ಲೆಕ್ಕಕ್ಕಿಲ್ಲದ ಎಸ್ಸೆಸ್ಸೆಲ್ಸಿ ಹಿಂದಿ ಪರೀಕ್ಷೆ ಇಂದು

Published : Mar 31, 2026, 08:41 AM IST
sslc exam

ಸಾರಾಂಶ

ಪಾಸ್‌-ಫೇಲ್‌ ಪದ್ಧತಿ ಕೈಬಿಟ್ಟು ಗ್ರೇಡಿಂಗ್‌ ಜಾರಿಗೊಳಿಸುವ ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ವಿಷಯಗಳಿಗೆ ಮಂಗಳವಾರ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿವೆ. ಒಟ್ಟು 8.25 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ

  ಬೆಂಗಳೂರು :  ಪಾಸ್‌-ಫೇಲ್‌ ಪದ್ಧತಿ ಕೈಬಿಟ್ಟು ಗ್ರೇಡಿಂಗ್‌ ಜಾರಿಗೊಳಿಸುವ ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ವಿಷಯಗಳಿಗೆ ಮಂಗಳವಾರ ರಾಜ್ಯಾದ್ಯಂತ ಪರೀಕ್ಷೆ ನಡೆಯಲಿವೆ. ಒಟ್ಟು 8.25 ಲಕ್ಷಕ್ಕೂ ಹೆಚ್ಚು ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ಅತಿ ಹೆಚ್ಚು ಮಂದಿ ಹಿಂದಿಯನ್ನೇ ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

ಆದರೆ, ತೃತೀಯ ಭಾಷೆ ಎಂದರೆ ಕೇವಲ ಹಿಂದಿ ಮಾತ್ರವಲ್ಲ, ಕನ್ನಡವೂ ಸೇರಿ ಒಂಬತ್ತು ಭಾಷೆಗಳಿವೆ. ಸರ್ಕಾರವೇ ನಿಗದಿಪಡಿಸಿರುವಂತೆ ತೃತೀಯ ಭಾಷೆ ವ್ಯಾಪ್ತಿಯಲ್ಲಿ ಹಿಂದಿ, ಕನ್ನಡ, ಇಂಗ್ಲೀಷ್‌, ಸಂಸ್ಕೃತ, ಉರ್ದು, ಕೊಂಕಣಿ, ತುಳು, ಮರಾಠಿ, ಅರೇಬಿಕ್ ಭಾಷೆಗಳು ಬರುತ್ತವೆ. ಈ ಒಂಬತ್ತು ವಿಷಯಗಳಲ್ಲಿ ಯಾವ ಭಾಷೆಯನ್ನಾದರೂ ತೃತೀಯ ಭಾಷೆಯಾಗಿ ವ್ಯಾಸಂಗ ಮಾಡಲು ಸರ್ಕಾರಿ, ಖಾಸಗಿ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ವಿದ್ಯಾರ್ಥಿಗಳು ಸ್ವತಂತ್ರರು.

ವಿಶೇಷವಾಗಿ ಉರ್ದು ಶಾಲೆಗಳು ಸೇರಿದಂತೆ ಅಲ್ಪಸಂಖ್ಯಾತ ಶಾಲೆಗಳಲ್ಲಿ ಉರ್ದು ಹಾಗೂ ಇತರೆ ಅಲ್ಪಸಂಖ್ಯಾತರ ಮಾತೃಭಾಷೆಗಳು ಪ್ರಥಮ ಭಾಷೆ, ಇಂಗ್ಲೀಷ್‌ ದ್ವಿತೀಯ ಭಾಷೆಯಾಗಿದ್ದರೆ, ಕನ್ನಡವನ್ನು ತೃತೀಯ ಭಾಷೆಯಾಗಿ ಕಲಿಸಲಾಗುತ್ತಿದೆ. ಅಂತಹ ಸಾವಿರಾರು ಮಕ್ಕಳ ಕನ್ನಡ ಕಲಿಕೆ ಮೇಲೆ ಸರ್ಕಾರದ ನಿರ್ಧಾರ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ತಜ್ಞರ ವಾದ.

ಇದೀಗ ಸರ್ಕಾರ ತೃತೀಯ ಭಾಷಾ ಪರೀಕ್ಷೆಯಲ್ಲಿ ಪಾಸು-ಫೇಲು ಎನ್ನುವುದನ್ನು ಕೈಬಿಟ್ಟು ಗ್ರೇಡಿಂಗ್‌ ಪದ್ಧತಿ ಜಾರಿ ಮಾಡುವುದಾಗಿ ಹೇಳಿದೆ. ಅಲ್ಲದೆ, ತೃತೀಯ ಭಾಷಾ ವಿಷಯದ ಅಂಕಗಳನ್ನು ಒಟ್ಟಾರೆ ಫಲಿತಾಂಶಕ್ಕೂ ಪರಿಗಣಿಸುವುದಿಲ್ಲ. ಅರ್ಥಾತ್‌ ಇದುವರೆಗೆ ಇದ್ದ ಆರು ವಿಷಯಗಳ ಬದಲು ಕೇವಲ ಐದು ವಿಷಯಗಳನ್ನು (ಪ್ರಥಮ ಭಾಷೆ 125, ದ್ವಿತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 100 ಅಂಕ) ಮಾತ್ರ ಪರಿಗಣಿಸಿ ಒಟ್ಟು 525 ಅಂಕಗಳಿಗೆ ಫಲಿತಾಂಶ ನೀಡುವುದಾಗಿ ಹೇಳಿದೆ. ತೃತೀಯ ಭಾಷೆಯನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡುವುದರಿಂದ ಕೇವಲ ಹಿಂದಿ ಭಾಷೆಗೆ ಮಾತ್ರ ಪರಿಣಾಮ ಬೀರುವುದಿಲ್ಲ. ಬದಲಿಗೆ ಕನ್ನಡ, ಉರ್ದು, ತುಳು, ಸಂಸ್ಕೃತ, ಮರಾಠಿ, ಕೊಂಕಣಿ, ಅರೇಬಿಕ್‌ ಭಾಷೆಗಳನ್ನು ತೃತೀಯ ಭಾಷೆಯಾಗಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ. ಹಿಂದಿ ಮಾತ್ರವಲ್ಲದೆ ಉಳಿದ ಎಂಟು ಭಾಷೆಗಳ ಬೋಧನೆ, ಕಲಿಕೆಯಲ್ಲೂ ಗಾಂಭೀರ್ಯತೆ ಇಲ್ಲದಂತಾಗುತ್ತದೆ ಎನ್ನುತ್ತಾರೆ ಖಾಸಗಿ ಶಾಲಾ ಸಂಘಟನೆ ಪ್ರತಿನಿಧಿಗಳು.

 ತೃತೀಯ ಭಾಷೆ ಎಂದರೆ ಹಿಂದಿ ಮಾತ್ರವೇ ಅಲ್ಲ

ಸರ್ಕಾರ ತೃತೀಯ ಭಾಷೆ ಎಂದರೆ ಹಿಂದಿ ಮಾತ್ರ ಎಂದು ಭಾವಿಸಿದಂತಿದೆ. ಉರ್ದು ಸೇರಿದಂತೆ ವಿಶೇಷವಾಗಿ ಅಲ್ಪಸಂಖ್ಯಾತ ಶಾಲೆಗಳ ಸಾವಿರಾರು ಮಕ್ಕಳು ಕನ್ನಡವನ್ನೂ ತೃತೀಯ ಭಾಷೆಯಾಗಿ ಕಲಿಯುತ್ತಿದ್ದಾರೆ. ಹಿಂದಿ ಕಡೆಗಣಿಸಲು ಹೋಗಿ ಕನ್ನಡವನ್ನೂ ಕಡೆಗಣಿಸಿದಂತಾಗುತ್ತದೆ. ಕನ್ನಡ ಪಾತ್ರವಲ್ಲ ತುಳು, ಕೊಂಕಣಿ ಸೇರಿದಂತೆ ಇನ್ನೂ ವಿವಿಧ ಭಾಷೆಗಳನ್ನು ತೃತೀಯ ಭಾಷೆಯಾಗಿ ಆಯ್ಕೆ ಮಾಡಿಕೊಂಡಿರುವ ಮಕ್ಕಳ ಕಲಿಕೆ ಮೇಲೂ ಪರಿಣಾಮ ಬೀರುತ್ತದೆ.

-ಡಿ.ಶಶಿಕುಮಾರ್‌, ಕ್ಯಾಮ್ಸ್‌ ಪ್ರಧಾನ ಕಾರ್ಯದರ್ಶಿ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

6 ಲಕ್ಷ ಲಂಚ ಪಡೆವಾಗ ವಾಣಿಜ್ಯ ತೆರಿಗೆ ಡೀಸಿ ‘ಲೋಕಾ’ ಬಲೆಗೆ
ದುಬಾರಿ ಬಡ್ಡಿ ವಿಧಿಸಿದವನ ವಿರುದ್ಧ ಕ್ರಮಕ್ಕೆ ಪೊಲೀಸರಿಗೆ ಕೋರ್ಟ್‌ ಸೂಚನೆ