ಪ್ರಜ್ವಲ್‌ ರೇವಣ್ಣ ವಿರುದ್ಧ ಸಾಕ್ಷಿಗಳಿವೆ, ಬೇಲ್‌ ಕೊಡಲ್ಲ : ಹೈಕೋರ್ಟ್‌

Published : Apr 08, 2025, 11:51 AM IST
Prajwal Revanna.jpg

ಸಾರಾಂಶ

ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಲಾಗದು ಎಂದು ಹೈಕೋರ್ಟ್‌ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಬೆಂಗಳೂರು : ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಜ್ವಲ್‌ ರೇವಣ್ಣ ಜಾಮೀನು ಕೋರಲಾಗದು ಎಂದು ಹೈಕೋರ್ಟ್‌ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದೆ.

ಮನೆ ಕೆಲಸದಾಕೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ (ಮೊದಲನೇ ಅತ್ಯಾಚಾರ ಕೇಸ್‌) ಜಾಮೀನು ಕೋರಿ ಪ್ರಜ್ವಲ್‌ ರೇವಣ್ಣ ಎರಡನೇ ಬಾರಿಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರ್‌ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಸಿರುವ ಅತ್ಯಾಚಾರ ಘಟನೆ 2021ರಲ್ಲಿ ನಡೆದಿದೆ. ಆದಾದ ನಾಲ್ಕೂವರೆ ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಅದಕ್ಕೆ ದೂರುದಾರೆ ಯಾವುದೇ ವಿವರಣೆ ನೀಡಿಲ್ಲ. ಹೀಗಿದ್ದರೂ ಅರ್ಜಿದಾರರು ಜೈಲಿನಲ್ಲಿ ಮುಂದುವರಿಯುವುದು ಹೇಗೆ? ಆದ್ದರಿಂದ ಪ್ರಜ್ವಲ್‌ಗೆ ಜಾಮೀನು ನೀಡಬೇಕು ಎಂದು ಕೋರಿದರು. ರಾಜ್ಯ ಸರ್ಕಾರದ ಅಭಿಯೋಜಕರು, ಪ್ರಜ್ವಲ್‌ ಅವರ ಜಾಮೀನು ಅರ್ಜಿ ಸುಪ್ರೀಂ ಕೋರ್ಟ್‌ನಲ್ಲೂ ತಿರಸ್ಕೃತವಾಗಿತ್ತು. ಆ ನಂತರ ಯಾವುದೇ ಬದಲಾವಣೆಯಾಗಿಲ್ಲ. ಇತರೆ ಆರೋಪಿಗಳ ವಿರುದ್ಧದ ಪ್ರಕರಣ ತಡೆಯಾಜ್ಞೆಯಾಗಿದೆ. ಪ್ರಜ್ವಲ್‌ ವಿರುದ್ದ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣದ ಇತರೆ ಆರೋಪಿಗಳ ವಿರುದ್ಧ ತಡೆಯಾಜ್ಞೆ ಇದ್ದರೂ ಪ್ರಜ್ವಲ್‌ ವಿರುದ್ಧ ನಂಬಲರ್ಹ ಸಾಕ್ಷಿಗಳಿವೆ. ಇತರೆ ಆರೋಪಿಗಳ ಮೇಲಿನ ವಿಚಾರಣೆಗೆ ತಡೆ ನೀಡಲಾಗಿದೆ ಎಂಬ ಆಧಾರದಲ್ಲಿ ಪ್ರಮುಖ ಆರೋಪಿ ಜಾಮೀನು ಕೋರಲಾಗದು. ವಿಶೇಷವಾದ ಕಾರಣ ಇಲ್ಲದಿದ್ದರೆ ಜಾಮೀನು ನೀಡಲಾಗುತ್ತದೆಯೇ ಎಂದು ಪ್ರಶ್ನಿಸಿತಲ್ಲದೆ ಅರ್ಜಿಗೆ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಏ.15ಕ್ಕೆ ಮುಂದೂಡಿತು.

ಪ್ರಜ್ವಲ್‌ ಜಾಮೀನು ಅರ್ಜಿಯನ್ನು ಕಳೆದ ಅಕ್ಟೋಬರ್‌ನಲ್ಲಿ ಹೈಕೋರ್ಟ್‌ ತಿರಸ್ಕರಿಸಿತ್ತು. ನಂತರ ಸುಪ್ರೀಂ ಕೋರ್ಟ್‌ನಿಂದಲೂ ತಿರಸ್ಕೃತವಾಗಿತ್ತು. ಈಗ ಕಳೆದ ಮಾರ್ಚ್‌ನಲ್ಲಿ ಪ್ರಜ್ವಲ್‌ ಸಲ್ಲಿಸಿದ್ದ ಎರಡನೇ ಜಾಮೀನು ಅರ್ಜಿಯನ್ನು ಅಧೀನ ನ್ಯಾಯಾಲಯ ತಿಸ್ಕರಿಸಿತ್ತು. ಇದರಿಂದ ಹೈಕೋರ್ಟ್‌ಗೆ ಎರಡನೇ ಬಾರಿಗೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಬೆಂಗಳೂರು ನಗರದಲ್ಲಿ ಮತ್ತೆ ರಾರಾಜಿಸಲಿವೆ ಜಾಹೀರಾತು : ವಾರ್ಷಿಕ ₹ 6000 ಕೋಟಿ ನಿರೀಕ್ಷೆ