ಚಿನ್ನಯ್ಯ-ತಿಮರೋಡಿ ಮತ್ತೆರಡು ವಿಡಿಯೋ ವೈರಲ್‌

Published : Sep 21, 2025, 10:13 AM IST
Chinnayya

ಸಾರಾಂಶ

ಚಿನ್ನಯ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ತಲೆಮರೆಸಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಭೇಟಿಯ ಹಳೆಯ ಒಂದು ವಿಡಿಯೋ ಶುಕ್ರವಾರ ವೈರಲ್‌ ಆದ ಬಳಿಕ ಈಗ 2 ಮತ್ತು 3ನೇ ವಿಡಿಯೋ ಶನಿವಾರ ಹೊರಗೆ ಬಂದಿದ್ದು, ವೈರಲ್‌ ಆಗಿವೆ.

 ಮಂಗಳೂರು/ ಬೆಳ್ತಂಗಡಿ:  ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದಲ್ಲಿ ಪ್ರಸಕ್ತ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಚಿನ್ನಯ್ಯ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದಿದ ಪ್ರಕರಣದಲ್ಲಿ ತಲೆಮರೆಸಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನಡುವಿನ ಭೇಟಿಯ ಹಳೆಯ ಒಂದು ವಿಡಿಯೋ ಶುಕ್ರವಾರ ವೈರಲ್‌ ಆದ ಬಳಿಕ ಈಗ 2 ಮತ್ತು 3ನೇ ವಿಡಿಯೋ ಶನಿವಾರ ಹೊರಗೆ ಬಂದಿದ್ದು, ವೈರಲ್‌ ಆಗಿವೆ.

ಈ ಎರಡೂ ವಿಡಿಯೋಗಳಲ್ಲಿ ಧರ್ಮಸ್ಥಳ ಗ್ರಾಮದಲ್ಲಿ ಅನೇಕ ಶವಗಳನ್ನು ಹೂತಿದ್ದೇನೆ, ಎಲ್ಲವೂ ಅನಾಥ ಶವಗಳು. ತರಕಾರಿ ಗಾಡಿಯಲ್ಲೂ ತಂದು ಹೂಳಿದ್ದೇನೆ. 1 ರಿಂದ 17 ಪಾಯಿಂಟ್‌ವರೆಗೆ ಶವಗಳು ಇರುವ ಬಗ್ಗೆ ಚಿನ್ನಯ್ಯ ಹೇಳುತ್ತಿರುವುದು ವಿಡಿಯೋದಲ್ಲಿದೆ. ನಾನು ಹೂಳಿದ ಶವಗಳಿಗೆ ಲೆಕ್ಕವಿಲ್ಲ ಎಂದು ಚಿನ್ನಯ್ಯ ಮಾತನಾಡಿರುವುದು ಸಂಭಾಷಣೆಯಲ್ಲಿ ಕಂಡುಬರುತ್ತದೆ. ಈ ವಿಡಿಯೋದ ಅಸಲಿಯತ್ತು ಸ್ಪಷ್ಟವಾಗಿಲ್ಲ. ಇದು ಎರಡು ವರ್ಷ ಹಿಂದಿನದ್ದು ಎಂದಿದ್ದರೂ ಅಲ್ಲಿ ಕಂಡುಬರುವ ಹ್ಯಾಂಡ್‌ವಾಷ್‌ 2025 ಜೂನ್‌ ತಿಂಗಳನ್ನು ತೋರಿಸುತ್ತಿರುವುದನ್ನು ಯಾರೋ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿದ್ದು, ಅದು ಕೂಡ ವೈರಲ್‌ ಆಗಿದೆ.

ಚಿನ್ನಯ್ಯ ಹೇಳಿದ್ದೇನು?:

ನಾನು ಧರ್ಮಸ್ಥಳ ಗ್ರಾಮದಲ್ಲಿ ರಾಶಿ ರಾಶಿ ಶವಗಳನ್ನು ತರಕಾರಿ ತಳ್ಳುವ ಗಾಡಿಯಲ್ಲಿ ಸಾಗಿಸಿ ಹೂತಿದ್ದೇನೆ. ಸ್ನಾನ ಘಟ್ಟದ ಬಳಿ ಶವಗಳನ್ನು ಹೂತಿದ್ದಕ್ಕೆ ಲೆಕ್ಕವೇ ಇಲ್ಲ ಅಷ್ಟು ಹೂತಿದ್ದೇನೆ. ಶಾಲೆಯ ಹಿಂದೆ ಮನೆಯ ಬಳಿ ಯುವತಿಯ ಶವ ಇತ್ತು. ಆಕೆ ಸ್ಥಳೀಯ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ. ಅವಳ ಸಾವಿಗೆ ಕುಟುಂಬದವರು ಯಾರೂ ಅಳುತ್ತಿರಲಿಲ್ಲ. ಆ ಶವವನ್ನು ನಾನೇ ಹೂತು ಹಾಕಿದೆ ಎಂದು ಚಿನ್ನಯ್ಯ ಹೇಳುತ್ತಿರುವುದು 2ನೇ ವಿಡಿಯೋದಲ್ಲಿದೆ.

ಇದೇ ವಿಡಿಯೋದಲ್ಲಿ ಅನಾಥ ಶವಗಳ ಬಗ್ಗೆ ಕಾಡಿನಲ್ಲಿ ಗುರುತಿಸಿದ ಸ್ಪಾಟ್ ನಂ.13ರ ಬಗ್ಗೆಯೂ ಉಲ್ಲೇಖಿಸಲಾಗಿದೆ. ಧರ್ಮಸ್ಥಳ ಗ್ರಾಮದ ತಿರುವೊಂದರಲ್ಲಿ ಬರೋಬ್ಬರಿ 70ಕ್ಕೂ ಅಧಿಕ ಶವ ಹೂತು ಹಾಕಿದ್ದೇನೆ. ಕೇರಳ ಮೂಲದ ಹೆಂಗಸಿನ ಶವವನ್ನೂ ಹೂತಿದ್ದೇನೆ. ಅದು ಸ್ಮಶಾನ ಅಲ್ಲ, ನೇತ್ರಾವತಿ ತೀರದಲ್ಲಿ ಹೆಣ ಹೂತುಹಾಕಿದ್ದಕ್ಕೆ ಲೆಕ್ಕವೇ ಇಲ್ಲ. ಪೊಲೀಸರ ಬಂದೂಕು ಭದ್ರತೆ ನೀಡಿದರೆ ಹೂತಿಟ್ಟ ಜಾಗ ತೋರಿಸುತ್ತೇನೆ ಎಂದು ಚಿನ್ನಯ್ಯ ಹೇಳಿದ್ದಾನೆ. ಅದಕ್ಕೆ ತಿಮರೋಡಿ, ಕೋರ್ಟ್‌ನಿಂದ ನಿಮ್ಮ ಇಡೀ ಕುಟುಂಬಕ್ಕೆ ಭದ್ರತೆ ಕೊಡಿಸುತ್ತೇನೆ ಎಂದಿದ್ದಾರೆ.

ಪಾಯಿಂಟ್ ನಂ.17 ಸ್ಟೋರಿಯನ್ನೂ ಚಿನ್ನಯ್ಯ ಹೇಳಿದ್ದು, ನೇತ್ರಾವತಿ ಸ್ನಾನಘಟ್ಟದ ಹೋಟೆಲ್ ಬಳಿ 12 ರಿಂದ 14 ವರ್ಷ ವಯಸ್ಸಿನ ಹುಡುಗಿ‌ಯ ಶವ, ಬಂಗ್ಲೆಗುಡ್ಡದ ಬುಡದಲ್ಲಿ (ಪಾಯಿಂಟ್ ನಂ.8) 8 ರಿಂದ 9 ಶವ ಹೂತು ಹಾಕಿದ್ದಾಗಿ ಚಿನ್ನಯ್ಯ ಹೇಳಿರುವುದು ವಿಡಿಯೋದಲ್ಲಿದೆ.

ಸೌಜನ್ಯ ತಂದೆಗೆ ವಿಷಪ್ರಾಶನ:

ಅವಹೇಳನ ಖಂಡಿಸಿ ದೂರು

ಶವ ಹೂತಿಟ್ಟ ಪ್ರಕರಣದಲ್ಲಿ ಧರ್ಮಸ್ಥಳದ ಮೂವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಲಾಗುತ್ತಿದ್ದು, ಸರಿಯಾಗಿ ತನಿಖೆ ಮಾಡಬೇಕು ಎಂದು ಗ್ರಾಮಸ್ಥ ಎ.ಸಿ.ಚಂದ್ರ ಎಂಬವರು ಎಸ್‌ಐಟಿಗೆ ದೂರು ನೀಡಿದ್ದಾರೆ.

ಸೌಜನ್ಯ ಸಾವಿನ ನಂತರ ಧರ್ಮಸ್ಥಳದ ಮೂವರ ವಿರುದ್ಧ ಆರೋಪ ಮಾಡಲಾಗಿತ್ತು. ಅವರೂ ತನಿಖೆಗೆ ಒಳಪಟ್ಟು ಕ್ಲೀನ್‌ಚಿಟ್ ಪಡೆದಿದ್ದಾರೆ. ಆದರೆ, ಈಗಲೂ ಅವರನ್ನು ಅವಮಾನಿಸಲಾಗುತ್ತಿದೆ. ಇದಷ್ಟೇ ಅಲ್ಲದೆ ಸೌಜನ್ಯಾ ತಾಯಿ ಕುಸುಮಾವತಿ ಅವರ ಪತಿ ಚಂದಪ್ಪ ಅವರನ್ನು ಸ್ಲೋ ಪಾಯಿಸನ್ ನೀಡಿ ಧರ್ಮಸ್ಥಳ ಭಾಗದವರು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಇದು ಸುಳ್ಳು ಆರೋಪವಾಗಿದ್ದು, ಚಂದಪ್ಪ ಅವರು ಅನಾರೋಗ್ಯದಿಂದ ಸಾವಿಗೀಡಾಗಿದ್ದಾರೆ. ಹಾಗಾಗಿ ಇದನ್ನು ಸರಿಯಾಗಿ ತನಿಖೆ ಮಾಡಬೇಕು ಎಂದು ದೂರು ನೀಡಲಾಗಿದೆ. ದೂರಿಗೆ ಪೂರಕ ದಾಖಲೆಯನ್ನು ಒದಗಿಸಿದ್ದೇವೆ ಎಂದು ಚಂದ್ರ ತಿಳಿಸಿದ್ದಾರೆ.

ತಿಮರೋಡಿ ತಂಡ ವಿರುದ್ಧ

ಕೋಲಾರ ವೇದಿಕೆ ದೂರು

ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಬುರುಡೇ ತಂಡದ ವಿರುದ್ಧ ಕೋಲಾರ ಜಿಲ್ಲಾ ಜನಪರ ವೇದಿಕೆ ಅಧ್ಯಕ್ಷ ನಾಗರಾಜ್ ಅವರ ತಂಡ ಶನಿವಾರ ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಆಗಮಿಸಿ ದೂರು ನೀಡಿದ್ದು, ತಿಮರೋಡಿ ತಂಡದ ವಿರುದ್ಧ ಕೋಕಾ, ಗೂಂಡಾ ಕಾಯ್ದೆ ಮತ್ತು ಗಡಿಪಾರು ಅಡಿಯಲ್ಲಿ ಕೇಸು ದಾಖಲಿಸುವಂತೆ ಆಗ್ರಹಿಸಿದೆ.

ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್‌, ವಿಠಲ್ ಗೌಡ, ಯುಟ್ಯೂಬರ್ ಸಮೀರ್, ಜಯಂತ್ ಸೇರಿ ಬುರುಡೇ ತಂಡ ರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿ ಷಡ್ಯಂತ್ರ ನಡೆಸಿದೆ. ಶ್ರೀಕ್ಷೇತ್ರಕ್ಕೆ ಮಸಿ ಬಳಿಯಲು ಹುನ್ನಾರ ನಡೆಸುತ್ತಿರುವ ಈ ಎಲ್ಲರ ವಿರುದ್ಧ ತುರ್ತು ಕ್ರಮ ವಹಿಸಬೇಕು. ಇವರೆಲ್ಲರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಅಲ್ಲದೇ, ಇವರಿಗೆ ವಿದೇಶಗಳಿಂದ ಹಣ ಹರಿದು ಬಂದಿರುವ ಸಾಧ್ಯತೆ ಇದ್ದು, ಹಣದ ಮೂಲವನ್ನು ಪತ್ತೆ ಹಚ್ಚಬೇಕು. ಇವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಸರ್ಕಾರಕ್ಕೆ ಆಗಿರುವ ಹಾನಿಯನ್ನು ಭರಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಬಂಗ್ಲೆಗುಡ್ಡ 7 ಬುರುಡೆ ಪತ್ತೆಗಾಗಿ

ಪೊಲೀಸರಿಗೆ ಎಸ್‌ಐಟಿ ದೂರು 

ಮಂಗಳೂರು/ ಬೆಳ್ತಂಗಡಿ :  ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿದ ಮಹಜರು ವೇಳೆ ಬಂಗ್ಲೆಗುಡ್ಡದಲ್ಲಿ ದೊರೆತ ಏಳು ತಲೆ ಬುರುಡೆ, ಅಸ್ಥಿಪಂಜರದ ಕುರುಹು ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಗೆ ದೂರು ಎಸ್‌ಐಟಿ ಸಿದ್ಧತೆ ನಡೆಸಿದೆ. ಈ ನಡುವೆ ಅಲ್ಲಿ ಸಿಕ್ಕ 1 ಅಸ್ಥಿಪಂಜರ ಕೊಡಗು ಮೂಲದ ಯು.ಬಿ.ಅಯ್ಯಪ್ಪ ಅವರದ್ದು ಎಂದು ಖಚಿತವಾಗಿದ್ದು, ಶನಿವಾರ ಅವರ ಮಗನ ವಿಚಾರಣೆ ನಡೆಸಲಾಗಿದೆ.

ಬಂಗ್ಲೆಗುಡ್ಡ ಅರಣ್ಯದಲ್ಲಿ ದೊರೆತ ಒಂದು ಅಸ್ಥಿಪಂಜರದ ಬಳಿ ಗುರುತಿನ ಚೀಟಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಹೊರತುಪಡಿಸಿ ಉಳಿದ ಅಸ್ಥಿಪಂಜರಗಳ ಗುರುತು ಪತ್ತೆಗಾಗಿ ಅವುಗಳನ್ನು ಎಸ್‌ಐಟಿ ತಂಡ ಡಿಎನ್‌ಎ ಪರೀಕ್ಷೆಗೆ ಕಳುಹಿಸಲಿದೆ. ಅಲ್ಲದೇ ಆ ಜಾಗದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಯಾರದ್ದು ಎಂದು ಗುರುತು ಹಚ್ಚಲು ಎಸ್‌ಐಟಿ ದೂರು ದಾಖಲಿಸಲಿದೆ.

ಒಂದು ಅಸ್ಥಿಪಂಜರದ ಬಳಿ ಗುರುತಿನ ಚೀಟಿ ಮತ್ತು ವಾಕಿಂಗ್‌ ಸ್ಟಿಕ್‌ ಪತ್ತೆಯಾಗಿತ್ತು. ಇದು ಕೊಡಗು ಮೂಲದ ಯು.ಬಿ.ಅಯ್ಯಪ್ಪ ಅವರದ್ದು ಎಂಬುದು ಬಹುತೇಕ ಖಚಿತಗೊಂಡಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಗ್ರಾಮದ ಅಯ್ಯಪ್ಪ ಅವರ ಪುತ್ರ ಜೀವನ್‌ ಶನಿವಾರ ಬೆಳ್ತಂಗಡಿ ಎಸ್ಐಟಿ ಠಾಣೆಗೆ ಆಗಮಿಸಿದ್ದರು. ಈ ವೇಳೆ ಜೀವನ್‌ರಿಂದ ತಂದೆಯ ನಾಪತ್ತೆ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಎಸ್‌ಐಟಿ ಕಲೆ ಹಾಕಿದೆ.

PREV
Read more Articles on

Recommended Stories

ಭಾರತದ ಜೆನ್‌ ಝೀಗಳಿಗೊಂದು ಎಚ್ಚರಿಕೆಯ ಕರೆ
ಜಾತಿ ಗಣತಿ ‘ಹಸ್ತ’ ಭವಿಷ್ಯಕ್ಕೆ ಪೆಟ್ಟು: ಎಚ್‌ಡಿಕೆ