ಹಿಜಾಬ್‌ ವಿವಾದದ ಬಗ್ಗೆ ಡಾ। ಜಿ.ಪರಮೇಶ್ವರ್‌ರನ್ನು ಕೇಳಿ : ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ

Published : Feb 04, 2025, 04:37 AM IST
Madhu bangarappa

ಸಾರಾಂಶ

ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಾನೇನೂ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರನ್ನು ಹೇಳಿ, ಅವರು ಉತ್ತರ ಕೊಡುತ್ತಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

 ಬೆಂಗಳೂರು : ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ನಾನೇನೂ ಹೇಳಿಕೆ ನೀಡುವುದಿಲ್ಲ. ಈ ಬಗ್ಗೆ ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರನ್ನು ಹೇಳಿ, ಅವರು ಉತ್ತರ ಕೊಡುತ್ತಾರೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತ ಮಾಹಿತಿ ನೀಡಲು ನಗರದಲ್ಲಿ ಸೋಮವಾರ ಕರೆದಿದ್ದ ಸುದ್ದಿಗೋಷ್ಠಿ ವೇಳೆ, ಹಿಜಾಬ್‌ ವಿವಾದ ಕುರಿತು ನ್ಯಾಯಾಲಯದಲ್ಲಿರುವ ಅರ್ಜಿಯನ್ನು ರಾಜ್ಯ ಸರ್ಕಾರ ಹಿಂಪಡೆಯುವ ವಿಚಾರ ಏನಾಯಿತು ಎಂಬ ಪ್ರಶ್ನೆಗೆ, ಈ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ ಮಾಡಿ ಉತ್ತರ ಕೊಡುತ್ತೇನೆ ಎಂದರು.

ಈ ಬಾರಿ ಪರೀಕ್ಷೆಯಲ್ಲಿ ಹಿಜಾಬ್‌ ಧರಿಸಿ ಬರಲು ಅವಕಾಶ ಇರುತ್ತಾ, ಇಲ್ಲವಾ ಎಂಬ ಪ್ರಶ್ನೆಗೆ, ಈ ಬಗ್ಗೆ ನಾನು ಏನೂ ಹೇಳಲಾಗುವುದಿಲ್ಲ. ಗೃಹ ಸಚಿವರು ಇದಕ್ಕೆ ಉತ್ತರ ಕೊಡುತ್ತಾರೆ. ಅವರನ್ನೇ ಕೇಳಿ. ಅಲ್ಲದೆ, ಈ ವಿಚಾರ ನ್ಯಾಯಾಲಯದಲ್ಲಿದೆ. ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದ್ದರೂ ಶಾಲಾ ಮಾನ್ಯತೆ ನವೀಕರಣ ವಿಚಾರದಲ್ಲಿನ ಸಮಸ್ಯೆಗಳು ಮುಂದುವರೆದಿವೆಯಲ್ಲಾ ಎಂಬ ಪ್ರಶ್ನೆಗೆ, ಮಾನ್ಯತೆ ನವೀಕರಣಕ್ಕೆ ಇದ್ದ 67 ಮಾನದಂಡಗಳನ್ನು ಸರಳೀಕರಿಸಿ 47ಕ್ಕೆ ಇಳಿಸಿದ್ದೇವೆ. ನಮ್ಮ ಇಲಾಖೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಕಂದಾಯ ಇಲಾಖೆಯಿಂದ ಪಡೆಯಬೇಕಿರುವ ಶಾಲಾ ಜಾಗ ಶೈಕ್ಷಣಿಕ ಉದ್ದೇಶಕ್ಕಾಗಿ ಭೂ ಪರಿವರ್ತನೆ ಪ್ರಮಾಣ ಪತ್ರ, ಲೋಕೋಪಯೋಗಿ ಇಲಾಖೆಯಿಂದ ಪಡೆಯಬೇಕಾದ ಕಟ್ಟಡ ಸುರಕ್ಷತೆ ಪ್ರಮಾಣ ಪತ್ರ, ಅಗ್ನಿಶಾಮಕ ಇಲಾಖೆಯಿಂದ ಪಡೆಯಬೇಕಾದ ಅಗ್ನಿ ಸುಕರಕ್ಷತಾ ಪ್ರಮಾಣ ಪತ್ರಗಳಲ್ಲಿ ಸಮಸ್ಯೆ ಇದೆ. ಇವು ನನ್ನ ಇಲಾಖೆಯಲ್ಲವಲ್ಲ, ನಾನೇನು ಮಾಡಲಿ. ಶಾಲೆಗಳನ್ನು ಮುಚ್ಚಲಾಗುತ್ತಾ ಎಂದು ಅಸಹಾಯಕತೆ ಪ್ರದರ್ಶಿಸಿದರು.

ಆದರೆ ನಿಯಮಗಳನ್ನು ರೂಪಿಸಿರುವುದು ನಿಮ್ಮ ಇಲಾಖೆಯೇ ತಾನೆ ಎಂಬ ಪ್ರಶ್ನೆಗೆ, ಈ ಬಗ್ಗೆ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಿ ಸಮಸ್ಯೆ ಬಗೆಹರಿಸುವಂತೆ ಕೋರಲಾಗಿದೆ. ಆದರೆ, ಕೆಲ ಖಾಸಗಿ ಶಾಲಾ ಸಂಘಟನೆಗಳು ಹಳೆಯ ಶಾಲೆಗಳಿಗೆ ಈ ನಿಯಮಗಳನ್ನು ಜಾರಿಗೊಳಿಸಬೇಡಿ ಎಂದು ಕೇಳುತ್ತಾರೆ. ಅದು ಹೇಗೆ ಸಾಧ್ಯ? ನಮ್ಮ ಕಾನೂನು ಅದನ್ನು ಕೇಳಬೇಕಲ್ಲ. ಹಾಗಾಗಿ ಸಮಸ್ಯೆ ಪೂರ್ಣ ಪರಿಹಾರಕ್ಕೆ ಇನ್ನಷ್ಟು ಸಮಯ ಬೇಕಾಗುತ್ತದೆ ಎಂದರು. ಜೊತೆಗೆ ಇನ್ನು ಆರು ತಿಂಗಳಲ್ಲಿ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ನಿಯಮ ರೂಪಿಸುವಂತೆ ಸ್ಥಳದಲ್ಲೇ ಇಲಾಖೆಯ ನೂತನ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌ ಅವರಿಗೆ ಸೂಚಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ
ಜಾಲಹಳ್ಳಿ ಕೆಳಸೇತುವೆ ನಿರ್ಮಾಣ ಸಂಬಂಧ ಶಾಸಕರ ಸಭೆ-ಮಿ. ಮುನಿ ಪ್ರಶ್ನೆಗೆ ಉತ್ತರಿಸಲ್ಲ: ಡಿಸಿಎಂ