ಕಾಮನ್ವೆಲ್ತ್‌, ಏಷ್ಯಾಡ್‌: ರಾಜ್ಯ ಕ್ರೀಡಾಳುಗಳಿಗೆ ತಲಾ ₹5 ಲಕ್ಷ

Published : Jul 17, 2026, 10:20 AM IST
Home Minister Parameshwar

ಸಾರಾಂಶ

ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟ, ಏಷ್ಯನ್‌ ಗೇಮ್ಸ್‌ ,ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸರ್ಕಾರದ ಯುವ ವ್ಯವಹಾರ  -ಕ್ರೀಡಾ ಸಚಿವಾಲಯ ಪ್ರಕಟಿಸುವ ಪಟ್ಟಿಯಲ್ಲಿರುವ ಕ್ರೀಡಾ ಪಟುಗಳಿಗೆ ತಲಾ ಐದು ಲಕ್ಷ ರು. ಪ್ರೋತ್ಸಾಹ ಧನ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ

 ಬೆಂಗಳೂರು :  ಮುಂಬರುವ ಕಾಮನ್‌ವೆಲ್ತ್‌ ಕ್ರೀಡಾಕೂಟ, ಏಷ್ಯನ್‌ ಗೇಮ್ಸ್‌ ಮತ್ತು ಏಷ್ಯನ್‌ ಪ್ಯಾರಾ ಗೇಮ್ಸ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಪ್ರಕಟಿಸುವ ಪಟ್ಟಿಯಲ್ಲಿರುವ ಕ್ರೀಡಾ ಪಟುಗಳಿಗೆ ತಲಾ ಐದು ಲಕ್ಷ ರು. ಪ್ರೋತ್ಸಾಹ ಧನ ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜತೆಗೆ ರಾಜ್ಯದ ಕ್ರೀಡಾಪಟುಗಳು ತರಬೇತಿ ಪಡೆಯಲು ಹಾಗೂ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಹಕಾರಿಯಾಗಲು ಶಾಲಾ-ಕಾಲೇಜುಗಳ (ವೃತ್ತಿಪರ ಕಾಲೇಜುಗಳು ಸೇರಿ) ವಾರ್ಷಿಕ ಹಾಜರಾತಿಯಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಪಟುಗಳಿಗೆ ಶೇ.15ರಷ್ಟು ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳಿಗೆ ಶೇ.25ರಷ್ಟು ಹಾಜರಾತಿ ವಿನಾಯ್ತಿ ನೀಡಿ ಸರ್ಕಾರ ಆದೇಶಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉಪ ಮುಖ್ಯಮಂತ್ರಿಗಳೂ ಆದ ಕಂದಾಯ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್‌, ಜು.23ರಿಂದ ಆ.2ರವರೆಗೆ ಗ್ಲಾಸ್ಕೋದಲ್ಲಿ ಕಾಮನ್‌ವೆಲ್ತ್‌, ಸೆ.9ರಿಂದ ಅ.4ರವರೆಗೆ ಜಪಾನಿನ ನಗೋಯಾದಲ್ಲಿ ಏಷ್ಯನ್‌ ಕ್ರೀಡಾ ಕೂಟ ಹಾಗೂ ಅ.18ರಿಂದ 24ರವರೆಗೆ ಏಷ್ಯನ್‌ ಪ್ಯಾರಾ ಗೇಮ್ಸ್‌ ನಡೆಯಲಿದೆ. ಈ ಕ್ರೀಡಾ ಕೂಟದಲ್ಲಿ ರಾಜ್ಯದಿಂದ ಸುಮಾರು 40 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ. ಇದಕ್ಕೆ ಅಂದಾಜು 2 ಕೋಟಿ ರು. ವೆಚ್ಚವನ್ನು ಸರ್ಕಾರ ಭರಿಸಲಿದೆ. ಇಂಥ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅರ್ಹತೆ ಪಡೆಯುವುದೇ ಗಣನೀಯ ಸಾಧನೆಯಾಗಿರುವ ಕಾರಣ ರಾಜ್ಯ ಪ್ರತಿನಿಧಿಸುವ ಎಲ್ಲ ಕ್ರೀಡಾಪಟುಗಳಿಗೆ ತಲಾ 5 ಲಕ್ಷ ರು. ಪ್ರೋತ್ಸಾಹ ಧನ ಮಂಜೂರು ಮಾಡಲಾಗುವುದು ಎಂದು ವಿವರಿಸಿದರು.

ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಲ್ಲಿ ಚಿನ್ನದ ಪದಕ ವಿಜೇತ ಕ್ರೀಡಾಪಟುಗಳಿಗೆ 35 ಲಕ್ಷ ರು., ಬೆಳ್ಳಿ ಪದಕ ವಿಜೇತರಿಗೆ 25 ಲಕ್ಷ ರು. ಹಾಗೂ ಕಂಚಿನ ಪದಕ ವಿಜೇತರಿಗೆ 15 ಲಕ್ಷ ರು. ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದರು.

ಪದಕ ವಿಜೇತರಿಗೆ ಶೇ.5 ಕೃಪಾಂಕ

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ಶೇ.5ರಷ್ಟು ಕೃಪಾಂಕವನ್ನು ವೃತ್ತಿಪರ, ಪದವಿ ಮತ್ತು ಉನ್ನತ ಶಿಕ್ಷಣ ಪ್ರವೇಶದಲ್ಲಿ ನೀಡಲಾಗುವುದು. ಶೀಘ್ರದಲ್ಲಿ ಈ ಕುರಿತು ಪ್ರತ್ಯೇಕ ಆದೇಶ ಹೊರಡಿಸಲಾಗುವುದು ಎಂದು ಸಚಿವರು ತಿಳಿಸಿದರು. ಕ್ರೀಡಾಕೂಟಗಳಿಗೆ ತರಬೇತುದಾರರ ಕೊರತೆ ನೀಗಿಸಲು ರಾಜ್ಯಾದ್ಯಂತ ಶೀಘ್ರದಲ್ಲೇ 50 ಕ್ರೀಡಾ ತರಬೇತುದಾರರ ನೇಮಕಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದರು.

ಆ.29ರಂದು ಏಕಲವ್ಯ, ಕ್ರೀಡಾ ಪ್ರಶಸ್ತಿ ಪ್ರದಾನ:

ಕಳೆದೆರಡು ವರ್ಷಗಳಿಂದ ಬಾಕಿ ಉಳಿದಿರುವ ಏಕಲವ್ಯ ಕ್ರೀಡಾರತ್ನ, ಕ್ರೀಡಾ ಪೋಷಕ ಹಾಗೂ ಜೀವಮಾನ ಸಾಧನೆ ಪ್ರಶಸ್ತಿಗಳನ್ನು ಬರುವ ಆ.29 ರಂದು (ಹಾಕಿ ಜಾದೂಗಾರ ಧ್ಯಾನ್ ಚಂದ್ ಜನ್ಮದಿನದ ಅಂಗವಾಗಿ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾ ದಿನಾಚರಣೆ) ಪ್ರದಾನ ಮಾಡಲು ದಿನಾಂಕ ನಿಗದಿಪಡಿಸಲಾಗಿದೆ.

ಮೈಸೂರಿನಲ್ಲಿ ವೆಲೋಡ್ರೋಮ್ ನಿರ್ಮಾಣ:

ಸೈಕ್ಲಿಂಗ್ ಕ್ರೀಡೆಗೆ ಉತ್ತೇಜನ ನೀಡಲು ಮೈಸೂರಿನಲ್ಲಿ 17 ಎಕರೆ ಜಾಗ ಗುರುತಿಸಲಾಗಿದ್ದು, ಬಜೆಟ್‍ನಲ್ಲಿ ಘೋಷಿಸಿದಂತೆ ವೆಲೋಡ್ರೋಮ್ ನಿರ್ಮಾಣ ಕಾರ್ಯ ಶೀಘ್ರ ಆರಂಭವಾಗಲಿದೆ. ವಿಜಯಪುರ, ಬಾಗಲಕೋಟೆ ಮತ್ತು ಗದಗ ಭಾಗದ ಕ್ರೀಡಾಪಟುಗಳಿಗೆ ಈಗಾಗಲೇ ಸೈಕಲ್‍ ವಿತರಿಸಲಾಗಿದೆ.

ಸಿಇಟಿ ಮೀಸಲಾತಿ:

ಪ್ರಸ್ತುತ ವರ್ಷ ಕ್ರೀಡಾ ಕೋಟಾದಡಿ ಸುಮಾರು 115 ಕ್ರೀಡಾಪಟು ವಿದ್ಯಾರ್ಥಿಗಳಿಗೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಸೀಟು ಹಂಚಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ವಿವರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿ ನವೀನ್ ರಾಜ್ ಸಿಂಗ್‌, ಆಯುಕ್ತ ಎಂ.ಎನ್‌. ಅನುಚೇತ್‌ ಉಪಸ್ಥಿತರಿದ್ದರು.

5000 ಕೋಟಿ ರು. ವೆಚ್ಚದಲ್ಲಿ ಕಂಠೀರವ ಕ್ರೀಡಾಂಗಣ ಅಭಿವೃದ್ಧಿ

ಬೆಂಗಳೂರಿನ ಕಂಠೀರವ ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟದ ಸೌಲಭ್ಯಗಳೊಂದಿಗೆ ಪಿಪಿಪಿ ಮಾದರಿಯಲ್ಲಿ ಸುಮಾರು 5 ಸಾವಿರ ಕೋಟಿ ರು. ಅಂದಾಜು ವೆಚ್ಚದಲ್ಲಿ ಪುನರಾಭಿವೃದ್ಧಿಗೆ ಯೋಜನೆ ರೂಪಿಸಲಾಗುತ್ತಿದ್ದು, ಶೀಘ್ರ ಸಂಪುಟದ ಅನುಮೋದನೆ ಪಡೆಯಲಾಗುವುದು ಎಂದು ಸಚಿವರು ತಿಳಿಸಿದರು.

ಅಂತಾರಾಷ್ಟ್ರೀಯ ಯುವಜನೋತ್ಸವ

ಡಿಸೆಂಬರ್, ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಅದ್ಧೂರಿಯಾಗಿ ‘ಅಂತರರಾಷ್ಟ್ರೀಯ ಯುವಜನೋತ್ಸವ’ ಆಯೋಜಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ವಿವಿಧ ದೇಶಗಳ ಯುವಜನರು ಇದರಲ್ಲಿ ಭಾಗವಹಿಸಲಿದ್ದಾರೆ, ನಮ್ಮ ಸಂಸ್ಕೃತಿ, ಕ್ರೀಡೆ ಮತ್ತು ವಿಚಾರಧಾರೆಗಳ ವಿನಿಮಯಕ್ಕೆ ಇದು ಸಾಕ್ಷಿಯಾಗಲಿದೆ ಎಂದು ಸಚಿವರು ಹೇಳಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮಿಸ್‌ ಯೂನಿವರ್ಸ್‌ ಸ್ಪರ್ಧೆಗೆ ಉಡುಪಿಯ ಯುವತಿ ಆಯ್ಕೆ
‘ಎ’ ದೇಗುಲಗಳ ನಿಶ್ಚಿತ ಠೇವಣಿ ಅವುಗಳ ಅಭಿವೃದ್ಧಿಗೇ ಬಳಕೆ : ಪರಂ