ಕಾಲ್ತುಳಿತ : ಪೊಲೀಸರ ಅಮಾನತಿಗೆ ಸಿಎಟಿ ಆಕ್ಷೇಪ

Published : Jun 26, 2025, 10:28 AM IST
Karnataka Crowd Control Bill 2025 Strict Law After RCB Victory Stampede Tragedy

ಸಾರಾಂಶ

ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಮೇಲೆ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಿರುವ ಸರ್ಕಾರದ ಕ್ರಮವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ತೀವ್ರವಾಗಿ ಆಕ್ಷೇಪಿಸಿ, ಅಸಮಾಧಾನ ವ್ಯಕ್ತಪಡಿಸಿದೆ.

  ಬೆಂಗಳೂರು : ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಕರ್ತವ್ಯ ಲೋಪ ಆರೋಪ ಮೇಲೆ ಪೊಲೀಸ್‌ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಪಡಿಸಿರುವ ಸರ್ಕಾರದ ಕ್ರಮವನ್ನು ಕೇಂದ್ರ ಆಡಳಿತಾತ್ಮಕ ನ್ಯಾಯಾಧಿಕರಣ (ಸಿಎಟಿ) ತೀವ್ರವಾಗಿ ಆಕ್ಷೇಪಿಸಿ, ಅಸಮಾಧಾನ ವ್ಯಕ್ತಪಡಿಸಿದೆ.

ಪ್ರಕರಣ ಸಂಬಂಧ ತಮ್ಮನ್ನು ಸೇವೆಯಿಂದ ಅಮಾನತುಪಡಿಸಿ ಸರ್ಕಾರ ಹೊರಡಿಸಿದ ಆದೇಶ ರದ್ದು ಕೋರಿ ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತರಾಗಿದ್ದ ಐಪಿಎಸ್‌ ಅಧಿಕಾರಿ ವಿಕಾಸ್ ಕುಮಾರ್ ವಿಕಾಸ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧಿಕರಣದ ಬೆಂಗಳೂರು ಪೀಠ, ಯಾವುದೇ ಆಧಾರವಿಲ್ಲದೆ ಪೊಲೀಸ್‌ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದಾರೆ ಎಂದು ತೀರ್ಮಾನಿಸಿ ಅಮಾನತು ಆದೇಶ ಹೊರಡಿಸಿರುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದೆ. ಅಂತಿಮವಾಗಿ ಅರ್ಜಿ ಕುರಿತು ವಿಚಾರಣೆ ಪೂರ್ಣಗೊಳಿಸಿರುವ ಪೀಠ ತೀರ್ಪು ಕಾಯ್ದಿರಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರ ಪರ ಹೈಕೋರ್ಟ್‌ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ವಾದ ಮಂಡಿಸಿ, ಕರ್ತವ್ಯಲೋಪ ಎಸಗಿರುವುದರಿಂದ ಅರ್ಜಿದಾರರನ್ನು ಅಮಾನತು ಮಾಡಲಾಗಿದೆ ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ. ಆದರೆ, ಕರ್ತವ್ಯಲೋಪ ನಿರ್ಧಾರವಾಗಬೇಕಾದರೆ ಪ್ರಾಥಮಿಕ ವಿಚಾರಣೆ (ಇಲಾಖಾ ವಿಚಾರಣೆ ) ನಡೆಬೇಕಾಗುತ್ತದೆ. ಪ್ರಕರಣದ ಕುರಿತು ಜೂ.4ರಂದು ಮ್ಯಾಜಿಸ್ಟೀರಿಯಲ್‌ ವಿಚಾರಣೆಗೆ ಆದೇಶಿಸಲಾಗಿದೆ. ಪ್ರಾಥಮಿಕ ವಿಚಾರಣೆಯಿಲ್ಲದೆ ಮತ್ತು ಮ್ಯಾಜಿಸ್ಟೀರಿಯಲ್‌ ವಿಚಾರಣೆ ವರದಿ ಬರುವ ಮುನ್ನವೇ ಹಾಗೂ ಅರ್ಜಿದಾರರು ಕರ್ತವ್ಯಲೋಪ ಎಸಗಿದ್ದಾರೆ ಎಂಬುದು ಸಾಬೀತು ಆಗದೆಯೇ ಜೂ.5ರಂದು ಅಮಾನತು ಅಮಾನತು ಆದೇಶ ಹೊರಡಿಸಲಾಗಿದೆ. ಇದು ಕಾನೂನುಬಾಹಿರವಾಗಿದ್ದು, ಅಮಾನತು ಆದೇಶ ರದ್ದುಪಡಿಸಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಅರ್ಜಿದಾರ ಅಧಿಕಾರಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಯಾರು ನಿಮಗೆ (ಸರ್ಕಾರಕ್ಕೆ) ಮಾಹಿತಿ ನೀಡಿದರು ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು.

ಸರ್ಕಾರದ ಪರ ವಕೀಲರು ಉತ್ತರಿಸಿ, ಅರ್ಜಿದಾರರು ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ. ಆರ್‌ಸಿಬಿ, ಕೆಎಸ್‌ಸಿಎ ಮತ್ತು ಡಿಎನ್‌ಎ ಸಂಸ್ಥೆಗಳು ಸರ್ಕಾರದ ಅನುಮತಿ ಪಡೆಯದೇ ವಿಜಯೋತ್ಸವ ಸಮಾರಂಭ ಆಯೋಜಿಸಿವೆ. ಪೊಲೀಸರು ವಿಜಯೋತ್ಸವ ವೇಳೆ ಬಂದೋಬಸ್ತ್ ಮಾಡಿದ್ದಾರೆ. ಆದರೂ ಇನ್ನೂ ಹೆಚ್ಚಿನ ಬಂದೋಬಸ್ತ್‌ ಮಾಡಬೇಕಾಗಿತ್ತು. ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸದ ಕಾರಣ ಅಮಾನತು ಮಾಡಲಾಗಿದೆ ಎಂದು ಸಮರ್ಥಿಸಿಕೊಂಡು, ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಆರ್‌ಸಿಬಿ ಐಪಿಎಲ್‌ ಟ್ರೋಫಿ ಗೆದ್ದ ನಂತರ ಜೂ.3ರಂದು ಇಡೀ ರಾತ್ರಿ ನಗರದಲ್ಲಿ ಜನ ಸಂಭ್ರಮಾಚರಣೆ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಗಾಗಿ ಪೊಲೀಸರು ರಾತ್ರಿಪೂರ್ತಿ ಕೆಲಸ ಮಾಡಿದ್ದಾರೆ. ಹೀಗಿದ್ದರೂ ಮರುದಿನವೇ ವಿಜಯೋತ್ಸವ ನಡೆಸಲು ಹೇಗೆ ನಿರ್ಧಾರ ಮಾಡಲಾಯಿತು? ವಿಜಯೋತ್ಸವ ಅನುಮತಿ ನೀಡಬಾರದು ಎಂದು ಪೊಲೀಸ್‌ ಇಲಾಖೆ ಸರ್ಕಾರಕ್ಕೆ ತಿಳಿಸಿತ್ತು. ಆದರೂ ಪೊಲೀಸರ ಮಾತು ಕೇಳದೆ ಏಕೆ ವಿಜಯೋತ್ಸವ ಆಚರಣೆ ಮಾಡಲಾಯಿತು ಎಂದು ಸರ್ಕಾರದ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚಳಕ್ಕೆ ಆದ್ಯತೆ ನೀಡಿ
ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವೇ ಸುಗ್ಗಿ ಸಂಕ್ರಾಂತಿ