ನಗರದಲ್ಲಿರುವ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ (ಬಿಇಎಲ್) ವಿನ್ಯಾಸಗೊಳಿಸಿ ಉತ್ಪಾದಿಸಿರುವ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವೈಮಾನಿಕ ರಕ್ಷಣಾ ವ್ಯವಸ್ಥೆ ‘ಆಕಾಶತೀರ್’ ಪಾಕಿಸ್ತಾನದ ಡ್ರೋನ್ ದಾಳಿಯನ್ನು ಅದ್ಭುತವಾಗಿ ಹಿಮ್ಮೆಟ್ಟಿಸಿ, ಭಾರತದ ನೆಲವನ್ನು ಕಾಪಾಡಿದೆ.
ಬೆಂಗಳೂರು : ನಗರದಲ್ಲಿರುವ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನಲ್ಲಿ (ಬಿಇಎಲ್) ವಿನ್ಯಾಸಗೊಳಿಸಿ ಉತ್ಪಾದಿಸಿರುವ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ವೈಮಾನಿಕ ರಕ್ಷಣಾ ವ್ಯವಸ್ಥೆ ‘ಆಕಾಶತೀರ್’ ಪಾಕಿಸ್ತಾನದ ಡ್ರೋನ್ ದಾಳಿಯನ್ನು ಅದ್ಭುತವಾಗಿ ಹಿಮ್ಮೆಟ್ಟಿಸಿ, ಭಾರತದ ನೆಲವನ್ನು ಕಾಪಾಡಿದೆ.
ಇಸ್ರೋ ಸಹಯೋಗದಲ್ಲಿ ಡಿಆರ್‌ಡಿಒ ಮತ್ತು ಬಿಇಎಲ್ ಸಂಪೂರ್ಣವಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಿರುವ ಆಕಾಶತೀರ್, ಅಮೆರಿಕದ ಜಿಪಿಎಸ್ ಬದಲಿಗೆ ದೇಶಿಯ ಜಿಪಿಎಸ್ ವ್ಯವಸ್ಥೆಯಾಗಿರುವ ‘ನಾವಿಕ್’ ಬಳಕೆ ಮಾಡಲಾಗಿದೆ. ಇದರಲ್ಲಿ ಬಳಕೆ ಮಾಡಲಾದ ಸಾಫ್ಟ್‌ವೇರ್, ಚಿಪ್, ಸೆನ್ಸರ್ ಸೇರಿ ಎಲ್ಲಾ ಸಾಧನ, ಸಲಕರಣೆಗಳನ್ನು ದೇಶಿಯವಾಗಿ ಅಭಿವೃದ್ಧಿಪಡಿಸಿ ಉತ್ಪಾದಿಸಲಾಗಿದೆ. ವಿದೇಶದ ಉತ್ಪನ್ನಗಳನ್ನು ಬಳಕೆ ಮಾಡದಿರುವುದು ಆಕಾಶತೀರ್‌ನ ವೈಶಿಷ್ಟ್ಯ.
ಈ ಕುರಿತು ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಬಿಇಎಲ್, ಯುದ್ಧ ಭೂಮಿಯಲ್ಲಿ ಗಟ್ಟಿ ಬಂಡೆಯಾಗಿ ನಿಂತಿದ್ದ ನಮ್ಮ ಆಕಾಶತೀರ್ ತನ್ನ ಸಾಮರ್ಥ್ಯ ಸಾಬೀತು ಮಾಡಿದೆ. ಪಾಕಿಸ್ತಾನ ವೈಮಾನಿಕ ದಾಳಿಗಳನ್ನು ತಡೆಗಟ್ಟಿ ಧ್ವಂಸಗೊಳಿಸಿದೆ. ಕದನ ಸಂದರ್ಭದಲ್ಲಿ ನಿರೀಕ್ಷೆ ಮೀರಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿ ದೇಶದ ವಾಯು ಪ್ರದೇಶವನ್ನು ರಕ್ಷಿಸಿದೆ.
ನೆಲಮಟ್ಟದಲ್ಲಿ ಹಾರಾಡುವ ಶತ್ರು ರಾಷ್ಟ್ರಗಳ ಡ್ರೋನ್ ಸೇರಿ ಇನ್ನಿತರ ವೈಮಾನಿಕ ದಾಳಿಗಳನ್ನು ಪತ್ತೆ ಮಾಡಿ, ಅವುಗಳ ಮೇಲೆ ವೈಮಾನಿಕ ದಾಳಿ ಮಾಡಿ ಆಕಾಶದಲ್ಲೇ ನಾಶಪಡಿಸಿದೆ. ಭಾರತಕ್ಕೆ ಆಗುತ್ತಿದ್ದ ಹಾನಿಯನ್ನು ತಪ್ಪಿಸಿದೆ. ಶುತ್ರಗಳಿಂದ ಆಗುತ್ತಿರುವ ದಾಳಿಗಳ ಕುರಿತು ನಿಖರ ಮಾಹಿತಿಯನ್ನು ಅತ್ಯಂತ ತಳಮಟ್ಟದ ಸೇನಾ ಘಟಕಗಳಿಗೂ ಆಕಾಶತೀರ್ ಒದಗಿಸಿದೆ. ಇದರಿಂದ ಸೇನೆಯ ಎಲ್ಲಾ ಘಟಕಗಳಿಗೂ ಪರಿಸ್ಥಿತಿಯ ಕ್ಷಣ ಕ್ಷಣದ ಮಾಹಿತಿ ದೊರೆತು, ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಬಿಇಎಲ್ ತಿಳಿಸಿದೆ.