ಸರ್ಕಾರಿ ಉದ್ಯೋಗಕ್ಕೆ ಅರ್ಜಿ ವೇಳೆ ಹಿಂದಿನ ನೌಕರಿ ಬಹಿರಂಗ ಕಡ್ಡಾಯ

Published : Sep 06, 2025, 09:26 AM IST
Top 5 Govt Jobs Lats Date 2025

ಸಾರಾಂಶ

ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ವೇಳೆ ಈ ಹಿಂದೆ ಸರ್ಕಾರಿ, ಅರೆ-ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಯಾವುದೇ ಉದ್ಯೋಗದಿಂದ ವಜಾಗೊಂಡಿದ್ದರೆ, ಆ ಬಗ್ಗೆ ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ.

 ವೆಂಕಟೇಶ್ ಕಲಿಪಿ

 ಬೆಂಗಳೂರು :  ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ ವೇಳೆ ಈ ಹಿಂದೆ ಸರ್ಕಾರಿ, ಅರೆ-ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ಯಾವುದೇ ಉದ್ಯೋಗದಿಂದ ವಜಾಗೊಂಡಿದ್ದರೆ, ಆ ಬಗ್ಗೆ ಮಾಹಿತಿ ಬಹಿರಂಗಪಡಿಸುವುದು ಕಡ್ಡಾಯ. ಒಮ್ಮೆ ಸರ್ಕಾರಿ ಉದ್ಯೋಗದಿಂದ ವಜಾಗೊಂಡಿದ್ದರೆ ಮತ್ತೆ ಸರ್ಕಾರಿ ಉದ್ಯೋಗ ನೇಮಕಾತಿಗೆ ಅರ್ಹರಾಗುವುದಿಲ್ಲ ಎಂದು ಸ್ಪಷ್ಟಪಡಿಸಿ ಹೈಕೋರ್ಟ್‌ ಆದೇಶಿಸಿದೆ.

ಹಣ ದುರುಪಯೋಗ ಆರೋಪದ ಮೇಲೆ ಮಂಡ್ಯದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಉದ್ಯೋಗದಿಂದ ವಜಾಗೊಂಡ ವಿಚಾರ ಮುಚ್ಚಿಟ್ಟ ಹಿನ್ನೆಲೆಯಲ್ಲಿ ಕಿರಿಯ ಅಧಿಕಾರಿ ಹುದ್ದೆಯಿಂದ ತನ್ನನ್ನು ತೆಗೆದುಹಾಕಿದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್‌) ಕ್ರಮವನ್ನು ಹೈಕೋರ್ಟ್‌ ಏಕಸದಸ್ಯ ಪೀಠ ಎತ್ತಿಹಿಡಿತ್ತು.

ಈ ಆದೇಶ ರದ್ದು ಕೋರಿ ಬಿ.ಆರ್‌.ಚಲುವರಾಜ ಎಂಬಾತ ಸಲ್ಲಿಸಿದ್ದ ತಕರಾರು ಮೇಲ್ಮನವಿ ವಜಾಗೊಳಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ, ಕೆಎಸ್‌ಡಿಎಲ್‌ ಮತ್ತು ಏಕಸದಸ್ಯ ಪೀಠದ ಆದೇಶ ಪುರಸ್ಕರಿಸಿ ಹೀಗೆ ಸ್ಪಷ್ಟಪಡಿಸಿದೆ.

ದುರುಪಯೋಗ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಮಂಡ್ಯದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತದ ಉದ್ಯೋಗದಿಂದ ಚಲುವರಾಜ ಅವರು 2011ರ ಡಿ.10ರಂದು ವಜಾಗೊಂಡಿದ್ದರು. ಈ ವಿಚಾರ ಮುಚ್ಚಿಟ್ಟು ಕೆಎಸ್‌ಡಿಎಲ್‌ನ ಕಿರಿಯ ಅಧಿಕಾರಿ ಹುದ್ದೆಗೆ ನೇಮಕವಾಗಿದ್ದರು. ಮಾಹಿತಿ ತಿಳಿದ ಕೆಎಸ್‌ಡಿಎಲ್‌, ಸಹಕಾರ ಸಂಘದಿಂದ ದುರ್ನಡತೆ ಆರೋಪ ಕುರಿತು ಹೆಚ್ಚುವರಿ ದಾಖಲೆ ತರಿಸಿಕೊಂಡು, ಹೊಸ ಆರೋಪ ನಿಗದಿಪಡಿಸಿ ಇಲಾಖಾ ವಿಚಾರಣೆ ನಡೆಸಿತ್ತು. ವಾಸ್ತವಾಂಶ ಮುಚ್ಚಿಟ್ಟ ಆರೋಪ ದೃಢಪಟ್ಟಿದೆ ಎಂದು ವಿಚಾರಣಾಧಿಕಾರಿ ನೀಡಿದ ವರದಿ ಆಧರಿಸಿ ಚಲುವರಾಜ ಅವರನ್ನು ಕಿರಿಯ ಅಧಿಕಾರಿ ಹುದ್ದೆಯಿಂದ ಕೆಎಸ್‌ಡಿಎಲ್‌ ವಜಾಗೊಳಿಸಿದೆ ಎಂದು ಪೀಠ ಆದೇಶದಲ್ಲಿ ವಿವರಿಸಿದೆ.

ಅಲ್ಲದೆ, ಒಮ್ಮೆ ಸರ್ಕಾರಿ ಉದ್ಯೋಗದಿಂದ ವಜಾಗೊಂಡ ಅಭ್ಯರ್ಥಿ ಮತ್ತೆ ಸರ್ಕಾರಿ ಉದ್ಯೋಗಕ್ಕೆ ನೇಮಕವಾಗಲು ಅರ್ಹರಲ್ಲ ಎಂಬ ವಿಚಾರದ ಅರಿವು ಚಲುವರಾಜಗೆ ಇತ್ತು. ಸರ್ಕಾರಿ, ಅರೆ-ಸರ್ಕಾರಿ, ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿ ವಜಾಗೊಂಡಿಲ್ಲ ಎಂಬ ಷರತ್ತಿನ ಮೇಲೆ ಚಲುವರಾಜಗೆ ಕಿರಿಯ ಅಧಿಕಾರಿ ಹುದ್ದೆ ನೇಮಕಾತಿ ಪತ್ರವನ್ನು ಕೆಎಸ್‌ಡಿಎಲ್‌ ನೀಡಿತ್ತು. ಒಂದೊಮ್ಮೆ ಸುಳ್ಳು ಮಾಹಿತಿ ನೀಡಿರುವುದು ದೃಢಪಟ್ಟರೆ ಸೇವೆಯಿಂದ ವಜಾಗೊಳಿಸಲಾಗುತ್ತದೆ ಎಂದು ನೇಮಕಾತಿ ಪತ್ರದಲ್ಲಿ ಸ್ಪಷ್ಟವಾಗಿ ಕೆಎಸ್‌ಡಿಎಲ್‌ ತಿಳಿಸಿತ್ತು. ಹಾಗಾಗಿ, ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಯ ಉದ್ಯೋಗದಿಂದ ವಜಾಗೊಂಡಿದ್ದರೆ, ಆ ಕುರಿತ ಮಾಹಿತಿ ಬಹಿರಂಗಪಡಿಸುವುದು ಅಗತ್ಯ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದಲ್ಲಿ ಕೆಎಸ್‌ಡಿಎಲ್‌ನ ಕಿರಿಯ ಅಧಿಕಾರಿ ಉದ್ಯೋಗ ನೇಮಕಾತಿ ವೇಳೆ ಸಹಕಾರ ಸಂಘದ ಉದ್ಯೋಗದಿಂದ ವಜಾಗೊಂಡಿದ್ದ ವಿಚಾರವನ್ನು ಚಲುವರಾಜು ಮುಚ್ಚಿಟ್ಟಿರುವುದು ತಪ್ಪು. ಇದರಿಂದ ಆತನನ್ನು ಸೇವೆಯಿಂದ ವಜಾಗೊಳಿಸಿರುವ ಕೆಎಸ್‌ಡಿಲ್‌ ಕ್ರಮದಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ. ಈ ಕ್ರಮ ಪುರಸ್ಕರಿಸಿದ ಏಕ ಸದಸ್ಯ ಪೀಠದ ಆದೇಶ ಸಹ ಸೂಕ್ತವಾಗಿದೆ ಎಂದು ವಿಭಾಗೀಯ ಪೀಠವು ತೀರ್ಪಿನಲ್ಲಿ ಹೇಳಿದೆ.

ಪ್ರಕರಣವೇನು?:

ಚಲುವರಾಜ ಈ ಹಿಂದೆ ಮಂಡ್ಯದ ರೈತರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಉದ್ಯೋಗಿಯಾಗಿದ್ದರು. ಅಲ್ಲಿ 11.56 ಲಕ್ಷ ದುರುಪಯೋಗಪಡಿಸಿಕೊಂಡ ಆರೋಪ ಮೇಲೆ ಉದ್ಯೋಗದಿಂದ 2011ರ ಡಿ.10ರಂದು ವಜಾಗೊಂಡಿದ್ದರು. ಈ ಸಂಬಂಧ ಕ್ರಿಮಿನಲ್‌ ಪ್ರಕರಣ ಸಹ ದಾಖಲಾಗಿತ್ತು. ಈ ಸಂಬಂಧ ಪೊಲೀಸರು ಅಧೀನ ನ್ಯಾಯಾಲಯಕ್ಕೆ ನಂಬಿಕೆ ದ್ರೋಹದಡಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಕೆಎಸ್‌ಡಿಎಲ್‌ 2012ರ ಅ.16ರಂದು ಕಿರಿಯ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಈ ಹುದ್ದೆಗೆ ಬಿ.ಆರ್‌.ಚಲುವರಾಜ 2014ರ ಮೇ 26ರಂದು ನೇಮಕಗೊಂಡಿದ್ದರು. ಬಳಿಕ ಪೊಲೀಸ್‌ ಇಲಾಖೆಯಿಂದ ಅಭ್ಯರ್ಥಿ ನಡವಳಿಕೆ ಮತ್ತು ಪೂರ್ವಾಪರ ಬಗ್ಗೆ ಕೆಎಸ್‌ಡಿಎಲ್‌ ವರದಿ ಪಡೆದಿತ್ತು. ಚಲುವರಾಜ ವಿರುದ್ಧ ಬಾಕಿಯಿರುವ ಕ್ರಿಮಿನಲ್‌ ಪ್ರಕರಣ ಕುರಿತು ಪೊಲೀಸ್‌ ಇಲಾಖೆ ಮಾಹಿತಿ ನೀಡಿತ್ತು. ಈ ಕುರಿತು ಕೆಎಸ್‌ಡಿಎಲ್‌ ಇಲಾಖೆ ವಿಚಾರಣೆ ನಡೆಸಿತ್ತು. ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ 2019ರ ಜೂ.14ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿದ್ದ ಅರ್ಜಿಯನ್ನು ಏಕ ಸದಸ್ಯಪೀಠ ವಜಾಗೊಳಿಸಿದ್ದರಿಂದ ಚಲುವರಾಜ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

- ಸರ್ಕಾರಿ ನೌಕರಿಯಲ್ಲಿ ಮತ್ತೆ ನೌಕರಿ ಅರ್ಹತೆ ಇಲ್ಲ

- ಸರ್ಕಾರಿ ನೌಕರನೊಬ್ಬನ ಕೇಸಲ್ಲಿ ಕೋರ್ಟ್ ತೀರ್ಪು

- ಹಣ ದುರ್ಬಳಕೆ ಕೇಸಲ್ಲಿ ವಜಾಗೊಂಡಿದ್ದ ಉದ್ಯೋಗಿ

- ಇದನ್ನು ಮುಚ್ಚಿಟ್ಟು ಕೆಎಸ್ಡಿಎಲ್‌ಗೆ ಸೇರಿದ್ದ ಚಲುವರಾಜ

- ವಿಚಾರ ತಿಳಿದು ಕೆಲಸದಿಂದ ತೆಗೆದುಹಾಕಿದ ಕೆಎಸ್ಡಿಎಲ್‌ 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ