ಕನ್ನಡಪ್ರಭ ವಾರ್ತೆ ಬೆಂಗಳೂರು
ಮೇಕೆದಾಟು ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದ್ದು, 5000 ಎಕರೆಯಷ್ಟು ಅರಣ್ಯ ನಾಶ ಹಾಗೂ ಜೀವವೈವಿದ್ಯಕ್ಕೆ ಕಂಟಕವಾಗಲಿದೆ ಆದ್ದರಿಂದ ವನಸಮುದ್ರದ ಬಳಿ ಅಣೆಕಟ್ಟು ನಿರ್ಮಿಸಿದರೆ ಅಲ್ಲಿ ನದಿ ಆಳವಾಗಿದ್ದು, ನೀರನ್ನು ಹೆಚ್ಚು ಸಂಗ್ರಹಿಸಲು ಅವಕಾಶವಿದೆ ಎಂದು ವನ್ಯಜೀವಿ ಸಂರಕ್ಷಕ ಸಂಜಯ್ ಗುಬ್ಬಿ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಸುಚಿತ್ರಾ ಸಭಾಂಗಣದಲ್ಲಿ ‘ಕಾಡಿನ ಗೆಳೆಯರ ಕಾಡುವ ಕಥೆಗಳು’ ಹಾಗೂ ‘ಕಾಡಿನೊಳಗೊಂದು ಮನೆಯ ಮಾಡಿ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೇಕೆದಾಟು ಪ್ರದೇಶದಲ್ಲಿ ಅಣೆಕಟ್ಟು ನಿರ್ಮಿಸಲು ಮಳೆ ತರಬಲ್ಲ ಕಾಡನ್ನೇ ನಾಶಮಾಡಿದರೆ, ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗುತ್ತದೆ. ಕಾಡು ಪ್ರಾಣಿಗಳಿಗೆ ಜಾಗವಿಲ್ಲದೆ ಮಾನವ-ವನ್ಯಜೀವಿ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತದೆ. ಮಲೆ ಮಹದೇಶ್ವರ ಬೆಟ್ಟ, ಬಂಡೀಪುರ, ನಾಗರಹೊಳೆ, ಕೊಡಗು ಜಿಲ್ಲೆಯಲ್ಲಿ ಕಾಡು ನಾಶವಾದರೆ ಬೆಂಗಳೂರಿಗೆ ಕುಡಿಯಲು ನೀರು ಸಿಗದೆ ಪರದಾಡಬೇಕಾಗುತ್ತದೆ. ಮೇಕೆದಾಟುವಿನಲ್ಲಿ ಅಣೆಕಟ್ಟೆ ಕಟ್ಟಿದರೆ ಬೆಂಗಳೂರಿಗೆ ನೀರು ತರಬಹುದು ಎಂದು ಹೇಳುತ್ತಿದ್ದಾರೆ. ಇದನ್ನು ವೈಜ್ಞಾನಿಕವಾಗಿ ಒಳಹೊಕ್ಕು ನೋಡಿದರೆ ಇದರಿಂದ ಅಪಾಯವೇ ಹೊರತು ಉಪಯೋಗವಿಲ್ಲ. ಇದರ ಬದಲು ಶಿವನಸಮುದ್ರದ ಬಳಿ ಅಣೆಕಟ್ಟು ನಿರ್ಮಿಸಿದರೆ ಅಲ್ಲಿ ನದಿ ಆಳವಾಗಿದ್ದು, ನೀರನ್ನು ಹೆಚ್ಚು ಸಂಗ್ರಹಿಸಲು ಅವಕಾಶವಿದೆ ಎಂದು ತಿಳಿಸಿದರು.ಪುಸ್ತಕ ಬಿಡುಗಡೆ ಮಾಡಿದ ವಿಜ್ಞಾನ ಬರಹಗಾರ ನಾಗೇಶ ಹೆಗಡೆ ಮಾತನಾಡಿ, ವನ್ಯಜೀವಿಗಳ ಮತ್ತು ಮನುಷ್ಯರ ನಡುವಿನ ಸಂಬಂಧದ ಬಗ್ಗೆ ತುಂಬಾ ಅಪರೂಪಕ್ಕೆ ಪುಸ್ತಕಗಳು ಬರುತ್ತವೆ. ಕೊಡಗಿನ ವನ್ಯಜೀವಿಗಳ ಬಗ್ಗೆ ಕಾಕಿಮಾನ್ಯ, ಡಾ.ಶಿವರಾಮಕಾರಂತರು ಮತ್ತು ಅವರ ಪುತ್ರ, ಕುವೆಂಪು ಮತ್ತು ಅವರ ಮಗ ಪೂರ್ಣಚಂದ್ರತೇಜಸ್ವಿ ಸೇರಿ ಅನೇಕರು ವನ್ಯಜೀವಿಗಳ ಕುರಿತು ಪುಸ್ತಕಗಳನ್ನು ಬರೆದಿದ್ದಾರೆ. ಗಿರೀಶ್ ಕಾರ್ನಾಡ್ ಅವರ ಅಗ್ನಿಮತ್ತು ಮಳೆ ಎಂಬ ಪುಸ್ತಕದಲ್ಲಿ ಕಾಡಿನ ಬಗ್ಗೆಯೇ ಬರೆದಿದ್ದಾರೆ. ಬಿಜಿಎಲ್ ಸ್ವಾಮಿ ಅವರ ಹಸಿರು ಹೊನ್ನು ಎಂಬ ಪುಸ್ತಕ ಬರೆದಿದ್ದಾರೆ. ಹೀಗೆ ಪುಸ್ತಕ ಓದುವವರೂ ಇದ್ದಾರೆ. ಕಡಿಮೆಯಾಗಿಲ್ಲ, ನಿಜವಾದ ಪರಿಸರ ಪ್ರೇಮಿಗಳು, ಕಾಡಿನೊಳಗೆ ಓಡಾಡಿ ಅವರ ಅನುಭವಗಳನ್ನು ಬರೆದರೆ ಅಂತಹ ಪುಸ್ತಕಕ್ಕೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ ಎಂದರು.
ಪ್ರಜಾವಾಣಿ-ಡೆಕ್ಕನ್ ಹೆರಾಲ್ಡ್ ಸಮೂಹದ ಕೆ.ಎನ್. ಶಾಂತಕುಮಾರ್ ಪಾಲ್ಗೊಂಡಿದ್ದರು. ಘಟ ವಾದ್ಯ ಕಲಾವಿದೆ ಸುಮನಾ ಚಂದ್ರಶೇಖರ್ ಹಾಗೂ ಹಂಸನಾದ ತಂಡದವರಿಂದ ಲಘು ಸಂಗೀತ ಏರ್ಪಡಿಸಲಾಗಿತ್ತು.