ದೇಶದಲ್ಲಿ ಪ್ರೊಟಾನ್‌ ಮೇಲ್‌ ಸೇವೆ ನಿಷೇಧಕ್ಕೆ ಹೈಕೋರ್ಟ್‌ ನಿರ್ದೇಶನ

Published : May 01, 2025, 12:23 PM IST
karnataka highcourt

ಸಾರಾಂಶ

ಭಾರತದಲ್ಲಿ ಪ್ರೊಟಾನ್ ಮೇಲ್‌ (ಎಂಡ್‌ ಟು ಎಂಡ್‌ ಎನ್‌ಸ್ಕ್ರಿಪ್ಟೆಡ್‌ ಇ-ಮೇಲ್‌ ಸೇವೆ) ಅನ್ನು ಬ್ಲಾಕ್ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈರ್ಕೋರ್ಟ್‌ ನಿರ್ದೇಶಿಸಿದೆ.

 ಬೆಂಗಳೂರು : ಭಾರತದಲ್ಲಿ ಪ್ರೊಟಾನ್ ಮೇಲ್‌ (ಎಂಡ್‌ ಟು ಎಂಡ್‌ ಎನ್‌ಸ್ಕ್ರಿಪ್ಟೆಡ್‌ ಇ-ಮೇಲ್‌ ಸೇವೆ) ಅನ್ನು ಬ್ಲಾಕ್ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಹೈರ್ಕೋರ್ಟ್‌ ನಿರ್ದೇಶಿಸಿದೆ. ಎಂ.ಡೋಸೆರ್ ಡಿಸೈನ್ ಅಸೋಸಿಯೇಟೆಡ್ ಇಂಡಿಯಾ ಪ್ರೈ ಲಿಮಿಟೆಡ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ನಿರ್ದೇಶನ ನೀಡಿದೆ.

ಅಲ್ಲದೆ, ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮದ ಪ್ರಕ್ರಿಯೆ ಆರಂಭಿಸುವ ತನಕ, ಕೇಡು ಉಂಟು ಮಾಡುವ ಪ್ರೋಟಾನ್‌ ಯುಆರ್‌ಎಲ್‌ಗಳನ್ನು ತಕ್ಷಣವೇ ನಿರ್ಬಂಧಿಸುವಂತೆ ಇದೇ ವೇಳೆ ಸೂಚಿಸಿದೆ. ಅರ್ಜಿದಾರ ಸಂಸ್ಥೆ ಎಂ.ಡೋಸೆರ್ ಡಿಸೈನ್ ಅಸೋಸಿಯೇಟೆಡ್ ಇಂಡಿಯಾದ ಮಹಿಳಾ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಅಶ್ಲೀಲ ಭಾಷೆ, ಅಶ್ಲೀಲ ಚಿತ್ರವನ್ನೊಳಗೊಂಡ ಎಐನ ಡೀಪ್‌ಫೇಕ್ ಚಿತ್ರಗಳ ಸಹಿತ ಮೇಲ್‌ಗಳು ಬಂದಿದ್ದವು. ಈ ಬಗ್ಗೆ ಸಂಸ್ಥೆ ನೀಡಿದ್ದ ದೂರು ಆಧರಿಸಿ 2024ರ ನವೆಂಬರ್‌ನಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.

ನಂತರ ಸಂಸ್ಥೆ ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಪ್ರಕರಣ ಸಂಬಂಧ ಪೊಲೀಸರು ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಹಾಗಾಗಿ, ಪೊಲೀಸ್ ತನಿಖೆ ಮೇಲೆ ಮೇಲ್ವಿಚಾರಣೆ ನಡೆಸುವಂತೆ ಕೋರಿತ್ತು. ಆಗ ಪೊಲೀಸರು ತನಿಖಾ ವರದಿ ಸಲ್ಲಿಸಿ, ಭಾರತ ಮತ್ತು ಸ್ವಿಜರ್‌ಲ್ಯಾಂಡ್ ಮಧ್ಯೆ ಪರಸ್ಪರ ಕಾನೂನು ನೆರವಿನ ಒಪ್ಪಂದವಿಲ್ಲದ ಕಾರಣ ತನಿಖೆ ಮುಂದುವರಿಸಲು ತೊಡಕಾಗಿದೆ ಎಂದು ಹೇಳಿದ್ದರು.

ಸೌದಿ ಅರೇಬಿಯಾ, ರಷ್ಯಾದಲ್ಲಿಯೂ ನಿಷೇಧ:

ಇದರಿಂದ ಹೈಕೋರ್ಟ್‌ ಮೊರೆ ಹೋಗಿದ್ದ ಅರ್ಜಿದಾರ ಸಂಸ್ಥೆ, ಪ್ರೊಟಾನ್ ಮೇಲ್‌ ದೇಶದ ಭದ್ರತೆಗೆ ಅಪಾಯಕಾರಿ. ದೇಶದ ಹಲವು ಶಾಲೆಗಳಿಗೆ ಬಂದಿರುವ ಬಾಂಬ್ ಬೆದರಿಕೆ ಮೇಲ್‌ಗಳಿಗೆ ಪ್ರೊಟಾನ್ ಮೇಲ್ ಸೇವೆ ಬಳಸಲಾಗಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ಈಗಾಗಲೇ ಪ್ರೊಟಾನ್ ಮೇಲ್ ಸೇವೆ ನಿಷೇಧಿಸಿವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಮೇಲ್ ಸೇವೆಯ ಸರ್ವರ್ ದೇಶದೊಳಗೆ ಇರಬೇಕು ಅಥವಾ ದೇಶಕ್ಕೆ ಸರ್ವರ್‌ಗೆ ಪ್ರವೇಶಾಧಿಕಾರ ಇರಬೇಕು. ಆದ್ದರಿಂದ ಭಾರತದಲ್ಲಿ ಪ್ರೊಟಾನ್ ಮೇಲ್‌ಗಳನ್ನು ನಿಷೇಧಿಸಲು ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಎಂದು ವಾದಿಸಿದರು.

ಪ್ರೋಟಾನ್‌ ಮೇಲ್‌ ಸಂಸ್ಥೆ ಪರ ವಕೀಲರು, ಪ್ರೊಟಾನ್ ಮೇಲ್ ನ ಸರ್ವರ್‌ಗಳು ದೇಶದ ಹೊರಗಿವೆ. ಆದ್ದರಿಂದ ಭಾರತದ ಕಾನೂನಿಗೆ ಸಂಸ್ಥೆ ಬಾಧ್ಯತೆ ಹೊಂದಿಲ್ಲ. ಆದರೆ, ಪ್ರೊಟಾನ್ ಬಳಕೆದಾರರು ತಮ್ಮ ಸರ್ವರ್ ಸ್ಥಳವನ್ನು ಭಾರತ ಎಂದು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ ಎಂದು ಸಮರ್ಥಿಸಿಕೊಂಡರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕೇಂದ್ರ ಸರ್ಕಾರಕ್ಕೆ ಈ ಮೇಲಿನಂತೆ ನಿರ್ದೇಶಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ