ಬೆಂಗಳೂರು : ರಾಜ್ಯದಲ್ಲಿ ಪ್ರಸಕ್ತ 2025-26ನೇ ಸಾಲಿನಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯ ತೇರ್ಗಡೆ ಅಂಕಗಳನ್ನು ತಗ್ಗಿಸಿ ಆದೇಶ ಹೊರಡಿಸಲಾಗಿದೆ. ವಿದ್ಯಾರ್ಥಿಗಳು ಈ ಮುಂಚಿನ ಶೇ.35ರ ಬದಲು ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದರೆ ಉತ್ತೀರ್ಣರಾಗಲಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಯಿಂದ ಶೇ.33ರಷ್ಟು ಅಂಕ ಪಡೆದರೆ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗುತ್ತದೆ ಎಂದರು.
ಉತ್ತೀರ್ಣ ಪ್ರಮಾಣ ಹೆಚ್ಚಿಸುವ ದೃಷ್ಟಿಯಿಂದ ಸಿಬಿಎಸ್‌ಇ ಹಾಗೂ ಇತರೆ ರಾಜ್ಯಗಳಲ್ಲಿರುವ ಪರೀಕ್ಷಾ ಉತ್ತೀರ್ಣತಾ ಮಾನದಂಡಗಳನ್ನು ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೂ ಜಾರಿಗೊಳಿಸಲು ಕಳೆದ ಜುಲೈನಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ನಿಯಮಗಳಿಗೆ ತಂದ ತಿದ್ದುಪಡಿಯ ಕರಡು ನಿಯಮದ ಅಧಿಸೂಚನೆ ಹೊರಡಿಸಲಾಗಿತ್ತು. ಅಧಿಸೂಚನೆಗೆ ಆಕ್ಷೇಪಿಸಿ ಕೇವಲ ಎಂಟು ಪತ್ರಗಳು ಬಂದಿದ್ದರೆ, ಅಧಿಸೂಚನೆ ಪರವಾಗಿ 701 ಪತ್ರಗಳು ಬಂದಿವೆ. ಹಾಗಾಗಿ ತಿದ್ದುಪಡಿ ನಿಯಮವನ್ನು ಪ್ರಸಕ್ತ ಸಾಲಿನಿಂದಲೇ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಏಕರೂಪ ಪರೀಕ್ಷಾ ಪದ್ಧತಿಗೂ ಬೇಡಿಕೆ:
ಸಿಬಿಎಸ್‌ಇ ಮತ್ತು ಇತರೆ ರಾಜ್ಯಗಳಲ್ಲಿರುವಂತೆ ಏಕರೂಪ ಪರೀಕ್ಷಾ ಪದ್ಧತಿ ಜಾರಿಗೆ ರಾಜ್ಯದಲ್ಲೂ ಸಾಕಷ್ಟು ಬೇಡಿಕೆ, ಮನವಿಗಳು ಬಂದಿದ್ದವು. ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2ರ 4ನೇ ವರದಿಯಲ್ಲೂ ಎರಡೂ ಪರೀಕ್ಷೆಗಳ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಅದರಂತೆ ಕರಡು ನಿಯಮ ರೂಪಿಸಿ ಜಾರಿಗೆ ತರಲಾಗಿದೆ. ಇದು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಕಾರಾತ್ಮಕ ಪರಿಣಾಮ ಬೀರಲಿದೆ. ಈ ಹೊಸ ನಿಯಮಗಳು ಹೊಸ ಅಥವಾ ಶಾಲಾ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳಿಗೂ ಅನ್ವಯಿಸುತ್ತದೆ. ಶೀಘ್ರದಲ್ಲೇ ಇಲಾಖೆಯಿಂದ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.
ಶೇ.35ರಷ್ಟು ಅಂಕ ಪಡೆಯಬೇಕಿತ್ತು:
ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿಗಳು ಇದುವರೆಗೆ ಪ್ರತಿ ವಿಷಯದಲ್ಲಿ ಉತ್ತೀರ್ಣಕ್ಕೆ ಶೇ.35 ಅಂಕಗಳನ್ನು ಪಡೆಯಬೇಕಿತ್ತು. ಇನ್ನು ಮುಂದೆ ಶೇ.33ರಷ್ಟು ಅಂಕ ಪಡೆದರೆ ಪಾಸ್ ಆಗುತ್ತಾರೆ. ಎಸ್ಸೆಸ್ಸೆಲ್ಸಿಯಲ್ಲಿ ಆರೂ ವಿಷಯಗಳಿಂದ 625 ಅಂಕಗಳ ಪರೀಕ್ಷೆಯಲ್ಲಿ ಒಟ್ಟಾರೆ ಕನಿಷ್ಠ ಶೇ.33 ಅರ್ಥಾತ್ 206 ಅಂಕಗಳನ್ನು ಗಳಿಸಿದಲ್ಲಿ ಒಂದೆರಡು ವಿಷಯಗಳಲ್ಲಿ ಶೇ.33ರ ಬದಲು 30 ಅಂಕಗಳನ್ನು ಪಡೆದಿದ್ದರೂ ಉತ್ತೀರ್ಣರೆಂದು ಘೋಷಿಸಲಾಗುತ್ತದೆ. ಅದೇ ರೀತಿ ದ್ವಿತೀಯ ಪಿಯುಸಿಯಲ್ಲೂ ಒಟ್ಟು 600 ಅಂಕಗಳ ಪರೀಕ್ಷೆಯಲ್ಲಿ ಆರೂ ವಿಷಯಗಳಿಂದ ಕನಿಷ್ಠ ಶೇ.33 ಅಂದರೆ 198 ಅಂಕಗಳನ್ನು ಪಡೆದಲ್ಲಿ ಕೆಲ ವಿಷಯಗಳಲ್ಲಿ ಶೇ.30 ಅಂಕಗಳನ್ನು ಪಡೆದರೂ ಉತ್ತೀರ್ಣರೆಂದು ಪರಿಗಣಿಸಲಾಗುವುದು ಎಂದು ವಿವರಿಸಿದರು.
ಆಂತರಿಕ/ಪ್ರಾಯೋಗಿಕ ಅಂಕ ಪೂರ್ಣ ಪರಿಗಣನೆ:
ಇದುವರೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ.80 ಅಂಕಗಳಿಗೆ ನಡೆಯುವ ಲಿಖಿತ ಪರೀಕ್ಷೆಯಲ್ಲಿ ಪಾಸ್ ಆಗಲು ಕನಿಷ್ಠ ಶೇ.28 ಅಂಕ, ಶೇ.20 ಅಂಕಗಳಿಗೆ ನಡೆಯುವ ಆಂತರಿಕ ಮೌಲ್ಯಮಾಪನದಲ್ಲಿ ಕನಿಷ್ಠ ಶೇ.7 ಅಂಕ ಪಡೆಯಲೇಬೇಕಿತ್ತು. ಆದರೆ, ಇನ್ನು ಮುಂದೆ ಆಂತರಿಕ ಮೌಲ್ಯಮಾಪನ ಅಥವಾ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆಯುವ ಪೂರ್ಣ ಪ್ರಮಾಣದ ಅಂಕಗಳನ್ನು ಪಾಸ್ ಅಂಕಗಳಿಗೆ ಪರಿಗಣಿಸಲಾಗುತ್ತದೆ. ಉದಾಹರಣೆಗೆ ಎಸ್ಸೆಸ್ಸೆಲ್ಸಿಯ ಗಣಿತ ವಿಷಯದಲ್ಲಿ ಪಾಸ್ ಆಗಲು ಬೇಕಿರುವ 33 ಅಂಕಗಳ ಪೈಕಿ ಆಂತರಿಕ ಮೌಲ್ಯಮಾಪನದಿಂದ 20ಕ್ಕೆ 20 ಅಂಕಗಳನ್ನೂ ವಿದ್ಯಾರ್ಥಿ ಪಡೆದರೆ ಉಳಿದ 13 ಅಂಕಗಳನ್ನು ಲಿಖಿತ ಪರೀಕ್ಷೆಯಲ್ಲಿ ಪಡೆದರೆ ಪಾಸ್ ಆಗಬಹುದು. ಅಥವಾ ಲಿಖಿತ ಪರೀಕ್ಷೆಯಲ್ಲೇ 33 ಅಂಕ ಪಡೆದರೂ ಪಾಸ್ ಆಗುತ್ತಾನೆ. ದ್ವಿತೀಯ ಪಿಯುಸಿಯಲ್ಲೂ ಇದೇ ಮಾನದಂಡ ಅನ್ವಯಿಸುತ್ತದೆ ಎಂದು ಸಚಿವರು ಹೇಳಿದರು.
- ಎಸ್ಸೆಸ್ಸೆಲ್ಸಿಯಲ್ಲಿ ಕನಿಷ್ಠ 206 ಅಂಕ ಪಡೆದರೆ ಪಾಸ್
- ದ್ವಿತೀಯ ಪಿಯುನಲ್ಲಿ 198 ಅಂಕ ಪಡೆದರೆ ಉತ್ತೀರ್ಣ
- ಸಿಬಿಎಸ್‌ಇ, ಇತರೆಡೆಯ ಮಾದರಿ ರಾಜ್ಯದಲ್ಲಿ ಜಾರಿ
- ಉತ್ತೀರ್ಣಕ್ಕೆ ಆಂತರಿಕ ಅಂಕ ಪೂರ್ಣವಾಗಿ ಪರಿಗಣನೆ
- ಪುನರಾವರ್ತಿತ, ಖಾಸಗಿ ಅಭ್ಯರ್ಥಿಗಳಿಗೂ ಅನ್ವಯ
- ಶಿಕ್ಷಣ, ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ