತಾ ಕಾರ್ಯವಾಗಿದೆ. ಸಮಾಜ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದಾರೆ.

-ಸುಬುಧೇಂದ್ರತೀರ್ಥ ಸ್ವಾಮೀಜಿ, ಮಂತ್ರಾಲಯ ಶ್ರೀ ರಾಘವೇಂದ್ರ ಮಠ

ಕೆಲವೇ ನಾಯಕರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಹವ್ಯಕ ಸಮುದಾಯದ ಹಲವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡು, ದೇಶಕ್ಕಾಗಿ ಹೋರಾಡಿದ್ದರು. ಇತ್ತೀಚೆಗೆ ಕೆಲವರು ಸಂವಿಧಾನದ ಕೆಂಪು ಪುಸ್ತಕವನ್ನು ಇಟ್ಟುಕೊಂಡು ಓಡಾಡುತ್ತಿದ್ದು, ಜಾತ್ಯಾತೀತದ ಬಗ್ಗೆ ಹೇಳುತ್ತಿದ್ದಾರೆ. ಆದರೆ, ಸನಾತನ ಧರ್ಮದ ಸಿದ್ಧಾಂತವೇ ಜಾತ್ಯಾತೀತೆ ಎಂಬುದನ್ನು ಎಲ್ಲರೂ ಅರಿಯಬೇಕು. ರಾಜ್ಯ ಸರ್ಕಾರ ಆರ್ಥಿಕ ಹಿಂದುಳಿದವರಿಗೆ ನೀಡಬೇಕಾದ ಶೇ. 10ರಷ್ಟು ಮೀಸಲಾತಿಯನ್ನು ನೀಡದೇ ನಿರ್ಲಕ್ಷ್ಯ ತೋರಿದೆ

-ಅಶೋಕ್ ಹಾರನಹಳ್ಳಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ

Share this article