ಬೇಸಿಗೆ ರಜೆಗೆ ಅಡ್ಡಿಯಾಗದಂತೆ ವಿಶೇಷ ತರಗತಿಗಳ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ 2 ವೇಳಾಪಟ್ಟಿಯನ್ನು ಪರಿಷ್ಕರಿಸಿ ಸರ್ಕಾರ ಮುಂದೂಡಿದೆ.
ಬೆಂಗಳೂರು: ಎಸ್ಸೆಸ್ಸೆಲ್ಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಅವಧಿಯಲ್ಲಿ ‘ವಿಶೇಷ ಬೋಧನಾ ತರಗತಿ’ ನಡೆಸಲು ಪ್ರೌಢಶಾಲಾ ಶಿಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇಸಿಗೆ ರಜೆಗೆ ಅಡ್ಡಿಯಾಗದಂತೆ ವಿಶೇಷ ತರಗತಿಗಳ ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ 2 ವೇಳಾಪಟ್ಟಿಯನ್ನು ಪರಿಷ್ಕರಿಸಿ ಸರ್ಕಾರ ಮುಂದೂಡಿದೆ.
ಮೇ 15 ರಿಂದ ಜೂನ್ 6ರವರೆಗೆ ನಡೆಸುವಂತೆ ಸೂಚಿಸಿದ್ದ ವಿಶೇಷ ತರಗತಿಗಳನ್ನು ಬೇಸಿಗೆ ರಜೆ ಮುಗಿದ ಬಳಿಕ ಅರ್ಥಾತ್ 2024-25ನೇ ಸಾಲಿನ ತರಗತಿಗಳು ಆರಂಭವಾಗುವ ಮೇ 29ರಿಂದ ಆರಂಭಿಸಿ ಜೂನ್ 13ರವರೆಗೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಶುಕ್ರವಾರ ಪರಿಷ್ಕೃತ ಸುತ್ತೋಲೆ ಹೊರಡಿಸಿದೆ.
ಅಲ್ಲದೆ, ಜೂನ್ 7ರಿಂದ 14 ವರೆಗೆ ನಿಗದಿಯಾಗಿದ್ದ ಪರೀಕ್ಷೆ 2 ಅನ್ನು ಜೂನ್ 14ರಿಂದ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಇಲಾಖೆ ಸೂಚಿಸಿದೆ. ಮಂಡಳಿಯು ಈ ಸಂಬಂಧ ಪ್ರತ್ಯೇಕ ವೇಳಾಪಟ್ಟಿ ಪ್ರಕಟಿಸಬೇಕಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸೌಧದಲ್ಲಿ ವಿವಿಧ ಇಲಾಖಾ ಸಚಿವರು ಮತ್ತು ಉನ್ನತ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಬೇಸಿಗೆ ರಜೆ ಅವಧಿಯಲ್ಲಿ ಎಸ್ಸೆಸ್ಸೆಲ್ಸಿ ವಿಶೇಷ ತರಗತಿ ನಡೆಸಲು ಶಿಕ್ಷಕರಿಂದ ವಿರೋಧ ವ್ಯಕ್ತವಾಗುತ್ತಿರುವ ವಿಚಾರ ಪ್ರಸ್ತಾಪವಾಗಿದೆ.
ಇದರಿಂದ ಶಿಕ್ಷಕರು ತಮ್ಮ ರಜೆ ಕಡಿತವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ, ವಿವಿಧ ವಿಧಾನ ಪರಿಷತ್ ಹಾಲಿ, ಮಾಜಿ ಸದಸ್ಯರೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಬೇಸಿಗೆ ರಜೆ ಮುಗಿದ ಬಳಿಕ ವಿಶೇಷ ತರಗತಿಳನ್ನು ನಡೆಸಲು ಮುಖ್ಯಮಂತ್ರಿಗಳು ಸೂಚಿಸಿದರು ಎಂದು ತಿಳಿದು ಬಂದಿದೆ. ಇದಕ್ಕೆ ಅಧಿಕಾರಿಗಳು ಈಗಾಗಲೇ ಜೂನ್ 7ರಿಂದ ಪರೀಕ್ಷೆ 2ಗೆ ವೇಳಾಪಟ್ಟಿ ಪ್ರಕಟಿಸಿರುವ ಮಾಹಿತಿಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ, ಪರೀಕ್ಷೆಯನ್ನೂ ಒಂದು ವಾರ ಮುಂದೂಡಲು ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಸಭೆ ಮುಗಿದ ಬೆನ್ನಲ್ಲೇ ಇತ್ತ ಶಿಕ್ಷಣ ಇಲಾಖೆ ಪ್ರೌಢ ಶಿಕ್ಷಣ ನಿರ್ದೇಶಕರು ಸುತ್ತೋಲೆ ಹೊರಡಿಸಿ ಬೇಸಿಗೆ ರಜೆ ಬಳಿಕ ವಿಶೇಷ ತರಗತಿ ನಡೆಸಲು ಹೊಸ ಸುತ್ತೋಲೆ ಹೊರಡಿಸಿದ್ದಾರೆ. ಜೊತೆಗೆ ಪರೀಕ್ಷೆ 2 ಅನ್ನು ಜೂ.14ರಿಂದ ನಡೆಸಲು ಪರಿಷ್ಕೃತ ವೇಳಾಪಟ್ಟಿಯನ್ನು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.
- ವಿಶೇಷ ಬೋಧನಾ ತರಗತಿಗಳು ಕೂಡ ಮುಂದೂಡಿಕೆ
- ಶಿಕ್ಷಕ ವರ್ಗದ ತೀವ್ರ ವಿರೋಧಕ್ಕೆ ಮಣಿದ ಸರ್ಕಾ