ನಮಗೆ ಬ್ರ್ಯಾಂಡ್‌ ಬೆಂಗಳೂರು ಬೇಡ ಸುರಕ್ಷಿತ ನಗರ ಸಾಕು : ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌

ಸಾರಾಂಶ

ಸರ್ಕಾರ ನಮಗೆ ಬ್ರ್ಯಾಂಡ್‌ ಬೆಂಗಳೂರು ನೀಡುವುದು ಬೇಡ. ಸುರಕ್ಷಿತ ಬೆಂಗಳೂರು ನೀಡಿದರೆ ಸಾಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಗಿ ಹೇಳಿದ್ದಾರೆ.

ಬೆಂಗಳೂರು : ಸರ್ಕಾರ ನಮಗೆ ಬ್ರ್ಯಾಂಡ್‌ ಬೆಂಗಳೂರು ನೀಡುವುದು ಬೇಡ. ಸುರಕ್ಷಿತ ಬೆಂಗಳೂರು ನೀಡಿದರೆ ಸಾಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವ್ಯಂಗ್ಯವಾಗಿ ಹೇಳಿದ್ದಾರೆ.

ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದ ಸ್ಥಳಕ್ಕೆ ಗುರುವಾರ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕರಾದ ಡಾ। ಸಿ.ಎನ್‌.ಅಶ್ವತ್ಥನಾರಾಯಣ, ಬೈರತಿ ಬಸವರಾಜು ಅವರೊಂದಿಗೆ ಭೇಟಿ ನೀಡಿದ ಅವರು ಸಂತ್ರಸ್ತರು ಹಾಗೂ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಬಂದ ನಂತರ ಬ್ರ್ಯಾಂಡ್‌ ಬೆಂಗಳೂರು ಎಂಬ ಹೆಸರು ಹುಟ್ಟುಹಾಕಿದ್ದಾರೆ. ಆದರೆ ನಗರದಲ್ಲಿ ದಿನಕ್ಕೊಂದು ಅವಘಡ ಸಂಭವಿಸುತ್ತಿದೆ. ಬಾಬುಸಾಪಾಳ್ಯದಲ್ಲಿ ಕಟ್ಟಡ ಕುಸಿತವಾಗಿದ್ದು, ಎಂಟು ಅಮಾಯಕರು ಮೃತರಾಗಿದ್ದಾರೆ. ಇಲ್ಲಿನ 20 ಅಡಿ ರಸ್ತೆಗೆ ಹೆಚ್ಚೆಂದರೆ 3 ಮಹಡಿ ನಿರ್ಮಿಸಬಹುದು. ಆದರೆ 7 ಮಹಡಿ ನಿರ್ಮಿಸಲು ಹೊರಟಿದ್ದರಿಂದ ಅವಘಡ ನಡೆದಿದೆ. ಬಿಬಿಎಂಪಿ ಅಧಿಕಾರಿಗಳು ಇದನ್ನು ಸರಿಯಾಗಿ ನಿರ್ವಹಣೆ ಮಾಡಿದ್ದರೆ ಎಲ್ಲವೂ ಸರಿ ಇರುತ್ತಿತ್ತು ಎಂದರು.

ಬ್ರ್ಯಾಂಡ್‌ ಬೆಂಗಳೂರಿನ ಮಹಿಮೆ:

ಕಾಂಗ್ರೆಸ್‌ ಸರ್ಕಾರ ಇಂತಹ ಯಾವುದೇ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ವಿದ್ಯುತ್‌ ತಂತಿ ತಗುಲಿ ತಾಯಿ ಮತ್ತು ಮಗು ಮೃತಪಟ್ಟಾಗ ಅದಕ್ಕೆ ಇಲಿ ಕಾರಣ ಎಂದು ಹೇಳಿದ್ದರು. ಮಳೆ ನೀರಿನಲ್ಲಿ ಮಗು ಕೊಚ್ಚಿಕೊಂಡು ಹೋಗಿರುವುದು, ಮರ ಬೀಳುವುದರಿಂದ ಅನಾಹುತ ಮೊದಲಾದವು ಬ್ರ್ಯಾಂಡ್‌ ಬೆಂಗಳೂರಿನ ಮಹಿಮೆಯಿಂದ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬರುವ ರಸ್ತೆಯ ಎರಡೂ ಬದಿ ಕಸ ರಾಶಿಯಾಗಿ ಬಿದ್ದಿದೆ. ಅಂದರೆ ಉಪಮುಖ್ಯಮಂತ್ರಿಯಾಗಲೀ, ಮುಖ್ಯಮಂತ್ರಿಯಾಗಲಿ ಇಲ್ಲಿ ಯಾರಿಗೂ ಬೆಲೆ ಇಲ್ಲ. ಒಂದು ವಾರದಿಂದ ಸರಿಯಾಗಿ ಕಸ ವಿಲೇವಾರಿ ಮಾಡಿಲ್ಲ. ವಿದ್ಯುತ್‌ ಕಂಬಗಳಿಂದ ಇನ್ನೆಷ್ಟು ಜನ ಸಾಯುತ್ತಾರೆಂದು ಗೊತ್ತಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದರು.

ಮುನ್ನೆಚ್ಚರಿಕಾ ಕ್ರಮ ಕೈಗೊಂಡಿಲ್ಲ:

ಕಟ್ಟಡ ನಿರ್ಮಾಣದ ವಿಚಾರದಲ್ಲಿ ಸರ್ಕಾರ ಮಾರ್ಗಸೂಚಿ ರೂಪಿಸಬೇಕು. ಕಟ್ಟಡಗಳ ಬಗ್ಗೆ ಸದಾ ನಿಗಾ ಇರಿಸುವ ಕೆಲಸ ಮಾಡಬೇಕು. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಪ್ರತಿ ಮಳೆಗಾಲಕ್ಕೆ ಮುನ್ನ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಅದಕ್ಕೆ ಅಗತ್ಯ ಹಣ ಕೂಡ ಬಿಡುಗಡೆ ಮಾಡಿತ್ತು. ಆದರೆ ಈಗ ಸರ್ಕಾರ ಸಭೆ ನಡೆಸಿಲ್ಲ, ಪರಿಹಾರ ಕಾರ್ಯಾಚರಣೆಗೆ ರಾಜಕಾಲುವೆ ಹೂಳು ತೆಗೆಯಲು ಹಣ ಬಿಡುಗಡೆ ಮಾಡಿಲ್ಲ. ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಕಿಡಿಕಾರಿದರು.

Share this article