ಬೆಂಗಳೂರು : ರಾಜ್ಯದ ಸರ್ಕಾರಿ ಸಾರಿಗೆ ಬಸ್‌ಗಳಲ್ಲಿ 500 ಕೋಟಿ ಉಚಿತ ಪ್ರಯಾಣ ಸೇವೆ ನೀಡಿದ ಕಾರಣಕ್ಕಾಗಿ ಶಕ್ತಿ ಯೋಜನೆ ‘ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್-ವರ್ಲ್ಡ್ ರೆಕಾರ್ಡ್ ಆಫ್ ಎಕ್ಸಲೆನ್ಸ್’ಗೆ ಸೇರ್ಪಡೆಯಾಗಿದೆ.
ಇತ್ತೀಚೆಗಷ್ಟೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಶಕ್ತಿ ಯೋಜನೆ ಸೇರ್ಪಡೆಯಾಗಿತ್ತು. ಇದೀಗ ಅಂತಾರಾಷ್ಟ್ರೀಯ ಬುಕ್ ಆಫ್ ರೆಕಾರ್ಡ್ಸ್‌ಗೂ ಸೇರ್ಪಡೆಯಾಗುವ ಮೂಲಕ ದಾಖಲೆ ಬರೆದಿದೆ. ಶಕ್ತಿ ಯೋಜನೆ ಯಶಸ್ವಿಗೊಳಿಸಿ ವಿಶ್ವಮಟ್ಟದಲ್ಲಿ ಗುರುತಿಸುವಂತೆ ಮಾಡಿದ ನಾಲ್ಕೂ ನಿಗಮಗಳ ಅಧಿಕಾರಿ, ಸಿಬ್ಬಂದಿ, ಕಾರ್ಮಿಕ ಮುಖಂಡರು, ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಾಮಲಿಂಗಾರೆಡ್ಡಿ, ಶಕ್ತಿ ಯೋಜನೆ ರಾಜ್ಯದ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಮತ್ತು ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ. ಶಕ್ತಿ ಯೋಜನೆ ಮಾದರಿಯಲ್ಲೇ ದೇಶದ ವಿವಿಧ ರಾಜ್ಯಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದು ಶಕ್ತಿ ಯೋಜನೆ ಯಶ ಕಂಡಿರುವುದಕ್ಕೆ ಸಾಕ್ಷಿ. ಈಗಾಗಲೇ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಯಾಗಿದ್ದ ಯೋಜನೆ ಇದೀಗ ಮತ್ತೊಂದು ದಾಖಲೆಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದ್ದಾರೆ.