;Resize=(412,232))
ಬೆಂಗಳೂರು : ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಶೇ.2ರಷ್ಟು ಮೀಸಲಾತಿ, ಅರಣ್ಯ ಮತ್ತು ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಮೀಸಲಾತಿ ಜಾರಿಗೊಳಿಸಿ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕ್ರೀಡೆಗಳಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸಿವಿಲ್ ಹುದ್ದೆಗಳ ಸೇವೆಗಳಲ್ಲಿನ ನೇಮಕಾತಿಯಲ್ಲಿ ಶೇ.2ರಷ್ಟು ಮೀಸಲಾತಿ ನೀಡಲು ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ) ನೇಮಕಾತಿ (ತಿದ್ದುಪಡಿ) ನಿಯಮಗಳು, 2026ಕ್ಕೆ ಸಂಪುಟ ಸಭೆ ಅನುಮೋದನೆ ನೀಡಲಾಗಿತ್ತು. ಇದೀಗ ಮೀಸಲಾತಿ ಆದೇಶವನ್ನು ಸರ್ಕಾರ ಪ್ರಕಟಿಸಿದೆ. ಅಥ್ಲೆಟಿಕ್ಸ್, ಆರ್ಚರಿ, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫುಟ್‌ಬಾಲ್, ಹಾಕಿ, ಕಬಡ್ಡಿ, ಶೂಟಿಂಗ್, ವಾಲಿಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್ ಸೇರಿ 20ಕ್ಕೂ ಹೆಚ್ಚು ಕ್ರೀಡಾ ವಿಭಾಗಗಳನ್ನು ಇದರಡಿ ಗುರುತಿಸಿದ್ದು, ಈ ಕ್ರೀಡೆಗಳಲ್ಲಿ ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಸಾಧನೆಗೈದವರಿಗೆ ನೇಮಕಾತಿಯಲ್ಲಿ ಮೀಸಲಾತಿ ಸಿಗಲಿದೆ.
ಸರ್ಕಾರದ ಆದೇಶವನ್ನು ಫಿಬಾ ಏಷ್ಯಾ ಅಧ್ಯಕ್ಷರು, ಕೆಒಎ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಾ.ಕೆ.ಗೋವಿಂದರಾಜು ಸ್ವಾಗತಿಸಿದ್ದಾರೆ. ಇದಕ್ಕೆ ಪ್ರಮುಖ ಪಾತ್ರ ವಹಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಲ್ಲಾ ಅಧಿಕಾರಿ ವರ್ಗದವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
- ಅಥ್ಲೆಟಿಕ್ಸ್, ಆರ್ಚರಿ, ಬಾಸ್ಕೆಟ್‌ಬಾಲ್, ಬಾಕ್ಸಿಂಗ್, ಹಾಕಿ, ಕ್ರಿಕೆಟ್, ಬ್ಯಾಡ್ಮಿಂಟನ್ ಸೇರಿ 20 ಕ್ರೀಡಾ ವಿಭಾಗ ಆಯ್ಕೆ
- ಈ ಕ್ರೀಡೆಗಳಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿ ಸಾಧನೆಗೈದವರಿಗೆ ಮೀಸಲಾತಿ ಲಭ್ಯ
-ಇದಕ್ಕಾಗಿ ಕರ್ನಾಟಕ ನಾಗರಿಕ ಸೇವಾ(ಸಾಮಾನ್ಯ) ನೇಮಕ (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮಾಡಿ ಆದೇಶ
4 ವರ್ಷಗಳ ಪ್ರಯತ್ನಕ್ಕೆ ಫಲ ಸಿಕ್ಕಿದೆ. ಕ್ರೀಡಾಪಟುಗಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ಸಿಗಬೇಕು ಎಂಬುದು ಕನಸಾಗಿತ್ತು. ಇದೀಗ ಮೀಸಲಾತಿ ಆದೇಶ ಪ್ರಕಟಿಸುವ ಮೂಲಕ ನಮ್ಮ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇಕಡ 3ರಷ್ಟು ಮೀಸಲಾತಿ ಪ್ರಕಟಿಸಿದ್ದು, ಸರ್ಕಾರಕ್ಕೆ ಧನ್ಯವಾದಗಳು.
- ಡಾ.ಕೆ.ಗೋವಿಂದರಾಜು, ಕೆಒಎ ಅಧ್ಯಕ್ಷ