ಬೆಳ್ತಂಗಡಿ : ನೂರಾರು ಶವ ಹೂತಿರುವ ಕುರಿತು ಅನಾಮಿಕನ ದೂರು ನೀಡಿದ್ದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಸಮೀಪ ವಿಶೇಷ ತನಿಖಾ ತಂಡದ ಕಾರ್ಯಾಚರಣೆ ಆರನೇ ದಿನ ಸೋಮವಾರವೂ ಮುಂದುವರಿದಿದೆ. ಇಲ್ಲಿನ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಸ್ಥಿಪಂಜರವೊಂದು ಪತ್ತೆಯಾಗಿದೆ. ಆದರೆ ಇದು ದೂರುದಾರ ತೋರಿಸಿದ ಸ್ಥಳದಲ್ಲಿ ಇದ್ದದ್ದಲ್ಲ.
ಸೋಮವಾರ ಬಿಗಿ ಪೊಲೀಸ್ ಭದ್ರತೆಯಲ್ಲಿ ಅಗಮಿಸಿದ ಮುಸುಕುಧಾರಿ ಅನಾಮಿಕ, ಪುತ್ತೂರು ಉಪ ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್, ಅಧಿಕಾರಿ ಜಿತೇಂದ್ರ ದಯಾಮ್ ಸೇರಿ ವೈದ್ಯರ ತಂಡ ಬೆಳಗ್ಗೆ 11.30ರ ವೇಳೆಗೆ ಪಾಯಿಂಟ್ 11ರಲ್ಲಿ ಉತ್ಖನನ ಪ್ರಕ್ರಿಯೆ ಆರಂಭಿಸಬೇಕಿತ್ತು. ಸ್ನಾನಘಟ್ಟದ ಸನಿಹ, ಹೆದ್ದಾರಿಯ ಬದಿಯಲ್ಲಿಯೇ ಇದ್ದ ಜಾಗಕ್ಕೆ ತೆರಳಲು ಹಿಟಾಚಿಯೂ ಸಿದ್ಧವಾಗಿತ್ತು. ಆದರೆ ಪಾಯಿಂಟ್ ಅಗೆಸದೆ ಅನಾಮಿಕ ದೂರುದಾರನ ಸಹಿತ ತಂಡವನ್ನು ಕಾಡಿನ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಲಾಯಿತು. ಕೂಲಿಯಾಳುಗಳು ಸೇರಿದಂತೆ ಎಲ್ಲಾ ಅಧಿಕಾರಿಗಳು ಕಾಡಿಗೆ ತೆರಳಿದರು. ಬಳಿಕ ಮೂರು ಉಪ್ಪಿನ ಮೂಟೆಗಳನ್ನೂ ಕಾಡಿನೊಳಗೆ ಕೊಂಡೊಯ್ಯಲಾಯಿತು. ಬೆಳಗ್ಗೆ 11.30ಕ್ಕೆ ಕಾಡಿಗೆ ತೆರಳಿದ ತಂಡ ಸಂಜೆ 5ರ ತನಕ ಮರಳಲಿಲ್ಲ. ಎಂದಿನಂತೆ ಮಧ್ಯಾಹ್ನ ಊಟವೂ ರವಾನೆಯಾಗಲಿಲ್ಲ.
ಬಂಗ್ಲೆಗುಡ್ಡೆ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯ ವೇಳೆ ಭೂಮಿಯ ಮೇಲ್ಮೈಯಲ್ಲಿ ಒಂದು ಸಂಪೂರ್ಣ ಅಸ್ಥಿಪಂಜರ ಪತ್ತೆಯಾಗಿದೆ. ಈ ಅಸ್ಥಿಪಂಜರವು ದೂರುದಾರ ಅನಾಮಿಕ ವ್ಯಕ್ತಿ ತೋರಿಸಿದ ಸ್ಥಳದಲ್ಲಿ ಸಿಗದೆ ಬೇರೆ ಪಾಯಿಂಟ್‌ನಲ್ಲಿ ಪತ್ತೆಯಾಗಿದೆ. ಈ ಅಸ್ಥಿಪಂಜರದ ಬಳಿಯಲ್ಲಿ ಗಂಡಸಿನ ಉಡುಪುಗಳು ಮತ್ತು ಹಗ್ಗವೂ ಪತ್ತೆಯಾದ ಹಿನ್ನೆಲೆಯಲ್ಲಿ, ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಈ ದುರ್ಘಟನೆ ಒಂದೂವರೆ ವರ್ಷದ ಹಿಂದೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ವೈದ್ಯರ ತಂಡ ಕಾಡಿನೊಳಗೆ ಮೂಳೆ, ಅಸ್ಥಿಪಂಜರಗಳನ್ನು ಸೇಫ್ ಎವಿಡೆನ್ಸ್ ಬಾಕ್ಸ್‌ನಲ್ಲಿ ಸಂಗ್ರಹಿಸಿ ಬಳಿಕ ಉಳಿದೆಲ್ಲಾ ಮಹಜರು ಪ್ರಕ್ರಿಯೆಗಳನ್ನು ಮುಗಿಸಿ ಮುಸ್ಸಂಜೆಯಾಗುತ್ತಿದ್ದಂತೆ ಕಾಡಿನಿಂದ ಹೆದ್ದಾರಿಗೆ ಬಂದಿದೆ. ಇದರೊಂದಿಗೆ ಧರ್ಮಸ್ಥಳ ಕಾಡಿನ ಒಳಭಾಗದಲ್ಲಿ ನಡೆದ ಮಹಜರು ಪ್ರಕ್ರಿಯೆ ಕೂಡ ಸೋಮವಾರ ಸಂಪೂರ್ಣವಾಗಿ ಮುಕ್ತಾಯಗೊಂಡಿತು.
ಹೊಸ ದೂರು:
ಈ ನಡುವೆ ಸೋಮವಾರ ಟಿ.ಜಯನ್ ಎಂಬ ವ್ಯಕ್ತಿ, ‘15 ವರ್ಷದ ಹಿಂದೆ ಈ ಪರಿಸರದಲ್ಲಿ 15 ವರ್ಷದ ಹೆಣ್ಣುಮಗಳೊಬ್ಬಳ ಅನುಮಾನಾಸ್ಪದ ಸಾವಾಗಿದೆ. ಆಕೆಯ ಹೆಣವನ್ನು ಕಾನೂನು ಪ್ರಕ್ರಿಯೆ ನಡೆಸದೆ ಹೂತು ಹಾಕಲಾಗಿದೆ. ಇದನ್ನು ತಾನು ಸ್ವತಃ ನೋಡಿದ್ದೇನೆ’ ಎಂದು ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಅವರು ಸೋಮವಾರ ವಿಶೇಷ ತನಿಖಾ ತಂಡಕ್ಕೆ ದೂರು ನೀಡಿದ್ದಾರೆ. ಅವರ ದೂರು ಅರ್ಜಿಗೆ ಎಸ್‌ಐಟಿ ಹಿಂಬರಹ ನೀಡಿದೆ. ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಲು ಎಸ್‌ಐಟಿ ಸೂಚಿಸಿದೆ.
ದೂರಿನಲ್ಲಿ ಇರುವುದೇನು?:
2002-03ರ ಅವಧಿಯಲ್ಲಿ ರಾಜ್ಯ ಹೆದ್ದಾರಿ 37ರ ಅರಣ್ಯದಲ್ಲಿ ಮೃತದೇಹ ಎಸೆದು ಹೋಗಲಾಗಿತ್ತು. ಈ ವಿಷಯವನ್ನು ಸ್ಥಳೀಯ ನಿವಾಸಿಗಳು ಬೆಳ್ತಂಗಡಿ ಇನ್‌ಸ್ಪೆಕ್ಟರ್‌ಗೆ ತಿಳಿಸಿದ್ದರು. ಘಟನೆ ನಡೆದು ಒಂದು ವಾರದ ನಂತರ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಬಂದಿದ್ದರು. ಒಂದರಿಂದ ಎರಡು ಫೀಟ್ ಆಳದ ಹೊಂಡ ತೆಗೆದು ಆಗ ಶವ ಹೂತು ಹಾಕಲಾಗಿತ್ತು. ಮೃತ ಹೆಣ್ಣುಮಗಳ ಪ್ರಾಯ ಸುಮಾರು 13-15 ವರ್ಷ ಆಗಿತ್ತು. ಅರಣ್ಯ ಪ್ರದೇಶದಲ್ಲಿ ಸಿಕ್ಕ ಮೃತದೇಹದ ಬಗ್ಗೆ ನಿರ್ಲಕ್ಷ್ಯವಹಿಸಲಾಗಿದೆ. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮೃತದೇಹ ಸಿಕ್ಕ ಸ್ಥಳದ ಮಹಜರು ಮಾಡಿಲ್ಲ. ಮರಣೋತ್ತರ ಪರೀಕ್ಷೆ ನಡೆಸಿಲ್ಲ. ಅರಣ್ಯ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಎಫ್ಐಆರ್ ದಾಖಲು ಮಾಡದಿದ್ದರೆ ಎಸ್ಐಟಿ ಕಚೇರಿ ಮುಂದೆ ಧರಣಿ ಕೂರುತ್ತೇನೆ ಎಂದು ಜಯನ್ ಎಚ್ಚರಿಸಿದ್ದಾರೆ.
ಅಸ್ಥಿಪಂಜರ ಯಾರದ್ದು?
- ಅನಾಮಿಕ ದೂರುದಾರ ಹೇಳಿದ ಸ್ಥಳಕ್ಕೆ ಬಂದು ಉತ್ಖನನ ನಡೆಸದೆ ಕಾಡಿನೊಳಕ್ಕೆ ಹೋದ ಎಸ್‌ಐಟಿ ತಂಡ
- ಬಂಗ್ಲೆಗುಡ್ಡೆ ಕಾಡಿನಲ್ಲಿ ಸಂಪೂರ್ಣ ಅಸ್ಥಿಪಂಜರ ಬಿದ್ದಿರುವುದು ಪತ್ತೆ. ಈ ಸ್ಥಳ ದೂರುದಾರ ತೋರಿಸಿದ್ದಲ್ಲ
- ಅಸ್ಥಿಪಂಜರ ಬಳಿ ಗಂಡಸಿನ ಉಡುಪು, ಹಗ್ಗ ಪತ್ತೆ. ಪುರುಷನೊಬ್ಬ ಆತ್ಮಹತ್ಯೆಗೆ ಶರಣಾಗಿರಬಹುದೆಂಬ ಶಂಕೆ
- ಈ ಆತ್ಮಹತ್ಯೆ ಒಂದೂವರೆ ವರ್ಷದ ಹಿಂದೆ ನಡೆದಿರಬಹುದು, ಬೆಳಕಿಗೆ ಬಂದಿಲ್ಲದಿರಬಹುದು ಎಂಬ ಬಗ್ಗೆ ಚರ್ಚೆ
- ಪತ್ತೆಯಾದ ಅಸ್ಥಿಪಂಜರವನ್ನು ಸಂರಕ್ಷಿಸಿರುವ ಅಧಿಕಾರಿಗಳು. ಇದು ಯಾರದ್ದು ಎಂಬ ಬಗ್ಗೆ ಈಗ ಕುತೂಹಲ