1ಕ್ಕಿಂತ ಹೆಚ್ಚು ಕೇಸಿದ್ದರೆ ವಿಚಾರಣಾಧೀನ ಕೈದಿಗೆ ಜಾಮೀನಿಲ್ಲ - ಒಟ್ಟು ಶಿಕ್ಷೆ ಪೈಕಿ 3ನೇ 1ರಷ್ಟು ಕಳೆದಿದ್ದರೆ ಅರ್ಹ

Published : Nov 25, 2024, 07:19 AM IST
Karnataka highcourt

ಸಾರಾಂಶ

ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಕೈದಿಯು ಜೈಲಿನಲ್ಲಿ ಕಳೆದರೆ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ

ವೆಂಕಟೇಶ್‌ ಕಲಿಪಿ

 ಬೆಂಗಳೂರು : ವಿಚಾರಣಾಧೀನ ಕೈದಿಯ ವಿರುದ್ಧದ ಅಪರಾಧ ಪ್ರಕರಣಕ್ಕೆ ನಿಗದಿಯಾಗಿರುವ ಒಟ್ಟು ಶಿಕ್ಷೆ ಪ್ರಮಾಣದಲ್ಲಿ ಮೂರನೇ ಒಂದು ಭಾಗದ ದಿನಗಳನ್ನು ಕೈದಿಯು ಜೈಲಿನಲ್ಲಿ ಕಳೆದರೆ ಜಾಮೀನು ಪಡೆಯಲು ಅರ್ಹನಾಗಿರುತ್ತಾನೆ ಎಂದು ಪ್ರತಿಪಾದಿಸುವ ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್‌) ಸೆಕ್ಷನ್‌ 479, ಹಲವು ಪ್ರಕರಣಗಳು ದಾಖಲಾಗಿದ್ದ ಸಂದರ್ಭದಲ್ಲಿ ಅನ್ವಯವಾಗುವುದಿಲ್ಲ ಎಂದು ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ನಕಲಿ ದಾಖಲೆ ಸೃಷ್ಟಿಸಿ ಠೇವಣಿದಾರರಿಗೆ 1,522 ಕೋಟಿ ರು. ಹಣ ವಂಚಿಸಿದ ಪ್ರಕರಣದಲ್ಲಿ 31 ತಿಂಗಳಿಂದ ಜೈಲಿನಲ್ಲಿರುವ ಕಾರಣಕ್ಕೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479 ಅನ್ನು ಆಧರಿಸಿ ಜಾಮೀನು ನೀಡುವಂತೆ ಕೋರಿ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಶ್ರೀಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್‌ ಲಿಮಿಟೆಡ್‌ ಅಧ್ಯಕ್ಷ ಕೆ.ರಾಮಕೃಷ್ಣ (73) ಅವರು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಎಚ್‌.ಪಿ. ಸಂದೇಶ್‌ ಅವರ ಪೀಠ ಈ ಆದೇಶ ಮಾಡಿದೆ.

ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಎರಡು ವರ್ಷ ಏಳು ತಿಂಗಳು ಕಳೆದಿರುವುದರಿಂದ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479(1) ಆಧರಿಸಿ ಜಾಮೀನು ನೀಡಲು ಅರ್ಜಿದಾರರು ಕೋರಿದ್ದಾರೆ. ಆದರೆ, ಬಿಎನ್‌ಎಸ್‌ಎಸ್‌ ಸೆಕ್ಷನ್‌ 479 (2) ಪ್ರಕಾರ ವ್ಯಕ್ತಿಯೋರ್ವನ ವಿರುದ್ಧ ಹಲವು ಪ್ರಕರಣ ದಾಖಲಾಗಿ, ಅದರಲ್ಲಿ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ತನಿಖೆ, ವಿಚಾರಣೆ ಅಥವಾ ಕೋರ್ಟ್‌ ವಿಚಾರಣೆ ಬಾಕಿಯಿದ್ದರೆ, ಆಗ ಆತನನ್ನು ನ್ಯಾಯಾಲಯ ಜಾಮೀನು ಮೇಲೆ ಬಿಡುಗಡೆ ಮಾಡಬಾರದು ಎಂದು ಹೇಳುತ್ತದೆ. ಇನ್ನು ವಿಧಿಸಬಹುದಾದ ಗರಿಷ್ಠ ಜೈಲು ಶಿಕ್ಷೆ ಅವಧಿಯ ಅರ್ಧಕ್ಕಿಂತ ಹೆಚ್ಚು ಅವಧಿಯವರೆಗೆ ಒಬ್ಬ ವ್ಯಕ್ತಿಯನ್ನು ಬಂಧನದಲ್ಲಿ ಮುಂದುವರಿಸಿ ಆದೇಶಿಸಲು ಬಿಎನ್‌ಎಸ್‌ಎಸ್‌ ಸೆಕ್ಷನ್‌ 479(1) ನ್ಯಾಯಾಲಯಕ್ಕೆ ಅಧಿಕಾರ ನೀಡುತ್ತದೆ. ಹಾಗಾಗಿ, ಜಾಮೀನು ನೀಡಬೇಕಾದ ಸಂದರ್ಭದಲ್ಲಿ ಸೆಕ್ಷನ್‌ 479, 479(1) ಮತ್ತು 479(2) ಅನ್ನು ಜೊತೆಗೂಡಿ ಓದಬೇಕಾಗುತ್ತದೆ ಎಂದು ನ್ಯಾಯಪೀಠ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಅಲ್ಲದೆ, ಅರ್ಜಿದಾರರ ವಿರುದ್ಧ ಪಿಎಂಎಲ್‌ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿ ಪ್ರತ್ಯೇಕವಾಗಿ ಅಂದರೆ ಒಂದಕ್ಕಿಂತ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಹೂಡಿಕೆದಾರರ ಹಿತಾಸಕ್ತಿ ರಕ್ಷಣಾ ಕಾಯ್ದೆಯ ಸೆಕ್ಷನ್‌ 9 ಅಡಿಯೂ ಕೇಸ್‌ ದಾಖಲಾಗಿದೆ. ಆ ಪ್ರಕರಣಗಳ ಆರೋಪಗಳು ಒಂದಕ್ಕಿಂತ ಹೆಚ್ಚಿವೆ ಮತ್ತು ಒಂದಕ್ಕೊಂದು ವಿಭಿನ್ನವಾಗಿಯೂ ಇವೆ. ಮುಖ್ಯವಾಗಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕಿನ ಬರೋಬ್ಬರಿ 1,544 ಕೋಟಿ ಹಣ ದುರ್ಬಳಕೆ ಮಾಡಿಕೊಂಡ ಮತ್ತು ಕೇವಲ 24 ಮಂದಿಗೆ 882.85 ಕೋಟಿ ಹಣ ಮಂಜೂರು ಮಾಡುವ ಮೂಲಕ ಈ ವಂಚನೆ ಪ್ರಕರಣದ ರೂವಾರಿಯಾಗಿರುವ ಆರೋಪ ಅರ್ಜಿದಾರರ ಮೇಲಿದೆ. ಇಂತಹ ಸಂದರ್ಭದಲ್ಲಿ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479 ಅಡಿ ರಿಲೀಫ್‌ ಪಡೆಯಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಆದೇಶಿಸಿದೆ.

ಪ್ರಕರಣದ ವಿವರ:

ಠೇವಣಿದಾರರಿಗೆ ವಂಚಿಸಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಅರ್ಜಿದಾರರು, ಜಾಮೀನು ಕೋರಿ ಮೂರನೇ ಬಾರಿಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅವರ ಪರ ವಕೀಲರು, ಹಣ ಅಕ್ರಮ ವರ್ಗಾವಣೆ ನಿಯಂತ್ರಣ (ಪಿಎಂಎಲ್‌) ಕಾಯ್ದೆ ಸೆಕ್ಷನ್‌ 5 ಅಡಿ ಆರೋಪಿ ರಾಮಕೃಷ್ಣ ವಿರುದ್ಧದ ದಾಖಲಾಗಿರುವ ಪ್ರಕರಣಕ್ಕೆ ಗರಿಷ್ಠ ಏಳು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಅರ್ಜಿದಾರರು ಬಂಧನಕ್ಕೆ ಒಳಗಾಗಿ 2 ವರ್ಷ 7 ತಿಂಗಳು ಕಳೆದಿವೆ. ನೂತನವಾಗಿ ಜಾರಿಗೆ ಬಂದಿರುವ ಬಿಎನ್‌ಎಸ್‌ಎಸ್‌ ಸೆಕ್ಷನ್‌ 479 ಅನ್ವಯ ಒಟ್ಟಾರೆ ವಿಧಿಸಬಹಾದಾದ ಗರಿಷ್ಠ ಶಿಕ್ಷೆಯಲ್ಲಿ 3/1ನೇ ಅವಧಿಯನ್ನು ವಿಚಾರಣಾಧೀನ ಕೈದಿಯಾಗಿ ಜೈಲು ವಾಸ ಪೂರೈಸಿದ್ದರೆ, ಅಂತಹ ಆರೋಪಿಯನ್ನು ಜಾಮೀನು ಮೇಲೆ ಬಿಡುಗಡೆ ಮಾಡಬಹುದು. ಈ ನಿಯಮವು 2024ರ ಜು.1ರಂದು ಬಿಎನ್‌ಎಸ್‌ಎಸ್‌ ಜಾರಿಗೆ ಬರುವ ಮುನ್ನ ದಾಖಲಾಗಿದ್ದ ಎಲ್ಲ ಪ್ರಕರಣಗಳಿಗೂ ಅನ್ವಯಿಸಲಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಅದರಂತೆ ರಾಮಕೃಷ್ಣ ಅವರಿಗೆ ಜಾಮೀನು ನೀಡಬೇಕು ಎಂದು ಕೋರಿದ್ದರು. ಈ ವಾದ ಒಪ್ಪದ ಹೈಕೋರ್ಟ್‌, ಅರ್ಜಿ ವಜಾಗೊಳಿಸಿ ರಾಮಕೃಷ್ಣ ಅವರಿಗೆ ಮೂರನೇ ಬಾರಿಗೂ ಜಾಮೀನು ನಿರಾಕರಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬೆಂಗಳೂರು ನಗರದಲ್ಲಿ ಶೇ.95 ರಷ್ಟು ಪಲ್ಸ್ ಪೋಲಿಯೋ