;Resize=(412,232))
ರಾಯಚೂರು : ಪಾಟ್ನಾದ ಭತ್ತ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಡಾ.ಮಾನಸಿಂಗ್ ನೇತೃತ್ವದ ಅಧಿಕಾರಿಗಳ ತಂಡ ಭಾನುವಾರ ರಾಯಚೂರು ಜಿಲ್ಲೆಯಲ್ಲಿ ಬರ ಸಮೀಕ್ಷೆ ನಡೆಸಿತು.
ಮಸ್ಕಿ ತಾಲೂಕಿನ ಅಮೀನಗಡ ಗ್ರಾಮಕ್ಕೆ ಆಗಮಿಸಿದ ತಂಡ, ಕತ್ತಲಲ್ಲಿ ಬರ ಪರಿಶೀಲನೆ ನಡೆಸಿದ್ದು, ಇದಕ್ಕೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಜೆ 4.50ಕ್ಕೆ ಭೇಟಿಯ ಸಮಯ ನಿಗದಿಯಾಗಿದ್ದು, ಅದರಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಕೇಂದ್ರ ತಂಡದ ಆಗಮನಕ್ಕೆ ಕಾಯುತ್ತಿದ್ದರು. ಆದರೆ, ಒಂದೂವರೆ ತಾಸು ತಡವಾಗಿ, ಸಂಜೆ 6.30ರ ವೇಳೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳು ತೊಗರಿ ಬೆಳೆ ಪರಿಶೀಲಿಸಿ, ರೈತರೊಂದಿಗೆ ಮಾಹಿತಿ ಪಡೆದರು.
ಈ ವೇಳೆ ಕತ್ತಲಾಗಿದ್ದರಿಂದ ರಸ್ತೆ ಬದಿಯ ಜಮೀನುಗಳಲ್ಲಿ, ಮೊಬೈಲ್ ಟಾರ್ಚ್ ಬೆಳಕಲ್ಲಿ ಬರ ಪರಿಶೀಲನೆ ನಡೆಸಿದರು. ಇದಕ್ಕೆ ಕೆಲವು ರೈತರು ಆಕ್ಷೇಪ ವ್ಯಕ್ತಪಡಿಸಿ, ಕೇವಲ ರಸ್ತೆ ಬದಿಯ ಹೊಲಗಳಲ್ಲಿ ಬೆಳೆ ಪರಿಶೀಲನೆಗೆ ಸೀಮಿತಗೊಳಿಸದೆ, ಸಂಪೂರ್ಣ ಬೆಳೆನಾಶವಾದ ಜಮೀನುಗಳನ್ನು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.