ಕಂದಾಯ ಕೋರ್ಟ್‌ಗಳಲ್ಲಿ ಪ್ರಕರಣ ಬಾಕಿ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ : ಸಿಎಂ

Published : May 31, 2025, 09:51 AM IST
Karnataka Chief Minister Siddaramaiah (File Photo/ANI)

ಸಾರಾಂಶ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ 2-3 ಜಿಲ್ಲೆಗಳಲ್ಲಿನ ಎಸಿ, ಡಿಸಿ ಹಾಗೂ ತಹಸೀಲ್ದಾರ್‌ ನ್ಯಾಯಾಲಯಗಳಲ್ಲಿ 5 ವರ್ಷಕ್ಕಿಂತ ಹಳೆಯ ಪ್ರಕರಣ ಬಾಕಿ ಇರುವುದು ಅಕ್ಷಮ್ಯ.

 ಬೆಂಗಳೂರು :  ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ 2-3 ಜಿಲ್ಲೆಗಳಲ್ಲಿನ ಎಸಿ, ಡಿಸಿ ಹಾಗೂ ತಹಸೀಲ್ದಾರ್‌ ನ್ಯಾಯಾಲಯಗಳಲ್ಲಿ 5 ವರ್ಷಕ್ಕಿಂತ ಹಳೆಯ ಪ್ರಕರಣ ಬಾಕಿ ಇರುವುದು ಅಕ್ಷಮ್ಯ. ಅಂತಹ ಅಧಿಕಾರಿಗಳಿಗೆ ನೋಟಿಸ್‌ ನೀಡಿ ಅಮಾನತು ಮಾಡಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಅಲ್ಲದೆ, ಕೆರೆ ಒತ್ತುವರಿ ತೆರವು ಸೂಚನೆ ಹೊರತಾಗಿಯೂ ಒಂದೂ ಕೆರೆ ಒತ್ತುವರಿ ತೆರವುಗೊಳಿಸಿದ ಜಿಲ್ಲಾಧಿಕಾರಿ, ಸಿಇಓಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ವಿಧಾನಸೌಧದಲ್ಲಿ ಶುಕ್ರವಾರ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಓ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಜತೆ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಅವರು ಕೆಲ ಜಿಲ್ಲಾಡಳಿತಗಳ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎಸಿ, ಡಿಸಿ ಹಾಗೂ ತಹಸೀಲ್ದಾರ್ ಕೋರ್ಟ್‌ಗಳಲ್ಲಿ ಬಾಕಿ ಕೇಸುಗಳು ಶೀರ್ಘ ವಿಲೇವಾರಿ ಆಗುತ್ತಿವೆ. ಆದರೆ ಬೆಂಗಳೂರು ಗ್ರಾಮಾಂತರ ಮತ್ತು ಉಳಿದ ಎರಡು ಜಿಲ್ಲೆಗಳಲ್ಲಿ ಮಾತ್ರ ಐದು ವರ್ಷಕ್ಕೂ ಹಳೆಯದಾದ ಪ್ರಕರಣಗಳು ಬಾಕಿ ಇವೆ. ನ್ಯಾಯದಾನ ವಿಳಂಬ ನ್ಯಾಯದಾನ ತಿರಸ್ಕರಿಸಿದಂತೆ ಎಂಬುದನ್ನು ನೆನಪಿಡಬೇಕು. ಉಳಿದ ಜಿಲ್ಲೆಗಳಲ್ಲಿ ಪ್ರಗತಿ ಕಾಣುವಾಗ ಕೆಲ ಜಿಲ್ಲೆಗಳಲ್ಲಿ ಮಾತ್ರ ಆಗುತ್ತಿಲ್ಲ‌ ಎಂದರೆ ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದರು.

ವಸತಿ ಯೋಜನೆ ವಿಳಂಬಕ್ಕೆ ತರಾಟೆ

ವಸತಿ ಯೋಜನೆಗಳು ಕೆಲ ಜಿಲ್ಲೆಗಳಲ್ಲಿ ನಿರೀಕ್ಷಿತ ವೇಗದಲ್ಲಿ ಅನುಷ್ಠಾನಗೊಳ್ಳುತ್ತಿಲ್ಲ. ವಿವಿಧ ವಸತಿ ಯೋಜನೆಗಳಡಿ 6,29,961 ಮನೆಗಳು ಮಂಜೂರಾಗಿದ್ದು, 3,63,769 ಮನೆಗಳು ಪ್ರಗತಿಯಲ್ಲಿವೆ. ನಗರ ಪ್ರದೇಶದಲ್ಲಿ 42,538 ಮನೆಗಳು ಮಂಜೂರಾಗಿದ್ದು, 37,303 ಮನೆಗಳು ಪ್ರಗತಿಯಲ್ಲಿವೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ರಾಜ್ಯದಲ್ಲಿ ಇನ್ನೂ 5,22,160 ಫಲಾನುಭವಿಗಳ ಆಯ್ಕೆ ಬಾಕಿಯಿದ್ದು, ಆಯ್ಕೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಬಡವರ ಮನೆ ನಿರ್ಮಿಸುವ ಕೆಲಸ ಇಷ್ಟು ವಿಳಂಬ ಮಾಡಿದರೆ ಹೇಗೆ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.

ಇ-ಖಾತಾ ಒದಗಿಸಿ

ನಗರಾಭಿವೃದ್ಧಿ ಇಲಾಖೆಯಡಿ ಒಟ್ಟು 46,85,107 ಎ-ಖಾತಾ ಸ್ವತ್ತುಗಳನ್ನು ಗುರುತಿಸಲಾಗಿದ್ದು, 21,18,459 ಸ್ವತ್ತುಗಳಿಗೆ ಇ-ಖಾತಾ ನೀಡಲಾಗಿದೆ. 9,93,342 ಅನಧಿಕೃತ ಬಿ-ಖಾತಾ ಸ್ವತ್ತುಗಳನ್ನು ಗುರುತಿಸಲಾಗಿದ್ದು, ಈವರೆಗೆ 2,21,691 ಬಿ-ಖಾತಾ ನೀಡಲಾಗಿದೆ. ಎಲ್ಲಾ ಸ್ವತ್ತುಗಳಿಗೆ ನಿಯಮಾನುಸಾರ ಖಾತಾ ಒದಗಿಸಿ ತೆರಿಗೆ ವ್ಯಾಪ್ತಿಗೆ ಬರಲು ಕ್ರಮ ಕೈಗೊಳ್ಳಬೇಕು. ಗ್ರಾಪಂ ಮಟ್ಟದಲ್ಲಿ ಬಾಕಿಯಿರುವ ಇ-ಸ್ವತ್ತು ಅರ್ಜಿಗಳನ್ನು ನಿಗದಿತ ಅವಧಿ ಒಳಗಾಗಿ ವಿಲೇವಾರಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ