ಮೂರು ಜಿಲ್ಲೆಗಳಲ್ಲಿ ಮಳೆ : ಬೆಂಗ್ಳೂರಲ್ಲಿ ತಗ್ಗಿದ ಹಿಂಗಾರು - ಇನ್ನೂ ಮುಂದುವರಿದ ಜನರ ಪರದಾಟ

ಸಾರಾಂಶ

ರಾಜ್ಯದ ಚಿಕ್ಕಮಗಳೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುರುವಾರ ಹಿಂಗಾರು ಮಳೆ ಸುರಿದಿದ್ದು, ಮನೆಗಳು ಕುಸಿದು ಹಾನಿಯಾಗಿದೆ.

ಬೆಂಗಳೂರು : ರಾಜ್ಯದ ಚಿಕ್ಕಮಗಳೂರು, ತುಮಕೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುರುವಾರ ಹಿಂಗಾರು ಮಳೆ ಸುರಿದಿದ್ದು, ಮನೆಗಳು ಕುಸಿದು ಹಾನಿಯಾಗಿದೆ. ಕೆಲವೆಡೆ ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಜಮೀನಿನಲ್ಲಿದ್ದ ಬೆಳೆಗಳು ನಾಶವಾಗಿವೆ. ಬೆಂಗಳೂರಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟು ಬಿಡದೆ ಬರುತ್ತಿದ್ದ ತುಂತುರು ಮಳೆ ಗುರುವಾರ ಸ್ವಲ್ಪ ಬಿಡುವು ನೀಡಿದೆ.

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಸಾತ್ಕೋಳಿಯ ಹಳ್ಳದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಗೆ 2 ಹಸುಗಳು ಕೊಚ್ಚಿಹೋಗಿದ್ದು, ಹಲವೆಡೆ ಅಡಕೆ ತೋಟಕ್ಕೆ ಹಳ್ಳದ ನೀರು ನುಗ್ಗಿ ಬೆಳೆ ಹಾಳಾಗಿದೆ. ಅಲ್ಲದೆ ಗದ್ದೆಗಳಲ್ಲಿದ್ದ ಭತ್ತದ ಪೈರು ಹಾಳಾಗಿವೆ. ರಾಮನಗರ ನಗರದ ಗೆಜ್ಜಲಗುಡ್ಡೆಯಲ್ಲಿ ನಸುಕಿನ ಜಾವ 3ಗಂಟೆಗೆ ಮೇಲ್ಭಾಗದಿಂದ ಬಂಡೆಯೊಂದು ಉರುಳಿ ಮನೆಗಳಿಗೆ ಅಪ್ಪಳಿಸಿದ್ದು, ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಆದರೆ, ಮಹಮ್ಮದ್ ಗೌಸ್ ಎನ್ನುವವ ಕುಟುಂಬದ 5 ಮಂದಿಗೆ ತೀವ್ರ ಪೆಟ್ಟಾಗಿದ್ದು, ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಾಸಕ ಹೆಚ್.ಎ.ಇಕ್ಬಾಲ್‌ಹುಸೇನ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಇನ್ನು, ತುಮಕೂರು ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಮುಂದುವರೆದಿದ್ದು, ತುರುವೇಕೆರೆ ತಾಲೂಕಿನ ಹಲವಾರು ಕೆರೆಗಳು ಕೋಡಿ ಬಿದ್ದು ನೀರು ರಸ್ತೆ ಮೇಲೆ ಹರಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಯಿತು. ಡಿ.ಹೊಸಹಳ್ಳಿ ಗ್ರಾಮದ ಪಾರ್ವತಮ್ಮ ಎನ್ನುವವರ ಮನೆಯ ಗೋಡೆ ಬುಧವಾರ ರಾತ್ರಿ ಕುಸಿದಿದ್ದು, ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ಮನೆಯಲ್ಲಿ ಸಂಗ್ರಹಿಸಿದ ಧವಸ, ಧಾನ್ಯ ಸೇರಿ ಹಲವು ಪರಿಕರಗಳು ಹಾಳಾಗಿವೆ.

ಕೊಂಡಜ್ಜಿ ಕ್ರಾಸ್, ಸೊಪ್ಪನಹಳ್ಳಿ ಮಧ್ಯೆ ಕೊಂಡಜ್ಜಿ ಹಳ್ಳ ರಭಸವಾಗಿ ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆ ಬಂದ್ ಮಾಡಲಾಗಿದೆ. ಮಲ್ಲಾಘಟ್ಟ ಕೆರೆ ಕೋಡಿ ನೀರು ಹೆಚ್ಚಾಗಿರುವ ಹಿನ್ನೆಲೆ ಪೊಲೀಸರು ರಸ್ತೆ ನಿರ್ಭಂದಿಸಿ ಬ್ಯಾರಿಕೇಡ್ ಹಾಕಿದ್ದಾರೆ. ತುರುವೇಕೆರೆ ಪಟ್ಟಣದ ಮುನಿಯೂರು ಗೇಟ್ ಬಳಿಯ ಶಿಂಷಾ ನದಿ ತುಂಬಿ ಮುನಿಯೂರು ಗದ್ದೆ ಬಯಲಿನವರೆವಿಗೂ ನೀರು ಆವರಿಸಿಕೊಂಡು ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದೆ. ಶಿಂಷಾ ನದಿ ರಸ್ತೆ ಸೇತುವೆ ಎರಡೂ ಕಡೆ ಯಾವುದೇ ತಡೆಗೋಡೆ ನಿರ್ಮಿಸದೇ ಇರುವ ಕಾರಣ ವಾಹನ ಸವಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದೆ.

Share this article