ಟೆಸ್ಟ್‌ಗೆ ರೋಹಿತ್‌ ಗುಡ್‌ಬೈ! ಅಂ.ರಾ ಟಿ20 ಬಳಿಕ ಟೆಸ್ಟ್‌ನಿಂದ ನಿವೃತ್ತಿ

Published : May 08, 2025, 05:22 AM ISTUpdated : May 08, 2025, 05:23 AM IST
Rohith Sharma

ಸಾರಾಂಶ

ಭಾರತದ ನಾಯಕ ರೋಹಿತ್‌ ಶರ್ಮಾ, ಈಗ ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಕಳೆದೊಂದು ವರ್ಷದಿಂದಲೂ ತಮ್ಮ ಟೆಸ್ಟ್‌ ಕ್ರಿಕೆಟ್‌ ಭವಿಷ್ಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

 ನವದೆಹಲಿ: ಕಳೆದ ವರ್ಷ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದ ಭಾರತದ ನಾಯಕ ರೋಹಿತ್‌ ಶರ್ಮಾ, ಈಗ ಟೆಸ್ಟ್‌ ಕ್ರಿಕೆಟ್‌ಗೂ ವಿದಾಯ ಘೋಷಿಸಿದ್ದಾರೆ. ಈ ಮೂಲಕ ಕಳೆದೊಂದು ವರ್ಷದಿಂದಲೂ ತಮ್ಮ ಟೆಸ್ಟ್‌ ಕ್ರಿಕೆಟ್‌ ಭವಿಷ್ಯದ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಬುಧವಾರ ಇನ್‌ಸ್ಟಾಗ್ರಾಂ ಸ್ಟೋರಿ ಮೂಲಕ 38 ವರ್ಷದ ರೋಹಿತ್ ನಿವೃತ್ತಿ ನಿರ್ಧಾರ ಪ್ರಕಟಿಸಿದರು. ‘ಟೆಸ್ಟ್ ಕ್ರಿಕೆಟ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದು ದೊಡ್ಡ ಗೌರವ. ಇಷ್ಟು ವರ್ಷ ನೀವು ತೋರಿದ ಪ್ರೀತಿ, ಬೆಂಬಲಕ್ಕೆ ಧನ್ಯವಾದಗಳು. ಇನ್ನು ಭಾರತ ಪರ ಏಕದಿನ ಕ್ರಿಕೆಟ್‌ನಲ್ಲಿ ಮುಂದುವರಿಯಲಿದ್ದೇನೆ’ ಎಂದಿದ್ದಾರೆ.

2013ರಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಬಾರಿ ಟೆಸ್ಟ್‌ ಆಡಿದ್ದ ರೋಹಿತ್, ಈ ವರೆಗೂ ಭಾರತ ಪರ 67 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. 12 ಶತಕ, 18 ಅರ್ಧಶತಕ ಸೇರಿದಂತೆ 40.57ರ ಸರಾಸರಿಯಲ್ಲಿ 4301 ರನ್‌ ಕಲೆಹಾಕಿದ್ದಾರೆ.

ಕಳಪೆ ಪ್ರದರ್ಶನ: ಕಳೆದೊಂದು ವರ್ಷದಿಂದ ತೀರಾ ಕಳಪೆ ಪ್ರದರ್ಶನ ನೀಡುತ್ತಿದ್ದ ರೋಹಿತ್‌, ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲೂ ಲಯಕ್ಕೆ ಮರಳಿರಲಿಲ್ಲ. ಆಸ್ಟ್ರೇಲಿಯಾ ವಿರುದ್ಧ 4ನೇ ಟೆಸ್ಟ್‌ನಲ್ಲಿ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಕಳಪೆ ಆಟದಿಂದಾಗಿ 5ನೇ ಪಂದ್ಯದಿಂದ ಹೊರಗುಳಿಯಬೇಕಾಯಿತು. ಇದರೊಂದಿಗೆ ಅವರ ಟೆಸ್ಟ್‌ ಬದುಕೇ ಮುಗಿಯಿತು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಸರಣಿ ಬಳಿಕ ರೋಹಿತ್‌ ತಮ್ಮ ನಿವೃತ್ತಿ ಸುದ್ದಿಯನ್ನು ಅಲ್ಲಗಳೆದಿದ್ದರು.

ನಾಯಕತ್ವ ರೇಸಲ್ಲಿ

ರಾಹುಲ್‌, ಬೂಮ್ರಾ

ರೋಹಿತ್‌ರಿಂದ ತೆರವಾದ ನಾಯಕತ್ವ ಸ್ಥಾನಕ್ಕೆ ಹಲವು ಮಂದಿ ರೇಸ್‌ನಲ್ಲಿದ್ದಾರೆ. ಜೂನ್‌ 20ರಿಂದ ಇಂಗ್ಲೆಂಡ್‌ ಸರಣಿ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ಹೊಸ ನಾಯಕನ ಆಯ್ಕೆಯಾಗಬೇಕಿದೆ. ಹಿರಿತನ, ಅನುಭವದ ಆಧಾರದಲ್ಲಿ ಟೆಸ್ಟ್‌ ನಾಯಕತ್ವ ನೀಡಲು ಬಯಸಿದರೆ ಜಸ್‌ಪ್ರೀತ್‌ ಬೂಮ್ರಾ, ಕೆ.ಎಲ್‌.ರಾಹುಲ್‌ ಮುಂಚೂಣಿಯಲ್ಲಿದ್ದಾರೆ. ಇವರಿಬ್ಬರೂ ತಲಾ 3 ಪಂದ್ಯಗಳಿಗೆ ನಾಯಕರಾಗಿದ್ದಾರೆ. ಇನ್ನು ಆಯ್ಕೆ ಸಮಿತಿಯು ಹೊಸ ಮುಖಗಳನ್ನು ನಾಯಕತ್ವಕ್ಕೆ ಪರಿಗಣಿಸಲು ಬಯಸಿದರೆ ಶುಭ್‌ಮನ್‌ ಗಿಲ್‌ ಅಥವಾ ರಿಷಭ್‌ ಪಂತ್‌ಗೆ ಹೊಣೆಗಾರಿಕೆ ಸಿಗಬಹುದು.

ಟೆಸ್ಟ್‌ನಲ್ಲಿ ರೋಹಿತ್‌ ಸಾಧನೆ

ಪಂದ್ಯ 67

ರನ್‌ 4301

ಗರಿಷ್ಠ ಸ್ಕೋರ್‌ 212

ಶತಕ 12

ಅರ್ಧಶತಕ 18

ಸಿಕ್ಸರ್ 88

PREV

Recommended Stories

ಸಾದಹಳ್ಳಿ ಸರ್ಕಾರಿ ಶಾಲಾ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಣೆ
೩೦೦ ವಾಹನಗಳಲ್ಲಿ ಧರ್ಮಸ್ಥಳಕ್ಕೆ ತೆರಳಿದ ಬಿಜೆಪಿ ರ್ಯಾಲಿ