ಕಾವೇರಿ ಹೋರಾಟಕ್ಕೆ ಸ್ಯಾಂಡಲ್‌ವುಡ್‌ ಬೇಷರತ್ ಬೆಂಬಲ: ಜಯಮಾಲ

Published : Jul 31, 2026, 12:42 PM IST
jayamala

ಸಾರಾಂಶ

‘ಕಾವೇರಿ ನೀರಿನ ಹಂಚಿಕೆ ವಿಚಾರ ಚರ್ಚಿಸಲು ಕನ್ನಡ ಚಿತ್ರರಂಗ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಹೇಳಿದ್ದಾರೆ.

 ಬೆಂಗಳೂರು :  ‘ಕಾವೇರಿ ನೀರಿನ ಹಂಚಿಕೆ ವಿಚಾರ ಚರ್ಚಿಸಲು ಕನ್ನಡ ಚಿತ್ರರಂಗ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಅವರನ್ನು ಭೇಟಿ ಮಾಡುವ ಪ್ರಯತ್ನ ಮಾಡಲಿದೆ’ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲ ಹೇಳಿದ್ದಾರೆ.

ಕನ್ನಡ ಚಿತ್ರರಂಗದವರಾದ ನಾವು ಸಂಪೂರ್ಣವಾಗಿ ರೈತರ ಪರ

ಕಲಾವಿದರ ಸಂಘ, ನಿರ್ಮಾಪಕ ಸಂಘ ಹಾಗೂ ಪ್ರದರ್ಶಕರ ಸಂಘದ ಬೆಂಬಲದೊಂದಿಗೆ ಗುರುವಾರ ವಾಣಿಜ್ಯ ಮಂಡಳಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಜಯಮಾಲ ಅವರು, ‘ಕನ್ನಡ ಚಿತ್ರರಂಗದವರಾದ ನಾವು ಸಂಪೂರ್ಣವಾಗಿ ರೈತರ ಪರವಾಗಿದ್ದೇವೆ. ಮಹದಾಯಿ, ಕಳಸಾ ಬಂಡೂರಿ ಹೋರಾಟದಲ್ಲೂ ನಾಡಿನ ರೈತರ ಪರವಾಗಿ ಚಿತ್ರರಂಗ ಇತ್ತು. ಭಾಷೆ, ನೆಲ, ಜಲದ ವಿಚಾರದಲ್ಲಿ ಚಿತ್ರರಂಗ ಒಗ್ಗಟ್ಟಿನಿಂದ ನಾಡಿನ ರೈತರ ಪರವಾಗಿ ಇರುತ್ತದೆ. ತಮಿಳುನಾಡಿನ ಮುಖ್ಯಮಂತ್ರಿ ವಿಜಯ್‌ ಅವರಿಗೂ ಕರ್ನಾಟಕದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಕೂಡ ನಮ್ಮ ಪರವಾಗಿ ಇರಲಿ ಅಂತ ದೇವರಲ್ಲಿ ಕೇಳುತ್ತೇನೆ. ಯಾಕೆಂದರೆ ವಿಜಯ್‌ ಅವರು ಕೂಡ ಚಿತ್ರರಂಗದವರೇ. ಈ ವಿಚಾರದಲ್ಲಿ ಸಿಎಂ ವಿಜಯ್‌ ಅವರನ್ನು ನಾವು ಭೇಟಿ ಮಾಡುವ ಪ್ರಯತ್ನ ಮಾಡುತ್ತೇವೆ’ ಎಂದರು.

ಕಾವೇರು ನೀರು ನಿಯಂತ್ರಣಾ ಮಂಡಳಿ ಅವೈಜ್ಞಾನಿಕವಾದ ತೀರ್ಪು

ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಮಾತನಾಡಿ, ‘ಕಾವೇರು ನೀರು ನಿಯಂತ್ರಣಾ ಮಂಡಳಿ ಅವೈಜ್ಞಾನಿಕವಾದ ತೀರ್ಪು ಕೊಟ್ಟಿದೆ. ತೀರ್ಪು ಕೊಡುವ ಮೊದಲು ಕರ್ನಾಟಕಕ್ಕೆ ಬಂದು ಪರಿಸ್ಥಿತಿಯನ್ನು ಆಲಿಸಬೇಕಿತ್ತು. ಮಳೆ ಇಲ್ಲದೆ ಕುಡಿಯೋ ನೀರಿಗೂ ಹಾಹಾಕಾರ ಉಂಟಾಗಿದೆ. ಇಂಥ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಹೇಗೆ ಸಾಧ್ಯ? ಕಾವೇರಿ ನೀರಿನ ಹೋಟಾದಲ್ಲಿ ಚಿತ್ರರಂಗ ಸ್ಪಂದಿಸುತ್ತಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು. ಡಾ. ರಾಜ್‌ಕುಮಾರ್‌ ಅವರ ಕಾಲದಿಂದಲೂ ನಾವು ಕನ್ನಡ ನಾಡಿನ ರೈತರ ಜೊತೆಗೇ ಇದ್ದೇವೆ’ ಎಂದು ಹೇಳಿದರು.

ಹಿರಿಯ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮಾತನಾಡಿ, ‘ಕಾವೇರಿ ಹೋರಾಟದ ವಿಚಾರದಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿ ಏನೇ ನಿರ್ಧಾರ ತೆಗೆದುಕೊಂಡರೂ ಕಲಾವಿದರು ಸೇರಿ ಇಡೀ ಚಿತ್ರರಂಗ ವಾಣಿಜ್ಯ ಮಂಡಳಿ ಪರವಾಗಿರುತ್ತದೆ. ಕಾವೇರಿ ನೀರಿನ ವಿಚಾರಕ್ಕೆ ನಮ್ಮ ಚಿತ್ರರಂಗದ ದಿಗ್ಗಜ ಅಂಬರೀಶ್‌ ಅವರು ಸಚಿವ ಸ್ಥಾನಕ್ಕೇ ರಾಜಿನಾಮೆ ಕೊಟ್ಟಿದ್ದರು’ ಎಂದು ನೆನಪಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕುಮಾರಸ್ವಾಮಿ ಎಚ್‌ಎಂಟಿ ವಾಚ್‌ನಲ್ಲಿ ತಾಯಿ ಪೋಟೋ
ಬುರುಡೆ ಕೇಸ್‌ : 3 ಅಸ್ಥಿಪಂಜರಗಳ ಡಿಎನ್‌ಎ ದೃಢ