ಹಿರಿಯ ಪತ್ರಕರ್ತ, ಬರಹಗಾರ ಡಿ.ಉಮಾಪತಿ ಅವರಿಗೆ ವಡ್ಡರ್ಸೆ ರಘುರಾಮಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ

Published : Dec 06, 2024, 07:48 AM IST
Vidhan soudha

ಸಾರಾಂಶ

ಕನ್ನಡಪ್ರಭದ ದೆಹಲಿ ಪ್ರತಿನಿಧಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ, ಬರಹಗಾರ ಡಿ.ಉಮಾಪತಿ ಅವರಿಗೆ ರಾಜ್ಯ ಸರ್ಕಾರದ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ

ಬೆಂಗಳೂರು : ಕನ್ನಡಪ್ರಭದ ದೆಹಲಿ ಪ್ರತಿನಿಧಿಯಾಗಿ ಸುದೀರ್ಘ ಅವಧಿಗೆ ಸೇವೆ ಸಲ್ಲಿಸಿದ್ದ ಹಿರಿಯ ಪತ್ರಕರ್ತ, ಬರಹಗಾರ ಡಿ.ಉಮಾಪತಿ ಅವರಿಗೆ ರಾಜ್ಯ ಸರ್ಕಾರದ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪ್ರಸಕ್ತ ವರ್ಷದಿಂದ ಆರಂಭಿಸಿರುವ ವಡ್ಡರ್ಸೆ ರಘುರಾಮಶೆಟ್ಟಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿಗೆ ಡಿ.ಉಮಾಪತಿ ಅವರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಇಲಾಖೆ ಆಯುಕ್ತ ಹೇಮಂತ್‌ ಎಂ.ನಿಂಬಾಳ್ಕರ್‌ ತಿಳಿಸಿದ್ದಾರೆ.

ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಕುರಿತು ವರದಿ, ವಿಶೇಷ ಲೇಖನಗಳ ಪ್ರಕಟಣೆಯನ್ನು ಗುರುತಿಸಿ, ಗೌರವಿಸುವ ಉದ್ದೇಶದಿಂದ ಮುಖ್ಯಮಂತ್ರಿಯವರು 2024ರ ಆಯವ್ಯಯದಲ್ಲಿ ಹಿರಿಯ ಪತ್ರಕರ್ತ ‘ವಡ್ಡರ್ಸೆ ರಘುರಾಮಶೆಟ್ಟಿ’ ಅವರ ಹೆಸರಿನಲ್ಲಿ ಸಾಮಾಜಿಕ ನ್ಯಾಯ ಪತ್ರಿಕೋದ್ಯಮ ಪ್ರಶಸ್ತಿ ಘೋಷಿಸಿದ್ದರು. ನ್ಯಾ.ಅಶೋಕ ಹಿಂಚಿಗೇರಿ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿದ್ದ ಪ್ರಶಸ್ತಿ ಆಯ್ಕೆ ಸಮಿತಿಯು ಒಮ್ಮತದಿಂದ ಹಿರಿಯ ಪತ್ರಕರ್ತ ಡಿ.ಉಮಾಪತಿ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿಯು 2 ಲಕ್ಷ ರು.ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

1959 ಮಾರ್ಚ್ 18ರಂದು ಚಿತ್ರದುರ್ಗ ಜಿಲ್ಲೆಯಲ್ಲಿ ಜನಿಸಿದ ಡಿ.ಉಮಾಪತಿ ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಬಿಎ ಪದವಿ ಪಡೆದಿದ್ದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯಲ್ಲಿ 2ನೇ ರ‍್ಯಾಂಕ್‌ ಗಳಿಸಿದ್ದರು.

ಕನ್ನಡಪ್ರಭದಲ್ಲಿ ಪತ್ರಕರ್ತರಾಗಿ ಪತ್ರಿಕೋದ್ಯಮ ಆರಂಭಿಸಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವರು, ನಂತರ ಪ್ರಜಾವಾಣಿಯಲ್ಲಿ ದೆಹಲಿ ವರದಿಗಾರರಾಗಿ ಕೆಲಸ ನಿರ್ವಹಿಸಿದ್ದಾರೆ. ಈಟಿವಿಯ ದೆಹಲಿ ಪ್ರತಿನಿಧಿಯಾಗಿಯೂ ಕಾರ್ಯನಿರ್ವಹಿಸಿದ್ದರು. ಸಂಸತ್ತಿನ ವರದಿ, ಚುನಾವಣಾ ವಿಶ್ಲೇಷಣೆಗಳು, ಸುಪ್ರೀಂ ಕೋರ್ಟ್‌ನಲ್ಲಿ ನದಿ ನೀರು ನ್ಯಾಯಾಧೀಕರಣ ವ್ಯಾಜ್ಯಗಳ, ರಾಷ್ಟ್ರಮಟ್ಟದ ರಾಜಕೀಯ ಬೆಳವಣಿಗೆಗಳು, ಮತ್ತು ವಿದೇಶಾಂಗ ಸಚಿವರ ವಿದೇಶ ಪ್ರವಾಸದ ಜೊತೆಗೂಡಿ ರಾಜತಾಂತ್ರಿಕ ವರದಿಗಾರಿಕೆಯಲ್ಲಿ ವಿಶಿಷ್ಟ ಅನುಭವ ಓದುಗರಿಗೆ ನೀಡಿದ್ದಾರೆ.

ಡಿ.ಉಮಾಪತಿ ಅವರು ಆಂದೋಲನ, ರೈತ ಚಳವಳಿ, ವಿಜಯ ಕರ್ನಾಟಕ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ವಾರ್ತಾಭಾರತಿ ಪತ್ರಿಕೆಗಳಿಗೆ ಅಂಕಣ ಬರಹಗಾರರಾಗಿಯೂ, ಪ್ರಸ್ತುತ ನ್ಯಾಯಪಥ(ಗೌರಿ ಮೀಡಿಯಾ) ಮತ್ತು ಈದಿನ ವೆಬ್ ಜರ್ನಲ್ ಸಂದರ್ಶಕ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ’ದೆಹಲಿ ನೋಟ’ , ’ಪದಕುಸಿಯೇ ನೆಲವಿಲ್ಲ’ ಉಮಾಪತಿ ಅವರ ಎರಡು ಮಹತ್ವದ ಕೃತಿಗಳು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌
ನೀರಿನ ಬಿಲ್‌ ಬಾಕಿ ಪಾವತಿಸಲು ‘ಜಲ ಸಮಾಧಾನ’ ಹೆಸರಲ್ಲಿ ಒಟಿಎಸ್‌: 6.21ಲಕ್ಷ ಜನಕ್ಕೆ ಲಾಭ