ಇಂದು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ - ಮಧ್ಯಾಹ್ನ 12.30ರಿಂದ ಲಭ್ಯ

ಸಾರಾಂಶ

ಕಳೆದ ಮಾರ್ಚ್‌/ಏಪ್ರಿಲ್‌ನಲ್ಲಿ ನಡೆದಿದ್ದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಶುಕ್ರವಾರ ಪ್ರಕಟಗೊಳ್ಳಲಿದೆ.

 ಬೆಂಗಳೂರು : ಕಳೆದ ಮಾರ್ಚ್‌/ಏಪ್ರಿಲ್‌ನಲ್ಲಿ ನಡೆದಿದ್ದ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಶುಕ್ರವಾರ ಪ್ರಕಟಗೊಳ್ಳಲಿದೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಲ್ಲಿ ಬೆಳಗ್ಗೆ 11.30ಕ್ಕೆ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಬಿಡುಗಡೆ ಮಾಡಲಿದ್ದಾರೆ. ಮಧ್ಯಾಹ್ನ 12.30ರಿಂದ ವಿದ್ಯಾರ್ಥಿಗಳು ವೆಬ್‌ಸೈಟ್‌ನಲ್ಲಿ (https://karresults.nic.in) ಫಲಿತಾಂಶ ಪರಿಶೀಲಿಸಬಹುದು ಎಂದು ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾ.21ರಿಂದ ಏ.4ರವರೆಗೆ ರಾಜ್ಯಾದ್ಯಂತ 2,818 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದ ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಒಟ್ಟು 8.40 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬರೆದಿದ್ದರು. ಏ.11ರಿಂದ ರಾಜ್ಯಾದ್ಯಂತ ನೂರಾರು ಕೇಂದ್ರಗಳಲ್ಲಿ ಸುಮಾರು 75 ಸಾವಿರಕ್ಕೂ ಹೆಚ್ಚು ಮೌಲ್ಯಮಾಪಕರು ಆರೂ ವಿಷಯಗಳಿಗೆ ಸೇರಿದ 50 ಲಕ್ಷಕ್ಕೂ ಹೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ನಡೆಸಿದ್ದರು. ಕಳೆದ ವಾರವೇ ಮೌಲ್ಯಮಾಪನ ಕಾರ್ಯ ಮುಕ್ತಾಯಗೊಂಡು ಫಲಿತಾಂಶದ ಕಂಪ್ಯೂಟರೀಕರಣ ಪ್ರಕ್ರಿಯೆ ನಡೆದಿತ್ತು.

ಪರೀಕ್ಷಾ ಅಕ್ರಮ ತಡೆಗೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದ್ದರಿಂದ ಕಳೆದ ಸಾಲಿನಲ್ಲಿ ನೀಡಿದ್ದ ಶೇ.10ರಷ್ಟು ಹೆಚ್ಚುವರಿ ಗ್ರೇಸ್‌ ಅಂಕ ವ್ಯವಸ್ಥೆಯನ್ನು ಈ ಬಾರಿ ಕೈಬಿಡಲಾಗಿದೆ. ಕಳೆದ ಬಾರಿ ಹೆಚ್ಚುವರಿ ಗ್ರೇಸ್‌ ಅಂಕ ನೀಡಿದ್ದರೂ ಶೇ.10ರಷ್ಟು ಫಲಿತಾಂಶ ಕುಸಿದಿತ್ತು. ಈ ಬಾರಿ ಇನ್ನಷ್ಟು ಕುತೂಹಲ ಮೂಡಿಸಿದೆ.

Share this article