;Resize=(412,232))
ಬೆಂಗಳೂರು : ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ರಾಜ್ಯ ಸರ್ಕಾರ ಶುಕ್ರವಾರ 600 ಕೋಟಿ ರು. ಬಿಡುಗಡೆ ಮಾಡಿದೆ.
ಏ.16 ರವರೆಗೆ ಖರೀದಿ ಮಾಡಿದ್ದ ರಾಗಿ ಮತ್ತು ಏ.23 ರವರೆಗೂ ಖರೀದಿ ಮಾಡಿದ್ದ ಜೋಳದ ಬಾಬ್ತು 600 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಆದರೆ ರಾಗಿ ಮಾರಾಟ ಮಾಡಿದ್ದ ರೈತರಿಗೆ ಇನ್ನೂ 700 ಕೋಟಿ ರು. ಮತ್ತು ಜೋಳ ಮಾರಾಟ ಮಾಡಿದ್ದ ರೈತರಿಗೆ 400 ಕೋಟಿ ರು. ಸೇರಿ ಸುಮಾರು 1100 ಕೋಟಿ ರು. ಬಾಕಿ ಉಳಿಸಿಕೊಳ್ಳಲಾಗಿದೆ.
ಜೋಳದ ಬಾಬ್ತು ಬಳ್ಳಾರಿ ಜಿಲ್ಲೆಯ 3926 ರೈತರಿಗೆ 73 ಕೋಟಿ ರು, ರಾಯಚೂರು ಜಿಲ್ಲೆಯ 4,842 ರೈತರಿಗೆ 89 ಕೋಟಿ ರು. ಜಮೆಯಾಗಿದೆ. ರಾಗಿ ಮಾರಾಟ ಮಾಡಿದ್ದ ಹಾಸನ ಜಿಲ್ಲೆಯ 7,758 ರೈತರಿಗೆ 86 ಕೋಟಿ, ತುಮಕೂರಿನ 7,190 ರೈತರಿಗೆ 78 ಕೋಟಿ, ಮೈಸೂರಿನ 4,616 ರೈತರಿಗೆ 50 ಕೋಟಿ, ಚಿಕ್ಕಮಗಳೂರಿನ 3,425 ರೈತರಿಗೆ 41 ಕೋಟಿ, ಚಿತ್ರದುರ್ಗ ಜಿಲ್ಲೆಯ 2,322 ರೈತರಿಗೆ 27 ಕೋಟಿ ರು. ಸೇರಿ 15 ಜಿಲ್ಲೆಯ 38,388 ರೈತರಿಗೆ 436 ಕೋಟಿ ರು. ಜಮೆಯಾಗಿದೆ.
ರಾಗಿ ಮಾರಾಟ ಮಾಡಿದ್ದ ‘1 ಲಕ್ಷ ರಾಗಿ ರೈತರಿಗೆ 1611 ಕೋಟಿ ರುಪಾಯಿ ಬಾಕಿ’ ಉಳಿಸಿಕೊಳ್ಳಲಾಗಿದೆ ಎಂದು ಜೂ.3 ರಂದು ‘ಕನ್ನಡಪ್ರಭ’ ವಿಶೇಷ ವರದಿ ಪ್ರಕಟಿಸಲಾಗಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಜೂ.16 ರಂದು 650 ಕೋಟಿ ರು. ಮಾತ್ರ ಬಿಡುಗಡೆಗೊಳಿಸಿತ್ತು. ಆದರೆ ಜೋಳ ಮಾರಿದ್ದ 28 ಸಾವಿರಕ್ಕೂ ಅಧಿಕ ರೈತರಿಗೆ 767 ಕೋಟಿ ರು. ಬಾಕಿ ಉಳಿಸಿಕೊಂಡಿತ್ತು.
ಆಗ ‘ಬೆಂಬಲ ಬೆಲೆಯ ಬಲೆಗೆ ಸಿಲುಕಿ 1.40 ಲಕ್ಷ ರೈತರು ಪರದಾಟ‘ ಎಂದು ಜೂ.17 ರಂದು ‘ಕನ್ನಡಪ್ರಭ’ ಮತ್ತೊಂದು ವಿಶೇಷ ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತ ಸರ್ಕಾರ ಇದೀಗ ಬಾಕಿಯಲ್ಲಿ 600 ಕೋಟಿ ರು. ಬಿಡುಗಡೆ ಮಾಡಿದೆ. ಆದರೂ, ರೈತರಿಗೆ ಇನ್ನೂ 1100 ಕೋಟಿ ರುಪಾಯಿಗೂ ಅಧಿಕ ಹಣ ಬಾಕಿ ಉಳಿಸಿಕೊಳ್ಳಲಾಗಿದೆ.