ಬೆಂಗಳೂರು : ಕೋರಮಂಗಲದ 1ನೇ ಬ್ಲಾಕ್‌ನ ವೆಂಕಟಾಪುರದಲ್ಲಿ ಕೇವಲ 750 ಚದರಡಿಯಲ್ಲಿ ಬರೋಬ್ಬರಿ 6 ಮಹಡಿಯ ಕಟ್ಟಡವು ಗೃಹ ಪ್ರವೇಶಕ್ಕೂ ಮುನ್ನವೇ ಕುಸಿಯುತ್ತಿದ್ದು, ಶುಕ್ರವಾರ ತೆರವು ಕಾರ್ಯ ಆರಂಭಿಸಲಾಗಿದೆ.
ಶಾಂತಮ್ಮ ಎಂಬುವರಿಗೆ ಸೇರಿದ ಕಟ್ಟಡವಾಗಿದ್ದು, ಗುರುವಾರ ಕಟ್ಟಡ ಕುಸಿಯುತ್ತಿರುವುದು ಅರಿವಿಗೆ ಬಂದಿದ್ದು, ಕೂಡಲೇ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಕಿರಿದಾದ ಪಿಲ್ಲರ್ ಹಾಕಿ 6 ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಬುನಾದಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಕಟ್ಟಡದ ಸುತ್ತಮುತ್ತಿನ ಕಟ್ಟಡಗಳಿಗೆ ಹಾನಿಯ ಭೀತಿ ಕಟ್ಟಡ ಮಾಲೀಕರಿಗೆ ಉಂಟಾಗಿತ್ತು. ಇದೀಗ ಕಟ್ಟಡ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಕಟ್ಟಡದ ಮಾಲೀಕರೇ ತೆರವು ಮಾಡುವುದಕ್ಕೆ ಶುಕ್ರವಾರದಿಂದ ಆರಂಭಿಸಿದ್ದಾರೆ.
ಬಿಬಿಎಂಪಿಯಿಂದ ಕಟ್ಟಡ ಮಾಲೀಕರಿಗೆ 2024ರ ಆಗಸ್ಟ್ ನಲ್ಲಿಯೇ ನೋಟಿಸ್ ನೀಡಿ ಕಟ್ಟಡ ನಿರ್ಮಾಣ ಅನುಮತಿ ಹಾಗೂ ನಕ್ಷೆ ಮಂಜೂರಾತಿ ಸಲ್ಲಿಕೆ ಮಾಡುವಂತೆ ಸೂಚಿಸಲಾಗಿತ್ತು. ಮಾಲೀಕರು ಸಲ್ಲಿಕೆ ಮಾಡದಿರುವುದರಿಂದ ಕಟ್ಟಡ ತೆರವುಗೊಳಿಸಲು ನೋಟಿಸ್‌ಗಳು ನೀಡಲಾಗಿತ್ತು.
ಕಟ್ಟಡ ತೆರವುಗೊಳಿಸುವುದಕ್ಕೆ ಅನುಮತಿ ನೀಡುವಂತೆ ಕೇಳಿದ್ದರು. ಗುರುವಾರ ಕಟ್ಟಡದ ಬುನಾದಿ ಕುಸಿಯುತ್ತಿರುವುದರಿಂದ ಕಟ್ಟಡವನ್ನು ಸ್ವಂತ ವೆಚ್ಚದಲ್ಲಿ ತೆರವುಗೊಳಿಸುವುದಾಗಿ ಮಾಲೀಕರು ಅನುಮತಿ ಪಡೆದುಕೊಂಡಿದ್ದಾರೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಒಂದು ವೇಳೆ ಮಾಲೀಕರಿಂದ ತೆರವುಗೊಳಿಸುವ ಕಾರ್ಯಾಚರಣೆಯನ್ನು ವಿಳಂಬ ಅಥವಾ ತೆರವುಗೊಳಿಸದೇ ಇದ್ದಲ್ಲಿ ಪಾಲಿಕೆ ವತಿಯಿಂದ ಕಟ್ಟಡ ನೆಲಸಮಗೊಳಿಸಲು ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್ ತಿಳಿಸಿರುತ್ತಾರೆ.