ವನವೈಭವ... ಬತ್ತಿದ ಜಲಮೂಲ ಪುನಶ್ಚೇತನಕ್ಕೆ ಅರಣ್ಯಇಲಾಖೆ ಹೊಸ ಯೋಜನೆ

Published : Oct 26, 2026, 12:46 PM IST
hills

ಸಾರಾಂಶ

''ಜಲಾನಯನ ಪ್ರದೇಶಗಳಿಗಾಗಿ ಅರಣ್ಯಗಳು, ನಂದಿ ಬೆಟ್ಟ ಯೋಜನೆ'' ಎನ್ನುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಯಶಸ್ವಿ ಮಾಡಲು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದಾರೆ. ಈ ಅರಣ್ಯ ಪ್ರದೇಶ ಬೆಳೆದಂತೆ ತನ್ನ ಮೇಲೆ ಬೀಳುವ ಮಳೆಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಾ ಹೋಗುತ್ತದೆ.

ನದಿ..... ನೀರು....ಕಾಡು....ಮತ್ತೆ ಕಾಡು....ನೀರು.... ನದಿ....ಇದೊಂದು ಪ್ರಕೃತಿ ನಮಗೆ ಕೊಟ್ಟಿರುವ ಅದ್ಭುತ ಕೊಡುಗೆ...ಎಲ್ಲವೂ ಒಂದಕ್ಕೊಂಡು ಬೆಸೆದುಕೊಂಡಿವೆ. ಆದ್ದರಿಂದಲೇ ಕಾಡಿನ ಸಂರಕ್ಷಣೆಯ ಪ್ರಸ್ತಾಪ ಆದಾಗಲೆಲ್ಲಾ ನಗರ ಪ್ರದೇಶದಲ್ಲಿ ನಮ್ಮ ಮನೆಯ ನಲ್ಲಿಯಲ್ಲಿ ನೀರು....ಕಾಡಿನ ಆರೋಗ್ಯ ಮತ್ತು ಹುಲಿಯ ಪ್ರಸ್ತಾಪ ಆಗೇ ಆಗುತ್ತದೆ.

ಇದನ್ನು ಚೆನ್ನಾಗಿ ಅರಿತಿರುವ ನಮ್ಮ ಅರಣ್ಯ ಇಲಾಖೆ ಇದೇ ಮೊದಲ ಬಾರಿಗೆ ಅತ್ಯಂತ ವಿಶಿಷ್ಠ ಮತ್ತು ಸಾಹಸಪೂರ್ಣ ಯೋಜನೆಯೊಂದಕ್ಕೆ ಕೈ ಹಾಕಿದೆ. ಅದೂ ಬತ್ತಿ ಹೋಗಿರುವ ಜಲ ಮೂಲಗಳ ಪುನಶ್ಚೇತನಕ್ಕೆ ಹಸಿರೀಕರಣ ಮೂಲಕ ಜೀವ ತುಂಬುವ ಪ್ರಯತ್ನ. ಬೆಂಗಳೂರು ಸಮೀಪದ ನಂದಿಬೆಟ್ಟದ ತಪ್ಪಲಿನಲ್ಲಿ ಈ ಪ್ರಯೋಗ ನಡೆಯಲಿದೆ.

ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ಕ್ರಿಯಾ ಯೋಜನೆ

ಬೆಂಗಳೂರು ಮಹಾ ನಗರದ ಜಲಸಂಪನ್ಮೂಲದ ಅತ್ಯಂತ ಪ್ರಮುಖ ಮೂಲಗಳಲ್ಲಿ ಒಂದಾಗಿರುವ ನಂದಿಗಿರಿಧಾಮದ ಅರಣ್ಯ ಶ್ರೇಣಿಯಲ್ಲಿ ಉಗಮಿಸುವ ಆರ್ಕಾವತಿ, ಚಿತ್ರಾವತಿ, ಪಾಪಾಗ್ನಿ, ಉತ್ತರ ಪಿನಾಕಿನಿ (ಪೆನ್ನಾರ್), ದಕ್ಷಿಣ ಪಿನಾಕಿನಿ (ಪೊನ್ನೈಯಾರ್) ಹಾಗೂ ಪಾಲಾರ್ ನದಿಗಳ ಜಲಾನಯನ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ಕರ್ನಾಟಕ ಅರಣ್ಯ ಇಲಾಖೆಯು ''ಕರ್ನಾಟಕ ಅರಣ್ಯ ಮತ್ತು ವನ್ಯಜೀವಿ ಹವಾಮಾನ ಬದಲಾವಣೆ ಫೌಂಡೇಶನ್'' (KFWCCF), ಅಯೋರಾ ಇಕೋಲಜಿಕಲ್ ಟ್ರಸ್ಟ್ (Iora Ecological Trust) ಮತ್ತು ಸೇಲ್ಸ್‌ಫೋರ್ಸ್ (Salesforce) ಸಂಸ್ಥೆಗಳ ಸಹಯೋಗದೊಂದಿಗೆ ಕ್ರಿಯಾ ಯೋಜನೆ ರೂಪಿಸಿದೆ. ಇದು ಅರಣ್ಯ ಇಲಾಖೆಯು ಹೆಸರಘಟ್ಟ ಸಂರಕ್ಷಣಾ ಮೀಸಲು ಪ್ರದೇಶವನ್ನು ಘೋಷಣೆ ಮಾಡಿದ ನಂತರ ಬೆಂಗಳೂರು ಸಮೀಪ ಕೈಗೆತ್ತಿಕೊಂಡಿರುವ ಅತ್ಯಂತ ಪ್ರಮುಖ ಯೋಜನೆ.

ಈ ಪ್ರಮುಖ ಯೋಜನೆಯಡಿಯಲ್ಲಿ ಒಟ್ಟು ಸುಮಾರು 1500 ಎಕರೆ ಅರಣ್ಯ ಪ್ರದೇಶದಲ್ಲಿ ನೈಸರ್ಗಿಕವಾಗಿ ಒಣ ಎಲೆ ಉದುರುವ ಕಾಡುಗಳನ್ನು ಬೆಳೆಸಲಾಗುತ್ತಿದ್ದು, ಮುಂದಿನ 3 ವರ್ಷಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಸ್ಥಳೀಯ ತಳಿಯ ಸಸ್ಯಗಳನ್ನು ನೆಟ್ಟು ಪೋಷಿಸಲಾಗುತ್ತದೆ. ಮಣ್ಣು ಮತ್ತು ತೇವಾಂಶ ಸಂರಕ್ಷಣೆ, ನೈಸರ್ಗಿಕ ಪುನರುತ್ಪಾದನೆ, ಆಕ್ರಮಣಕಾರಿ ಸಸ್ಯಗಳ ನಿಯಂತ್ರಣ ಹಾಗೂ ಸ್ಥಳೀಯ ಸಮುದಾಯಗಳಿಗೆ ಸುಸ್ಥಿರ ಜೀವೋಪಾಯದ ಅವಕಾಶ ಕಲ್ಪಿಸುವುದರ ಮೂಲಕ ಬೆಂಗಳೂರಿನ ಭವಿಷ್ಯದ ಜಲ ಭದ್ರತೆಗೆ ಇದು ಬಲವಾದ ಅಡಿಪಾಯವಾಗಲಿದೆ ಎನ್ನುವ ಸಂಬಿಕೆ ಅರಣ್ಯಾಧಿಕಾರಿಗಳದ್ದು.

ಅಯೋರಾ ಇಕೋಲಜಿಕಲ್ ಟ್ರಸ್ಟ್ ಎನ್ನುವ ಸ್ವಯಂ ಸೇವಾ ಸಂಸ್ಥೆ ಮತ್ತು ಸೇಲ್ಸ್‌ಫೋರ್ಸ್ ಎನ್ನುವ ಕಾರ್ಪೊರೇಟ್ ಕಂಪನಿಗಳು ತಮ್ಮ ಸಾಮಾಜಿಕ ಹೊಣೆಗಾರಿಕೆಯಡಿ ಈ ಮಹತ್ವಾಕಾಂಕ್ಷೆಯ ಕೆಲಸಕ್ಕೆ ಅರಣ್ಯ ಇಲಾಖೆ ಜೊತೆ ಕೈ ಜೋಡಿಸಿದ್ದಾರೆ. ಜಲಾನಯನ ಪ್ರದೇಶಗಳಿಗಾಗಿ ಅರಣ್ಯಗಳು, ನಂದಿ ಬೆಟ್ಟ ಯೋಜನೆ ಎನ್ನುವ ಮಹತ್ವಾಕಾಂಕ್ಷೆಯ ಈ ಯೋಜನೆ ಯನ್ನು ಯಶಸ್ವಿ ಮಾಡಲು ಅರಣ್ಯಾಧಿಕಾರಿಗಳು ಪಣ ತೊಟ್ಟಿದ್ದಾರೆ. ಈ ಅರಣ್ಯ ಪ್ರದೇಶ ಬೆಳೆದಂತೆ ತನ್ನ ಮೇಲೆ ಬೀಳುವ ಮಳೆಯನ್ನು ಬಿಗಿಯಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಾ ಹೋಗುತ್ತದೆ. ಜೊತೆಗೆ ಅಲ್ಲಲ್ಲಿ ನಿರ್ಮಿಸಿರುವ ನೀರು ಇಂಗು ಗುಂಡಿಗಳ ಮೂಲಕ ಅಂತರ್ಜಲ ಕ್ರಮೇಣ ಹೆಚ್ಚಳವಾಗುತ್ತಾ ಹೋಗುತ್ತದೆ. ಇದು ಅಲ್ಲಿನ ಭೂ ಪ್ರದೇಶದ ಮಣ್ಣಿನ ಸವಕಳಿಯನ್ನು ಸಹ ಕಡಿಮೆ ಮಾಡುತ್ತದೆ. ಮರಗಳು ದಟ್ಟವಾಗುತ್ತಾ ಹೋಗುತ್ತಿದ್ದಂತೆಯೇ ಅವುಗಳ ಮೇಲಿನ ಹಸಿರು ಹೊದಿಕೆಯೂ ಉತ್ತಮವಾಗಿ ಅದು ಭೂಮಿಯ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲಾರಂಭಿಸುತ್ತದೆ. ಅ ಮೂಲಕ ಅಲ್ಲಿ ಸೂಕ್ಷ್ಮ ಪರಿಸರ ವ್ಯವಸ್ಥೆ ರೂಪುಗೊಳ್ಳಲಾರಂಭಿಸುತ್ತದೆ. ಇದರಿಂದಾಗಿ ಅಲ್ಲಿನ ಅರಣ್ಯ ದಿನೇ ದಿನೇ ಆರೋಗ್ಯಪೂರ್ಣವಾಗಿ ಹೆಚ್ಚು ಮಳೆ ಆಕರ್ಷಿಸುವ ಹಾಗೂ ಬೀಳುವ ಮಳೆಯ ರೀತಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡುತ್ತದೆ. ಮಳೆ ಬೀಳುವ ಪ್ರಮಾಣ ಮತ್ತು ರೀತಿ ಸರಿಯಾದರೆ ಮೆಲ್ಲಗೆ ಜಲಮೂಲಗಳು ಸಕ್ರಿಯವಾಗುತ್ತವೆ ಹಾಗೂ ಜಲದ ಸೆಲೆಗಳು ಚುರುಕುಗೊಂಡು ನೀರು ಹರಿಯಲು ಶುರುವಾಗುತ್ತದೆ. ಆ ಮೂಲಕ ನದಿಗಳು ಮತ್ತೆ ಜೀವ ಪಡೆದುಕೊಳ್ಳುತ್ತವೆ.

ಉತ್ತರ ಪ್ರದೇಶದ ರಾಮಪುರ ನದಿ, ಮಹಾರಾಷ್ಟ್ರದ ಖಾಮ್ ಮತ್ತು ರಾಜಸ್ಥಾನದ ಅರವಾರಿ ನದಿಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ದವು. ಅಲ್ಲಿ ನಿರಂತರ ಹಸಿರೀಕರಣ, ಪರಿಸರ ಎಂಜಿನಿಯರಿಂಗ್, ಅಂತರ್ಜಲ ಹೆಚ್ಚಳಕ್ಕೆ ಅಗತ್ಯವಾದ ದೀರ್ಘಕಾಲೀನ ಚಟುವಟಿಕೆಗಳ ಮೂಲಕ ಈ ನದಿಗಳನ್ನು ಪುನಶ್ಚೇತನಗೊಳಿಸಲಾಗಿದೆ.

ನಮ್ಮಲ್ಲೂ ಮಲೈ ಮಹದೇಶ್ವರ ವನ್ಯಜೀವಿ ಧಾಮ ಮತ್ತು ಕಾವೇರಿ ವನ್ಯಜೀವಿಧಾಮ ಹಾಗೂ ಕಲಬುರಗಿಯ ಕೊಂಚವರಂ ಮತ್ತಿತರ ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ಇಲಾಖೆ ಕೈಗೊಂಡ ಕೆಲ ಅತ್ಯುತ್ತಮ ಕ್ರಮಗಳಿಂದಾಗಿ ಅಲ್ಲಿನ ಕಾಡುಗಳು ಆರೋಗ್ಯಕರವಾಗುವ ಜೊತೆಗೆ ಅಲ್ಲಿ ಮಳೆ ಬೀಳುವ ರೀತಿಯು ಬದಲಾಗತೊಡಗಿದೆ. ವಿಜಯಪುರ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನದಡಿ ಕಳೆದ ಹತ್ತು ವರ್ಷಗಳಲ್ಲಿ ನಡೆದ ಹಸಿರೀಕರಣ ಅಭಿಯಾನ ಸಹ ಆ ಜಿಲ್ಲೆಯಲ್ಲಿ ಮಳೆ ಬೀಳುವ ಪ್ರಮಾಣವನ್ನು ಹೆಚ್ಚಳ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಜಲ ಭದ್ರತೆ ಎನ್ನುವುದು ನೀರು ಶುದ್ಧೀಕರಣ ಘಟಕ ಅಥವಾ ನಲ್ಲಿಯಲ್ಲೋ ಆರಂಭವಾಗುವುದಿಲ್ಲ. ಅದು ಅರಣ್ಯ ಜಲಾನಯನ ಪ್ರದೇಶಗಳಲ್ಲಿ ಮತ್ತು ಅಲ್ಲಿನ ಸಂರಕ್ಷಣೆಯಲ್ಲಿ ಆರಂಭವಾಗುತ್ತದೆ. ಬೆಂಗಳೂರಿನ ಕೆರೆಗಳು ಮತ್ತು ಕೊಳವೆ ಬಾವಿಗಳನ್ನು ಉಳಿಸುವುದೆಂದರೆ ಅವುಗಳ ಸುತ್ತಲಿನ ಪ್ರದೇಶಗಳ ಹಸಿರೀಕರಣ, ಬೆಟ್ಟ ಗುಡ್ಡಗಳನ್ನು ರಕ್ಷಿಸುವುದು ಮೊದಲ ಕೆಲಸವಾಗಬೇಕು. ನಂದಿಬೆಟ್ಟದ ಯೋಜನೆಯಲ್ಲೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಕಾರ್ಯತಂತ್ರ ರೂಪಿಸಲಾಗಿದೆ. ಸುತ್ತಲಿನ ಪ್ರದೇಶ ಸಂರಕ್ಷಣೆ ಮಾಡಿ, ಹಸಿರೀಕರಣ ಆದರೆ ಉಳಿದದ್ದನ್ನು ಪರಿಸರವೇ ನೋಡಿಕೊಳ್ಳುತ್ತದೆ.

ನಮ್ಮ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನವು ಸರ್ಕಾರ ಮತ್ತು ಖಾಸಗಿ ವಲಯದ ನಡುವೆ ಪರಿಸರ ಸಂರಕ್ಷಣೆಯ ಯೋಜನೆಗಳಿಗೆ ಪಾರದರ್ಶಕ ಮತ್ತು ಜವಾಬ್ದಾರಿಯುತ ಪಾಲುದಾರಿಕೆಗೆ ಅವಕಾಶ ಕಲ್ಪಿಸುತ್ತಿದೆ. ಸರ್ಕಾರದ ಮೇಲ್ವಿಚಾರಣೆ, ಪಾಲುದಾರರ ಅನುದಾನ ಮತ್ತು ತಾಂತ್ರಿಕ ಪರಿಣತಿಯನ್ನು ಸೇರಿಸಿಕೊಂಡು ಈ ಯೋಜನೆ ರೂಪಿಸಲಾಗಿದೆ. ಇದು ಬಹಳ ಮಹತ್ವದ ಯೋಜನೆ

- ಮೀನಾಕ್ಷಿ ನೇಗಿ, PCCF, ಅರಣ್ಯ ಪಡೆ ಮುಖ್ಯಸ್ಥರು 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

‘ಕನ್ನಡಪ್ರಭ’ ಸಂಪಾದಕ ಜೋಗಿ, ಕಬ್ಬಿನಾಲೆಗೆ ‘ಮಹಾಬಲ’ ಪ್ರಶಸ್ತಿ
ವಾಯುಭಾರ ಕುಸಿತದಿಂದ ಭಾರೀ ಮಳೆ : ಡ್ಯಾಂಗಳ ಮಟ್ಟ ಏರಿಕೆ - ಕೆಆರೆಸ್‌ನಲ್ಲಿ ನೀರಿನ ಹೆಚ್ಚಳ