ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್‌ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್‌ಸೆಟ್‌ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ವಿಧಾನ ಪರಿಷತ್ತು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 2.5 ಲಕ್ಷ ಅಕ್ರಮ ಪಂಪ್‌ಸೆಟ್ ಗಳನ್ನು ಸಕ್ರಮಗೊಳಿಸಲಾಗಿದ್ದು, ಬಾಕಿ ಇರುವ 2 ಲಕ್ಷ ಪಂಪ್‌ಸೆಟ್‌ಗಳನ್ನು ಇನ್ನೊಂದು ವರ್ಷದಲ್ಲಿ ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ಬುಧವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು, ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಎಲ್ಲೆಡೆ ಭ್ರಷ್ಟಾಚಾರ ಹೆಚ್ಚಾಗಿದೆ. ಈ ಹಿಂದೆ ಬಿಜೆಪಿಯದ್ದು ಶೇ.40 ಪರ್ಸಂಟೇಜ್ ಸರ್ಕಾರ ಎಂದು ಕಾಂಗ್ರೆಸ್‌ನವರು ಆರೋಪ ಮಾಡುತ್ತಿದ್ದರು. ಈಗ ಅದೇ ಗುತ್ತಿಗೆದಾರರು ಇದು ಶೇ.60 ಪರ್ಸಂಟೇಜ್ ಸರ್ಕಾರ ಎಂದು ಆರೋಪಿಸುತ್ತಿದ್ದಾರೆ. ಎಲ್ಲದಕ್ಕೂ ಲಂಚ ಕೊಡಬೇಕು. ರೈತರ ಟ್ರಾನ್ಸ್‌ಫಾರ್ಮರ್ ಅಳವಡಿಸಿಕೊಳ್ಳಲು 2ರಿಂದ 3 ಲಕ್ಷ ಲಂಚ ಕೊಡಬೇಕಿದೆ ಎಂದು ದೂರಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇಂಧನ ಸಚಿವರು, ಅಕ್ರಮ ಪಂಪ್‌ಸೆಟ್ ಗಳ ಸಕ್ರಮ ಯೋಜನೆಯಡಿ ಬಾಕಿಯಿದ್ದ 4.5 ಲಕ್ಷಕ್ಕೂ ಹೆಚ್ಚು ಅರ್ಜಿಗಳ ಪೈಕಿ 2.5 ಲಕ್ಷ ಪಂಪ್‌ಸೆಟ್‌ಗಳನ್ನು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಕ್ರಮಗೊಳಿಸಲಾಗಿದೆ. 500 ಮೀಟರ್‌ಗಿಂತ ಒಳಗೆ ಇರುವಂತಹ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ಸಂಪರ್ಕ ಕೊಡಲಾಗುತ್ತಿದೆ. 500 ಮೀಟರ್‌ಗಿಂತ ಹೆಚ್ಚು ಅಂತರವಿರುವ ಕೃಷಿ ಪಂಪ್‌ಸೆಟ್‌ಗಳಿಗೆ ಕುಸುಮ್-ಬಿ ಯೋಜನೆಯಡಿ ಶೇ.80ರ ಸಬ್ಸಿಡಿ ದರದಲ್ಲಿ ಸೋಲಾರ್ ಪಂಪ್‌ಸೆಟ್ ಒದಗಿಸಲಾಗುತ್ತಿದೆ ಎಂದರು.
ಅಕ್ರಮವಾಗಿ ಪಂಪ್‌ಸೆಟ್‌ಗಳಿಗೆ ಸಂಪರ್ಕ ಪಡೆಯುವಂತಹ ಪ್ರಕರಣಗಳು ಹೆಚ್ಚಿದ್ದು, ಇದರಿಂದ ಟ್ರಾನ್ಸ್‌ಫಾರ್ಮರ್ ಹಾಳಾಗುತ್ತಿವೆ. ಅಕ್ರಮ ಪಂಪ್‌ಸೆಟ್‌ಗಳನ್ನು ಸಕ್ರಮ ಮಾಡಿದರೆ, ಒಂದೊಂದು ಟ್ರಾನ್ಸ್‌ಫಾರ್ಮರ್‌ಗಳು 25 ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತವೆ. ಇದರಿಂದ ಸಮಸ್ಯೆ ಇತ್ಯರ್ಥವಾಗುತ್ತದೆ ಎಂದು ಹೇಳಿದರು.