;Resize=(412,232))
ಬೆಂಗಳೂರು : ಬೆಂಗಳೂರು ಹೊರತುಪಡಿಸಿ ರಾಜ್ಯ ಇತರ ಜಿಲ್ಲೆಗಳಲ್ಲಿ ಅಪಘಾತ ಮತ್ತು ಸಾರಿಗೆ ನಿಯಮ ಉಲ್ಲಂಘನೆ ಹೆಚ್ಚಿರುವ 60 ರಸ್ತೆಗಳಲ್ಲಿ ರಸ್ತೆ ಸುರಕ್ಷತೆಗೆ ಸಾರಿಗೆ ಇಲಾಖೆ ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ವ್ಯವಸ್ಥೆ ಜಾರಿಗೆ ಸಾರಿಗೆ ಇಲಾಖೆ ಮುಂದಾಗಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಗುರುತಿಸಿರುವ ಕರ್ನಾಟಕದ 60 ಹೈ-ರಿಸ್ಕ್ ರಸ್ತೆಗಳಲ್ಲಿ ಅಪಘಾತ ತಡೆಗೆ ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. ದಾವಣಗೆರೆ, ಧಾರವಾಡ, ಕಲಬುರಗಿ, ಬೆಳಗಾವಿ, ಚಿತ್ರದುರ್ಗ, ಹಾವೇರಿ, ವಿಜಯನಗರ, ಬಳ್ಳಾರಿ, ವಿಜಯಪುರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಸೇರಿದ ರಸ್ತೆಗಳಲ್ಲಿ ಎಐ ಆಧಾರಿತ ಸ್ಮಾರ್ಟ್ ಕ್ಯಾಮೆರಾ ಅಳವಡಿಸಲಾಗುತ್ತದೆ.
ಈ ಎಐ ಕ್ಯಾಮರಾಗಳು ವಾಹನಗಳು ನಿಯಮ ಉಲ್ಲಂಘಿಸಿದರೆ ಅದರ ವೀಡಿಯೋ ಮತ್ತು ಫೋಟೋ ಸೆರೆ ಹಿಡಿದು ಕೇಂದ್ರ ಕಚೇರಿಯಲ್ಲಿನ ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಲಿದೆ. ಅದರ ಆಧಾರದಲ್ಲಿ ಆ ವಾಹನಗಳ ವಿರುದ್ಧ ಸ್ವಯಂ ಚಾಲಿತ ಡಿಜಿಟಲ್ ಚಲನ್ ಸಿದ್ಧಪಡಿಸಿ, ವಾಹನ ಮಾಲೀಕರ ಇಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ರವಾನಿಸಲಾಗುತ್ತದೆ. ಡಿಜಿಟಲ್ ಚಲನ್‌ನೊಂದಿಗೆ ವೀಡಿಯೋ ಮತ್ತು ಫೋಟೋವನ್ನೂ ದಾಖಲೆ ರೂಪದಲ್ಲಿ ಕಳುಹಿಸಲಾಗುತ್ತದೆ. ಅಲ್ಲದೆ, ವಾಹನ ಮಾಲೀಕರು ತಮ್ಮ ನಿಯಮ ಉಲ್ಲಂಘನೆಗೆ ಬದಲಾಗಿ ದಂಡವನ್ನು ಆನ್‌ಲೈನ್ ಮೂಲಕ ಪಾವತಿಸುವ ಅವಕಾಶವನ್ನೂ ನೀಡಲಾಗುತ್ತದೆ.
ಸದ್ಯ, ಎಐ ಕ್ಯಾಮರಾ ಅಳವಡಿಕೆ ಸೇರಿದಂತೆ ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ವ್ಯವಸ್ಥೆ ಅಳವಡಿಕೆ ಟೆಂಡರ್ ಪ್ರಕ್ರಿಯೆಗೆ ಸಾರಿಗೆ ಇಲಾಖೆ ಚಾಲನೆ ನೀಡಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರದ 6 ತಿಂಗಳೊಳಗೆ ಸ್ಮಾರ್ಟ್ ಎನ್‌ಫೋರ್ಸ್‌ಮೆಂಟ್ ವ್ಯವಸ್ಥೆ ಜಾರಿಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.