;Resize=(412,232))
ಬೆಂಗಳೂರು : ನಗರದ ಪಂಚತಾರಾ ಹೋಟೆಲ್‌ವೊಂದರ ಈಜುಕೊಳದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಅವಘಡ ಸಂಭವಿಸಿ ಇಬ್ಬರು ವಿದೇಶಿ ಪ್ರಜೆಗಳು ಮೃತಪಟ್ಟು, ಮತ್ತೊಬ್ಬ ವಿದೇಶಿಗ ಸೇರಿ ಇಬ್ಬರು ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ.
ಲುಫ್ತಾನ್ಸಾ ವಿಮಾನ ಸಂಸ್ಥೆಯ ಸಿಬ್ಬಂದಿ ಜರ್ಮನ್ ದೇಶದ ಅಲೆಕ್ಸಾಂಡರ್ ಮ್ಯಾಕ್ಸ್ ಮಿಲಿಯನ್ ಥೈಸ್ (67) ಹಾಗೂ ಐಬಿಎಂ ಕಂಪನಿ ಮ್ಯಾನೇಜರ್, ಸ್ಲೋವಾಕಿಯಾ ದೇಶದ ಜುರಾಜ್ ಹೊರ್ವಾಟ್ (45) ಮೃತ ದುರ್ದೈವಿಗಳು. ಘಟನೆಯಲ್ಲಿ ಅಮೆರಿಕದ ಮ್ಯಾಥ್ಯೂ ಡಿಸಾಂಟಿಸ್ (41) ಹಾಗೂ ಈಜುಕೊಳದ ನಿರ್ವಹಣಾ ಸಿಬ್ಬಂದಿ ರಾಹುಲ್ ತಿವಾರಿ (28) ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲಸೂರು ಸಮೀಪದ ಕಾನ್ರಾಡ್ ಹೋಟೆಲ್‌ನ 3ನೇ ಮಹಡಿಯಲ್ಲಿರುವ ಈಜು ಕೊಳದಲ್ಲಿ ಶುಕ್ರವಾರ ವಿದೇಶಿ ಪ್ರಜೆಗಳು ಈಜುವಾಗ ಈ ದುರಂತ ಸಂಭವಿಸಿದೆ. ಕೂಡಲೇ ಸಮೀಪದ ಮಣಿಪಾಲ್ ಆಸ್ಪತ್ರೆಗೆ ಅವರನ್ನು ಹೋಟೆಲ್ ಸಿಬ್ಬಂದಿ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ವಿದೇಶಿ ಪ್ರವಾಸಿಗರು ಮೃತಪಟ್ಟಿದ್ದಾರೆ.
ರಾಜ್ಯಕ್ಕೆ ಕೆಲಸ ನಿಮಿತ್ತ ಅ.20 ರಂದು ಅಲೆಕ್ಸಾಂಡರ್ ಬಂದಿದ್ದರೆ, ಇನ್ನುಳಿದಂತೆ ಪ್ರವಾಸಕ್ಕೆ ಅ.30ರಂದು ಜುರಾಜ್ ಹಾಗೂ 27 ರಂದು ಮ್ಯಾಥ್ಯೂ ದಂಪತಿ ಬಂದಿದ್ದರು. ಹಲಸೂರು ಸಮೀಪದ ಕಾನ್ರಾಡ್ ಹೋಟೆಲ್‌ನಲ್ಲಿ ಈ ವಿದೇಶಿಯರು ತಂಗಿದ್ದರು. ಹೋಟೆಲ್‌ನ 3ನೇ ಮಹಡಿಯಲ್ಲಿದ್ದ ಈಜುಕೊಳದಲ್ಲಿ ಶುಕ್ರವಾರ ಸಂಜೆ 5.15 ಗಂಟೆ ಸುಮಾರಿಗೆ ಈಜಾಡುತ್ತಿದ್ದರು.
ಆಗ ಶಾರ್ಟ್ ಸರ್ಕಿಟ್‌ನಿಂದಾಗಿ ಈಜುಕೊಳದ ನೀರಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಅಲೆಕ್ಸಾಂಡರ್, ಜುರಾಜ್ ಹಾಗೂ ಮ್ಯಾಥ್ಯೂ ವಿದ್ಯುತ್ ಆಘಾತಕ್ಕೆ ಒಳಗಾದರೆ, ಅವರ ರಕ್ಷಣೆಗೆ ಧಾವಿಸಿದ ಈಜುಕೊಳದ ನಿರ್ವಹಣಾ ಸಿಬ್ಬಂದಿ ರಾಹುಲ್ ತಿವಾರಿಗೂ ಶಾಕ್ ತಗುಲಿದೆ. ಕೂಡಲೇ ಹೋಟೆಲ್‌ನ ಇತರೆ ಸಿಬ್ಬಂದಿ, ಈಜುಕೊಳದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಬಳಿಕ ವಿದ್ಯುತ್ ಶಾಕ್‌ನಿಂದ ಗಾಯಗೊಂಡಿದ್ದ ನಾಲ್ವರನ್ನು ಸಮೀಪದ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆದರೆ, ಚಿಕಿತ್ಸೆ ಫಲಿಸದೆ ಅಲೆಕ್ಸಾಂಡರ್ ಹಾಗೂ ಜುರಾಜ್ ಮೃತಪಟ್ಟಿದ್ದು, ಇನ್ನುಳಿದ ಇಬ್ಬರು ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಸಂಬಂಧ ಕೊನ್ರಾಡ್ ಹೋಟೆಲ್ ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಜುಕೊಳದ ಪ್ರವೇಶ ಬಳಿ ಜುರಾಜ್ ಈಜಾಡುತ್ತಿದ್ದರೆ, ಮತ್ತೊಂದು ಬದಿ ಅಲೆಕ್ಸಾಂಡರ್ ನಿಂತಿದ್ದರು. ಆಗ ಜುರಾಜ್ ಹಠಾತ್ ಕೈ-ಕಾಲು ಅಲ್ಲಾಡಿಸಿ ನೀರಿನಲ್ಲಿ ಮುಳುಗಿದ್ದಾರೆ. ಇದನ್ನು ಗಮನಿಸಿದ ಅಲೆಕ್ಸಾಂಡರ್, ಕೂಡಲೇ ಅವರ ರಕ್ಷಣೆಗೆ ಧಾವಿಸಿದ್ದಾರೆ. ಆಗ ಅವರಿಗೂ ವಿದ್ಯುತ್ ಪ್ರವಹಿಸಿದೆ. ಈ ಇಬ್ಬರನ್ನು ರಕ್ಷಿಸಲು ಅಮೆರಿಕದ ಮ್ಯಾಥ್ಯೂ ಹಾಗೂ ಈಜುಕೊಳದ ಸಿಬ್ಬಂದಿ ನೀರಿಗೆ ಜಿಗಿದಿದ್ದಾರೆ. ಅಷ್ಟರಲ್ಲಿ ಚೀರಾಟ ಕೇಳಿ ಧಾವಿಸಿದ ಹೋಟೆಲ್ ಸಿಬ್ಬಂದಿ, ಈಜುಕೊಳದ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದೀಪದಿಂದ ಶಾರ್ಟ್ ಸರ್ಕಿಟ್:
ಈಜುಕೊಳದ ಸುತ್ತಲಿದ್ದ ವಿದ್ಯುತ್ ದೀಪಗಳಲ್ಲಿ ಶಾರ್ಟ್ ಸರ್ಕಿಟ್ ಆಗಿ ಈಜುಕೊಳಕ್ಕೆ ವಿದ್ಯುತ್ ಪ್ರವಹಿಸಿರಬಹುದು ಎಂದು ಪ್ರಾಥಮಿಕ ಹಂತದ ತನಿಖೆಯಲ್ಲಿ ಗೊತ್ತಾಗಿದೆ. ಈ ಬಗ್ಗೆ ಎಲೆಕ್ಟ್ರಿಕಲ್ ತಜ್ಞರ ವರದಿ ಬಳಿಕ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಗಿದ್ದೇನು?
- ಬೆಂಗಳೂರು ಎಂ,ಜಿ. ರಸ್ತೆಯಲ್ಲಿನ ಹೋಟೆಲ್‌ನ 3ನೇ ಮಹಡಿಯಲ್ಲಿದ್ದ ಈಜುಕೊಳ
- ಶುಕ್ರವಾರ ಸಂಜೆ 5.15 ಗಂಟೆ ಸುಮಾರಿಗೆ ವಿದೇಶಿ ಪ್ರವಾಸಿಗರಿಂದ ಈಜಾಟ
- ಆಗ ಶಾರ್ಟ್ ಸರ್ಕಿಟ್‌ನಿಂದಾಗಿ ಈಜುಕೊಳದ ನೀರಿಗೆ ಪ್ರವಹಿಸಿದ ವಿದ್ಯುತ್
- ಆಗ ಶಾಕ್‌ಗೆ ತುತ್ತಾಗಿ ಇಬ್ಬರು ಸಾವು. ರಕ್ಷಣೆಗೆ ಬಂದ ಸಿಬ್ಬಂದಿಗೂ ಶಾಕ್
- ಕೂಡಲೇ ಹೋಟೆಲ್‌ನ ಇತರೆ ಸಿಬ್ಬಂದಿಯಿಂದ ಈಜುಕೊಳದ ವಿದ್ಯುತ್ ಕಟ್
- ಗಾಯಗೊಂಡ ಇಬ್ಬರು ಸಮೀಪದ ಮಣಿಪಾಲ್ ಆಸ್ಪತ್ರೆಗೆ ದಾಖಲು, ಚಿಕಿತ್ಸೆ
- ಕೊಳದ ವಿದ್ಯುತ್ ದೀಪಗಳಲ್ಲಿ ಶಾರ್ಟ್ ಸರ್ಕಿಟ್ ಆಗಿ ವಿದ್ಯುದಾಘಾತ ಶಂಕೆ