ರೈತರಿಗೆ ಗ್ಯಾರಂಟಿ ನಿಲ್ಲಿಸಿ ವಿದ್ಯುತ್‌ ಖರೀದಿಸಿ: ಬಿಜೆಪಿ

Published : Sep 24, 2026, 11:45 AM IST
farmer

ಸಾರಾಂಶ

ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಿ ಆ ಹಣದಿಂದ ವಿದ್ಯುತ್ ಖರೀದಿ ಮಾಡಿ ರೈತರಿಗೆ ಕೊಡಿ. ಜತೆಗೆ ಉಳ್ಳವರಿಗೆ ನೀಡುತ್ತಿರುವ ಗ್ಯಾರಂಟಿ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಸೀಮಿತಗೊಳಿಸಿ ಎಂದು ಬಿಜೆಪಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ ಘಟನೆ ಬುಧವಾರ ಸದನದಲ್ಲಿ ನಡೆಯಿತು.

ವಿಧಾನಸಭೆ : ರಾಜ್ಯದಲ್ಲಿ ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಿ ಆ ಹಣದಿಂದ ವಿದ್ಯುತ್ ಖರೀದಿ ಮಾಡಿ ರೈತರಿಗೆ ಕೊಡಿ. ಜತೆಗೆ ಉಳ್ಳವರಿಗೆ ನೀಡುತ್ತಿರುವ ಗ್ಯಾರಂಟಿ ಬಿಪಿಎಲ್‌ ಕಾರ್ಡ್‌ದಾರರಿಗೆ ಮಾತ್ರ ಸೀಮಿತಗೊಳಿಸಿ ಎಂದು ಬಿಜೆಪಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ ಘಟನೆ ಬುಧವಾರ ಸದನದಲ್ಲಿ ನಡೆಯಿತು.

ಇದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ಯಾವ ಮಾನದಂಡಗಳ ಆಧಾರದ ಮೇಲೆ ಗ್ಯಾರಂಟಿ ಸ್ಥಗಿತಗೊಳಿಸಬೇಕು. ಯಾರಿಗೆ ಸ್ಥಗಿತಗೊಳಿಸಬೇಕು ಎಂಬುದು ತಿಳಿಸಿ. ಸರ್ಕಾರ ನಿಮ್ಮ ಸಲಹೆ ಸ್ವೀಕರಿಸಲು ಸಿದ್ಧವಿದೆ ಎಂದು ಹೇಳಿದರು.

ಮಧ್ಯಪ್ರವೇಶಿಸಿದ ವಿರೋಧಪಕ್ಷದ ನಾಯಕ ಆರ್‌. ಅಶೋಕ್‌, ಬಿಜೆಪಿ ಸದಸ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರೂ ಆದ ಬಿ.ವೈ. ವಿಜಯೇಂದ್ರ ಗ್ಯಾರಂಟಿ ವಿಚಾರ ಮಾತನಾಡದಂತೆ ತಡೆದರು.

ರೈತರ ಗ್ಯಾರಂಟಿ ಕಡಿತಗೊಳಿಸಿ ವಿದ್ಯುತ್‌ ನೀಡಿ:

ಬರ ಸಮಸ್ಯೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಜೆಪಿ ಸದಸ್ಯ ಸಿದ್ದು ಸವದಿ, ನಮ್ಮಲ್ಲಿ ತೀವ್ರ ವಿದ್ಯುತ್‌ ಸಮಸ್ಯೆಯಾಗುತ್ತಿದೆ. ವಿದ್ಯುತ್‌ ಖರೀದಿಸಿ ಆದರೂ ರೈತರಿಗೆ ವಿದ್ಯುತ್‌ ಪೂರೈಸಬೇಕು. ಹಣ ಇಲ್ಲದಿದ್ದರೆ ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ಕಡಿತಗೊಳಿಸಬೇಕು. ಆ ಹಣದಿಂದ ವಿದ್ಯುತ್‌ ಖರೀದಿಸಿ ನೀಡಬೇಕು ಎಂದು ಆಗ್ರಹಿಸಿದರು.

ಈ ವೇಳೆ ಎದ್ದು ನಿಂತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ‘ಯಾವ ರೀತಿ ರೈತರಿಗೆ ನೀಡುತ್ತಿರುವ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಬೇಕು ಎಂಬ ಬಗ್ಗೆ ವಿವರಣೆ ನೀಡಿ. ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಯೋಜನೆ ಸೇರಿದಂತೆ ಐದೂ ಗ್ಯಾರಂಟಿಗಳೂ ರೈತರು ಹಾಗೂ ಕುಟುಂಬ ಸದಸ್ಯರಿಗೆ ನೀಡುತ್ತಿದ್ದೇವೆ. ಇದರಲ್ಲಿ ಯಾವುದನ್ನು ಸ್ಥಗಿತಗೊಳಿಸಬೇಕು ತಿಳಿಸಿ’ ಎಂದು ಹೇಳಿದರು.

ಉಳ್ಳುವರಿಗೆ ಗ್ಯಾರಂಟಿ ನಿಲ್ಲಿಸಿ- ಸುರೇಶ್‌ಗೌಡ:

ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಸುರೇಶ್‌ ಗೌಡ, ಉಳ್ಳವರಿಗೆ ಕೊಡುತ್ತಿರುವ ಗ್ಯಾರಂಟಿಗಳನ್ನು ನಿಲ್ಲಿಸಿ. ಬಡವರಿಗೆ ಮಾತ್ರ ನೀಡಿ, ಎಲ್ಲರಿಗೂ ಗ್ಯಾರಂಟಿ ಎನ್ನುತ್ತಿದ್ದೀರಲ್ಲ ಅದು ಸರಿಯಲ್ಲ ಎಂದು ಆಗ್ರಹಿಸಿದರು.

ಆಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು, ‘ಉಳ್ಳುವರು, ಇಲ್ಲದವರು ಎಂಬುದನ್ನು ಹೇಗೆ ಗುರುತಿಸಬೇಕು. ಅದಕ್ಕೆ ಮಾನದಂಡವೇನು ಎಂಬುದನ್ನು ತಿಳಿಸಿ. ಇಬ್ಬರನ್ನೂ ಹೇಗೆ ಪ್ರತ್ಯೇಕಿಸಬೇಕು ಎಂದು ಹೇಳಿ ಹಾಗೆಯೇ ಮಾಡೋಣ’ ಎಂದರು.

ನಿಮ್ಮ ಬಳಿ ಬಿಪಿಎಲ್‌ ಕಾರ್ಡ್‌ ಮಾನದಂಡ ಇದೆಯಲ್ಲಾ ಅದೇ ರೀತಿ ಮಾಡಿ ಎಂದು ಸುರೇಶ್‌ಗೌಡ ಹೇಳಿದರು. ಡಿ.ಕೆ. ಶಿವಕುಮಾರ್‌, ‘ಬಿಪಿಎಲ್‌ ಕಾರ್ಡ್‌ ಇರುವವರು ಬಿಟ್ಟು ಉಳಿದವರಿಗೆ ಕೊಡಬೇಡಬಾರದೇ?’ ಎಂದು ಪ್ರಶ್ನಿಸಿದರು.

ಆಗ ಸಿದ್ದು ಸವದಿ ಹಾಗೂ ಸುರೇಶ್‌ಗೌಡ, ‘ಹೌದು ಬಿಪಿಎಲ್‌ ಮಾನದಂಡದ ಮೇಲೆಯೇ ಮಾಡಿ ಉಳ್ಳುವರಿಗೆ ಕೊಡಬೇಡಿ’ ಎಂದರು.

ಎಲ್ಲರಿಗೂ ಕೊಡಿ- ಅಶೋಕ್‌:

ಮಧ್ಯಪ್ರವೇಶಿಸಿದ ಆರ್‌.ಅಶೋಕ್‌, ‘ಇಲ್ಲ ಇಲ್ಲ ಎಲ್ಲರಿಗೂ ಗ್ಯಾರಂಟಿ ಕೊಡಿ. ನೀವು ಪ್ರಣಾಳಿಕೆಯಲ್ಲಿ ಎಲ್ಲರಿಗೂ ಕೊಡುತ್ತೇವೆ ಎಂದು ಹೇಳಿದ್ದೀರಿ. ಅದರಂತೆ ಎಲ್ಲರಿಗೂ ಕೊಡಿ’ ಎಂದು ಮುಖ್ಯಮಂತ್ರಿ ಅವರಿಗೆ ತಿಳಿಸಿದರು.

ಸ್ವಪಕ್ಷೀಯ ಸದಸ್ಯರ ಹೇಳಿಕೆಗೆ ಆಕ್ಷೇಪಿಸಿಸಿದ ಅವರು, ‘ನೀವು ನಿಮ್ಮ ಕ್ಷೇತ್ರದ ವಿದ್ಯುತ್‌ ಸಮಸ್ಯೆ ಮಾತ್ರ ಮಾತನಾಡಿ. ಗ್ಯಾರಂಟಿ ವಿಚಾರ ನಿಮಗೆ ಯಾಕೆ?’ ಎಂದು ಗರಂ ಆದರು.

ಬಿ.ವೈ.ವಿಜಯೇಂದ್ರ, ’ಸಿದ್ದು ಸವದಿ ಹೇಳಿಕೆಗೆ ಆಕ್ಷೇಪಿಸಿ ‘ಅನುದಾನ ಇಲ್ಲದೆ ಅವರೇ ಎಲ್ಲ ಕಡಿತಗೊಳಿಸುತ್ತಿದ್ದಾರೆ. ಅದನ್ನು ನೀವು ಯಾಕೆ ಹೇಳುತ್ತೀರಿ. ಅವರೇ ಮುಚ್ಚುತ್ತಾರೆ ಸುಮ್ಮನಿರಿ’ ಎಂದು ಸುಮ್ಮನಾಗಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರ್ತಿದ್ದ ಗ್ಯಾಂಗ್‌ನ ಬಂಧನ
ಶಿಕ್ಷಣ ನೀತಿ ಬದಲಾಗದೆ ದೇಶಬದಲಾಗದು: ಡಾ. ಬಿಳಿಮಲೆ