ಅಪ್ರಾಪ್ತ ಮಗನನ್ನು ತಂದೆ ತೆಕ್ಕೆಗೆ ನೀಡಿದ ಹೈಕೋರ್ಟ್‌ -14 ವರ್ಷ ಅಜ್ಜಿ, ಇಬ್ಬರು ಅತ್ತೆಯರ ವಶದಲ್ಲಿದ್ದ ಮಗು

ಸಾರಾಂಶ

ತಮ್ಮ ಮಗನನ್ನು ಸುಪರ್ದಿಗೆ ಪಡೆಯಲು ತಂದೆಯೊಬ್ಬರು ಹೆತ್ತ ತಾಯಿ ಮತ್ತು ಒಡಹುಟ್ಟಿದ ಸಹೋದರಿಯೊಂದಿಗೆ ದಶಕದಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಹೈಕೋರ್ಟ್‌ ತೆರೆ ಎಳೆದಿದೆ.

 ವೆಂಕಟೇಶ್‌ ಕಲಿಪಿ

 ಬೆಂಗಳೂರು : ತಮ್ಮ ಮಗನನ್ನು ಸುಪರ್ದಿಗೆ ಪಡೆಯಲು ತಂದೆಯೊಬ್ಬರು ಹೆತ್ತ ತಾಯಿ ಮತ್ತು ಒಡಹುಟ್ಟಿದ ಸಹೋದರಿಯೊಂದಿಗೆ ದಶಕದಿಂದ ನಡೆಸುತ್ತಿದ್ದ ಕಾನೂನು ಹೋರಾಟಕ್ಕೆ ಹೈಕೋರ್ಟ್‌ ತೆರೆ ಎಳೆದಿದೆ.

ಅಪರೂಪದ ಪ್ರಕರಣವೊಂದರಲ್ಲಿ ಸುಮಾರು 14 ವರ್ಷಗಳಿಂದ ಅಜ್ಜಿ ಮತ್ತು ಅತ್ತೆಯಂದಿರ ಆರೈಕೆಯಲ್ಲಿ ಬೆಳೆಯುತ್ತಿದ್ದ ಅಪ್ರಾಪ್ತ ಮಗುವನ್ನು ಮರಳಿ ತಂದೆ ತೆಕ್ಕೆಗೆ ನೀಡಿ ಹೈಕೋರ್ಟ್‌ ಆದೇಶಿಸಿದೆ.

ವರ್ಷದಲ್ಲಿ ಕೇವಲ ಮೂರು ತಿಂಗಳಷ್ಟೇ ಹೆತ್ತ ಮಗನನ್ನು ಸುಪರ್ದಿಗೆ ಕೊಟ್ಟಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ನಗರದ ರವಿ ಹಾಗೂ ಪತ್ನಿ ಸುಮಾ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೆ.ಎಸ್‌.ಮುದಗಲ್‌ ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಮಗನ ಸುಪರ್ದಿಯನ್ನು ವರ್ಷ ಪೂರ್ತಿ ಮೇಲ್ಮನವಿದಾರರಿಗೆ (ಮಗುವಿನ ಹೆತ್ತ ತಂದೆ-ತಾಯಿ) ನೀಡಿರುವ ಪೀಠ, ರವಿಯ ತಾಯಿ ಮತ್ತು ಇಬ್ಬರು ಸಹೋದರಿಯರಿಗೆ ತಿಂಗಳ ಮೊದಲ ಮತ್ತು 3ನೇ ವಾರದ ಕೊನೆಯಲ್ಲಿ ಭೇಟಿಯಾಗುವ ಹಕ್ಕು ಕಲ್ಪಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಿದೆ.

ಪ್ರಕರಣದ ವಿವರ: ರವಿ ಮತ್ತು ಸುಮಾ (ಹೆಸರು ಬದಲಿಸಲಾಗಿದೆ) ದಂಪತಿಗೆ 2009ರ ಜ.20ರಂದು ಪುತ್ರ ಅಖಿಲ್ ಜನಿಸಿದ್ದ. ರವಿ ದಂಪತಿ, ರವಿ ಅವರ ತಾಯಿ ಮಾಲಾ, ಸಹೋದರಿಯರಾದ ಲೀಲಾ ಮತ್ತು ಶೀಲಾ (ಹೆಸರು ಬದಲಿಸಲಾಗಿದೆ) ಎಲ್ಲರೂ ಒಂದೇ ಮನೆಯಲ್ಲಿ ಪ್ರತ್ಯೇಕ ಮಹಡಿಯಲ್ಲಿ ನೆಲೆಸಿದ್ದಾರೆ. ಲೀಲಾ ಮತ್ತು ಶೀಲಾ ಅವಿವಾಹಿತರಾಗಿದ್ದು, ತಾಯಿಯೊಂದಿಗೆ ನೆಲೆಸಿದ್ದಾರೆ. ಅವಿವಾಹಿತರಾಗಿದ್ದ ಲೀಲಾ-ಶೀಲಾ ಖಿನ್ನತೆಗೆ ಒಳಗಾಗಿದ್ದರು. ಖಿನ್ನತೆಯಿಂದ ಹೊರಬರಲು ರವಿ ತನ್ನ ಅಪ್ರಾಪ್ತ ಪುತ್ರ ಅಖಿಲ್‌ (ಸದ್ಯ 14 ವರ್ಷಗಳ ಬಾಲಕ) ಸಹೋದರಿಯೊಂದಿಗೆ ಇರಲು ಅನುಮತಿಸಿದ್ದರು. ರವಿ ದಂಪತಿಗೆ 2010ರ ನ.8ರಂದು ಎರಡನೇ ಪುತ್ರ ನಿವಾಸ್‌ ಜನಿಸಿದ್ದ.

ಎರಡನೇ ಮಗ ಜನಿಸಿದ ಆರೇಳು ತಿಂಗಳ ನಂತರ ಪುತ್ರ ಅಖಿಲ್‌ ವಿಚಿತ್ರವಾಗಿ ನಡೆದುಕೊಳ್ಳಲು ಆರಂಭಿಸಿದ್ದನ್ನು ರವಿ ದಂಪತಿ ಗಮನಿಸಿದ್ದರು. ತಾಯಿ ಮತ್ತು ಸಹೋದರಿಯರು ಹೆತ್ತವರೊಂದಿಗೆ ನೆಲೆಸದಂತೆ ಅಖಿಲ್‌ ತಲೆಕೆಡಿಸಿದ್ದಾರೆ ಎಂಬುದು ರವಿ ಆರೋಪ. ಈ ಮಧ್ಯೆ ಮಾಲಾ ಮತ್ತವರ ಪುತ್ರಿಯರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮನ್ನು ಅಖಿಲ್‌ ಪಾಲಕರೆಂದು ಘೋಷಿಸಲು ಕೋರಿದ್ದರು. ಮಗನ ಸುಪರ್ದಿಗಾಗಿ ರವಿ ದಂಪತಿ ಮತ್ತೊಂದು ಅರ್ಜಿ ಸಲ್ಲಿಸಿದ್ದರು.

ಆ ಅರ್ಜಿಗಳ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ರವಿ ದಂಪತಿ ವರ್ಷದಲ್ಲಿ ಕೇವಲ ಮೂರು ತಿಂಗಳು ಕಾಲ (ಮಾರ್ಚ್‌-ಮೇ ಅಂತ್ಯದವರೆಗೆ) ಅಖಿಲ್‌ನನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಳ್ಳಬೇಕು. ನಂತರ ತಾಯಿ-ಸಹೋದರಿಯ ಸುಪರ್ದಿಗೆ ನೀಡಬೇಕು ಎಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ರವಿ ದಂಪತಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್‌, ತಾನು ಅಜ್ಜಿ ಹಾಗೂ ಅತ್ತೆಯರ ಜೊತೆ ಹಾಯಾಗಿ ಇರುವುದಾಗಿ ಮಗು ಹೇಳಿದೆ. ಸುದೀರ್ಘ ಅವಧಿಯಿಂದ ಮಗು ಅಜ್ಜಿ-ಅತ್ತೆಯರ ಸುಪರ್ದಿಯಲ್ಲಿ ಇರುವುದರಿಂದ ಅವರೊಂದಿಗೆ ಬಾಂಧವ್ಯ ಹೊಂದಿರುವುದು ಸಹಜ. ಆದರೆ, ಅಖಿಲ್‌ಗೆ ಒಬ್ಬ ಸಹೋದರ (12 ವರ್ಷಗಳ) ಇದ್ದಾನೆ. ಪೋಷಕರು ಮತ್ತು ಪಾಲಕರ ನಡುವಿನ ವ್ಯಾಜ್ಯದಿಂದಾಗಿ ಸಹೋದರನ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಲು ಅಖಿಲ್‌ಗೆ ಸಾಧ್ಯವಾಗಿಲ್ಲ. ಇದು ಅವನ ಹಿತದೃಷ್ಟಿಯಿಂದ ಒಳ್ಳೆಯದಲ್ಲ ಎಂದು ಪೀಠ ಹೇಳಿದೆ.

ಸುಪರ್ದಿ ವಿಚಾರವನ್ನು ನಿರ್ಧರಿಸುವಾಗ ನ್ಯಾಯಾಲಯ, ಮಗುವಿನ ಹಿತಾಸಕ್ತಿ ಮತ್ತು ಕ್ಷೇಮಾಭಿವೃದ್ಧಿ ಗಮನಿಸುವುದು ಮುಖ್ಯ. ಇಬ್ಬರ ನಡುವಿನ ವ್ಯಾಜ್ಯದಿಂದ ಅಖಿಲ್‌, ತನ್ನ ಹೆತ್ತವರಿಂದ ಮುಕ್ತ ಮತ್ತು ನೈಸರ್ಗಿಕ ಪಾಲನೆ ಪಡೆದು ಬೆಳೆಯಲಾಗಲಿಲ್ಲ. ತಮ್ಮನ ಜೊತೆಗಿನ ಬಾಂಧವ್ಯ ವೃದ್ಧಿಯಾಗಿಲ್ಲ. ಇದು ಖಂಡಿತವಾಗಿಯೂ ಆತನ ಹಿತಾಸಕ್ತಿ ಮತ್ತು ಯೋಗಕ್ಷೇಮಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಅಪ್ರಾಪ್ತ ಮಗುವಿನ ಆದ್ಯತೆ ಪರಿಗಣಿಸಬೇಕಾದ ಅಂಶವಾದರೂ ಅದು ಅವನ ಪಾಲನೆ ನಿರ್ಧರಿಸುವ ಏಕೈಕ ಅಂಶವಾಗಿರಲು ಸಾಧ್ಯವಿಲ್ಲ. ಅಜ್ಜಿ-ಅತ್ತೆಯಂದಿರು ಮಗುವನ್ನು ಶಿಕ್ಷಣ ಹಾಗೂ ಇತರೆ ಅಗತ್ಯಗಳನ್ನು ಪೂರೈಸುವಷ್ಟು ನಿಯಮಿತ ಮೂಲ ಹೊಂದಿಲ್ಲ. ಮಗುವಿನ ಪೋಷಕರು ಸ್ಥಿತಿವಂತರಾಗಿದ್ದಾರೆ. ಆದ್ದರಿಂದ ಮಗು ಪೋಷಕರೊಂದಿಗೆ ಸುಪರ್ದಿಯಲ್ಲಿರಬೇಕು. ಅಜ್ಜಿ-ಅತ್ತೆಯಂದಿರು ತಿಂಗಳ ಮೊದಲ ಮತ್ತು ಕೊನೆ ವಾರದ ಅಂತ್ಯದಲ್ಲಿ ಮಗುವನ್ನು ಭೇಟಿಯಾಗಬಹುದು ಎಂದು ಹೈಕೋರ್ಟ್‌ ಆದೇಶಿಸಿದೆ.

Share this article