;Resize=(412,232))
ಪೀಣ್ಯ ದಾಸರಹಳ್ಳಿ : ಕಾವೇರಿ ನೀರಿನ ಪೈಪು ಒಡೆದು ಕಳೆದ ಐದಾರು ತಿಂಗಳಿಂದ ಅಮೂಲ್ಯ ಜೀವಜಲ ವ್ಯರ್ಥವಾಗುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ ದಾಸರಹಳ್ಳಿ ಕ್ಷೇತ್ರದ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕ್ಷೇತ್ರದ ಹೆಸರುಘಟ್ಟ ಮುಖ್ಯರಸ್ತೆಯಲ್ಲಿರುವ ವಿಡಿಯೋ ಸ್ಟಾಪ್ ಬಳಿ ಕಾವೇರಿ ನೀರಿನ ಮುಖ್ಯ ಪೈಪ್ ಒಡೆದು ಹೋಗಿದ್ದು, ಸುಮಾರು ಐದಾರು ತಿಂಗಳಿನಿಂದ ನೀರು ರಸ್ತೆ ಮಧ್ಯೆ ಹರಿದು ವ್ಯರ್ಥವಾಗುತ್ತಿದೆ. ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಿದ ರಸ್ತೆಯೂ ಹಾಳಾಗುತ್ತಿದ್ದು, ವಾಹನಗಳು ಹಾಗೂ ಜನರ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್ಎಸ್‌ಬಿ) ಅಧಿಕಾರಿಗಳು ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ.
ಇಲ್ಲಿ ವ್ಯರ್ಥವಾಗುತ್ತಿರೂ ನೀರನ್ನು ತಡೆಯದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಅಧಿಕಾರಿಗಳು, ‘ಪ್ರತಿ ಹನಿ ನೀರೂ ಕೂಡ ಅಮೂಲ್ಯ, ಅದನ್ನು ಮಿತವಾಗಿ ಬಳಸಿ ಉಳಿಸಿ’ ಎಂದು ಜಾಹಿರಾತು ಮೂಲಕ ಜನರಿಗೆ ಪಾಠ ಮಾಡುತ್ತಾರೆ. ಆದರೆ, ತಮ್ಮದೇ ಉಸ್ತುವಾರಿಯಲ್ಲಿರುವ ಕಾವೇರಿ ನೀರು ಪೂರೈಕೆ ವ್ಯವಸ್ಥೆಯಡಿ ನೀರು ವ್ಯರ್ಥವಾಗುತ್ತಿದ್ದರೂ ಅದನ್ನು ಉಳಿಸಿಕೊಳ್ಳಬೇಕು ಎಂಬ ಜ್ಞಾನ ಅವರಿಗೆ ಇಲ್ಲವಾಗಿದೆ ಎಂದು ಜನರು ಕಿಡಿಕಾರಿದ್ದಾರೆ.
ಹಲವಾರು ಮನೆಗಳಲ್ಲಿ ನೀರನ್ನು ವ್ಯರ್ಥಗೊಳಿಸುವುದನ್ನು ನಾವು ಕಾಣುತ್ತಲೇ ಇರುತ್ತೇವೆ. ಇದರಿಂದ ದಿನವೊಂದಕ್ಕೆ ಸಾವಿರಾರು ಲೀಟರ್ ನೀರು ವ್ಯರ್ಥವಾಗುತ್ತಿದ್ದು, ನೀರಿನ ಇಂಥ ಅಪವ್ಯಯಗಳನ್ನು ತಡೆಯುವ ಸಲುವಾಗಿ ಬಿಡಬ್ಲ್ಯುಎಸ್ಎಸ್‌ಬಿ ದಂಡ ಹಾಕುತ್ತದೆ. ಆದರೆ ನಿಯಮಗಳನ್ನು ಜಾರಿ ಮಾಡುವ ಮಂಡಳಿಯ ಅಧಿಕಾರಿಗಳು, ತಮ್ಮ ವ್ಯಾಪ್ತಿಯಲ್ಲಿನ ನೀರು ಪೋಲಾಗುತ್ತಿದ್ದರೂ ಅದನ್ನು ಸರಿಪಡಿಸುವ ಕೆಲಸ ಮಾಡದೆ ಕಣ್ಮುಚ್ಚಿ ಕುಳಿತಿರುವುದು ಸರಿಯೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ.