ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಮುಂದುವರಿದ ಬೇಸಿಗೆ ಮಳೆ

ಸಾರಾಂಶ

ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದ್ದು, ಬುಧವಾರ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.

ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ಮಳೆ ಮುಂದುವರಿದಿದ್ದು, ಬುಧವಾರ ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ.

ಸುಳ್ಯ, ಪುತ್ತೂರು, ಮಂಗಳೂರು, ಸುರತ್ಕಲ್‌ ಸೇರಿ ದ.ಕ.ಜಿಲ್ಲೆಯ ಹಲವೆಡೆ ಸಂಜೆ 5.30ರಿಂದ 1 ತಾಸು ಉತ್ತಮ ಮಳೆಯಾಗಿದೆ. ಬೆಳ್ತಂಗಡಿ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆ ಬಿದ್ದಿದ್ದು, 30ಕ್ಕೂ ಅಧಿಕ ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. ಧರ್ಮಸ್ಥಳ ಸುತ್ತಮುತ್ತ ರಾತ್ರಿ 8 ಗಂಟೆಯ ಬಳಿಕ ಮತ್ತೆ ಮಳೆ ಸುರಿಯಿತು.

ಚಾಮರಾಜನಗರ ಜಿಲ್ಲೆಯ ಹಲವೆಡೆ ಸಂಜೆಯ ವೇಳೆ 5 ಗಂಟೆಗೆ ವರ್ಷದ ಮೊದಲ ವರ್ಷಧಾರೆ ಸುರಿಯಿತು. ಚಾಮರಾಜನಗರ, ಬಂಡೀಪುರ ರಾಷ್ಟ್ರೀಯ ಉದ್ಯಾನವನ, ಗುಂಡ್ಲುಪೇಟೆ ಸುತ್ತಮುತ್ತ, ಮಲೆಮಹದೇಶ್ವರ ಬೆಟ್ಟದಲ್ಲಿ ಸುಮಾರು ಅರ್ಧಗಂಟೆ ಮಳೆ ಸುರಿಯಿತು. ಮಲೆಮಹದೇಶ್ವರ ಬೆಟ್ಟಕ್ಕೆ ವರುಣದೇವ ಜಲಾಭಿಷೇಕ ಮಾಡಿದಂತೆ ಭಾಸವಾಯಿತು. 

ಅಕಾಲಿಕ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಪರದಾಡಿದರು. ಇದೇ ವೇಳೆ, ಹಾಸನ ಜಿಲ್ಲೆಯ ಹಾಸನ, ಆಲೂರು, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆ ತನ್ನ ಆರ್ಭಟ ತೋರಿತು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ ತಾಲೂಕುಗಳ ವ್ಯಾಪ್ತಿಯಲ್ಲಿಯೂ ಸಂಜೆಯ ವೇಳೆ ಸುಮಾರು 20 ನಿಮಿಷಗಳಷ್ಟು ಮಳೆ ಸುರಿದಿದೆ. 

Share this article