;Resize=(412,232))
ಬೆಂಗಳೂರು : ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳನ್ನು ಜಗತ್ತು ಎದುರಿಸುತ್ತಿದೆ. ಈ ಕಾಲಘಟ್ಟದಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ, ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಸುಸ್ಥಿರ ಅಭಿವೃದ್ಧಿಯತ್ತ ಸಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಹೇಳಿದರು.
ಮಂಗಳವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ(ಕೆಎಸ್‌ಪಿಸಿಬಿ) ಸುವರ್ಣ ಮಹೋತ್ಸವ ಮತ್ತು ‘ಸಂಪನ್ಮೂಲಗಳ ಸುದೀರ್ಘ ಬಳಕೆಯ ಆರ್ಥಿಕತೆ ಮತ್ತು ಸುಸ್ಥಿರತೆಯ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
ನೈಸರ್ಗಿಕ ಸಂಪನ್ಮೂಲಗಳ ಸುದೀರ್ಘ ಬಳಕೆ ಮತ್ತು ಸಂರಕ್ಷಣೆಗಾಗಿ ಮರು ಬಳಕೆ ಹಾಗೂ ಪುನರ್ ಬಳಕೆಗೆ ಆದ್ಯತೆ ನೀಡಬೇಕು. ಜೀವನವೂ ಇರಬೇಕು, ಜೀವನೋಪಾಯವೂ ಇರಬೇಕು, ಪ್ರಕೃತಿಯೂ ಉಳಿಯಬೇಕು, ಪ್ರಗತಿಯೂ ಆಗಬೇಕು ಎಂಬುದು ನಮ್ಮ ಸರ್ಕಾರದ ನಿಲುವಾಗಿದ್ದು, ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಬ್ರಂಡ್ಲ್ಯಾಂಡ್ ಆಯೋಗ ‘ಭವಿಷ್ಯದ ಪೀಳಿಗೆಯ ಸ್ವಂತ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯದೊಂದಿಗೆ ರಾಜಿ ಮಾಡಿಕೊಳ್ಳದೆ ಇಂದಿನ ಪೀಳಿಗೆಯ ಅಗತ್ಯಗಳನ್ನು ಪೂರೈಸುವುದು ಸುಸ್ಥಿರತೆ’ ಎಂದು ವ್ಯಾಖ್ಯಾನಿಸಿದೆ. ನಾವು ಉತ್ತಮ ರೂಢಿಗಳನ್ನು ಅಳವಡಿಸಿಕೊಂಡು ಪ್ರಗತಿಯ ಪಥದಲ್ಲಿ ಸಾಗುವುದರ ಜೊತೆಗೆ ಪ್ರಕೃತಿ ಪರಿಸರ ಉಳಿಸಬೇಕಿದೆ. ಮರುಬಳಕೆ, ದುರಸ್ತಿ, ಪುನರ್ ಬಳಕೆ ಮಾಡುವ ಮೂಲಕ ಆರ್ಥಿಕವಾಗಿ ಕಾರ್ಯಸಾಧ್ಯವಾದ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕಿದೆ. ನಮ್ಮ ಭೂಗ್ರಹ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕಿದೆ ಎಂದು ಹೇಳಿದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಮಾಲಿನ್ಯ ನಿಯಂತ್ರಣ ಮಂಡಳಿ ಕೇವಲ ಮಾಲಿನ್ಯ ನಿಯಂತ್ರಣ ಸಂಸ್ಥೆಯಂತೆ ಕೆಲಸ ಮಾಡುತ್ತಿಲ್ಲ. ರಾಜ್ಯದ ಕೈಗಾರಿಕಾ ಕ್ಷೇತ್ರ, ನಗರ, ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಆಡಳಿತ ಮತ್ತು ನಾಗರಿಕರ ನಡುವೆ ಸ್ವಚ್ಛ ತಂತ್ರಜ್ಞಾನ, ಉತ್ತಮ ತ್ಯಾಜ್ಯ ನಿರ್ವಹಣೆ ಮತ್ತು ಜವಾಬ್ದಾರಿಯುತ ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾರ್ಗದರ್ಶಕ ಶಕ್ತಿಯಾಗಿ, ಸ್ಥಿರ ಅಭಿವೃದ್ಧಿಯ ಪಾಲುದಾರನಾಗಿ ಕೆಲಸ ಮಾಡುತ್ತಿದೆ. ಕೈಗಾರಿಕಾ ಮಾಲಿನ್ಯ ನಿಯಂತ್ರಣದ ಆರಂಭಿಕ ಸವಾಲುಗಳಿಂದ ಹಿಡಿದು ಇಂದಿನ ಹವಾಮಾನ ವೈಪರೀತ್ಯ ಮತ್ತು ಸಂಪನ್ಮೂಲ ದಕ್ಷತೆಯಂತಹ ಸಂಕೀರ್ಣ ಸಮಸ್ಯೆಗಳವರೆಗೆ ಮಂಡಳಿಯು ಹಲವು ಸವಾಲುಗಳನ್ನು ಎದುರಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.
ವಿಸ್ತೃತ ಉತ್ಪಾದಕರ ಹೊಣೆಗಾರಿಕೆ ಯೋಜನೆಯಡಿ ನಮ್ಮ ರಾಜ್ಯದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ 1,407 ಘಟಕಗಳು ನೋಂದಣಿಗೊಂಡಿದ್ದು, ಅದರಲ್ಲಿ 785 ಆಮದುದಾರರು ಮತ್ತು 353 ಉತ್ಪಾದಕರು ಸೇರಿದ್ದಾರೆ. ಇ-ತ್ಯಾಜ್ಯಕ್ಕೆ ಸಂಬಂಧಿಸಿದಂತೆ 1,063 ಘಟಕಗಳು ನೋಂದಣಿಯಾಗಿದ್ದು, ಅದರಲ್ಲಿ 978 ಉತ್ಪಾದಕರು, 31 ಮರು ಬಳಕೆದಾರರು, 49 ಮರು ಸಂಸ್ಕರಣಾಗಾರರಾಗಿದ್ದಾರೆ. ಐವರು ಉತ್ಪಾದಕರೂ ಸೇರಿದ್ದಾರೆ. ಬ್ಯಾಟರಿ ತ್ಯಾಜ್ಯಕ್ಕೆ ಸಂಬಂಧಿಸಿದಂತೆ 11 ಘಟಕಗಳು ನೋಂದಣಿಯಾಗಿದ್ದು, ಲೀಥಿಯಂ, ಕೋಬಾಲ್ಟ್ ಮತ್ತು ನಿಕಲ್‌ಗಳಂತಹ ಅಪರೂಪದ ಲೋಹಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ ಎಂದ ಅವರು, ರಾಜ್ಯದ ಪ್ರಗತಿಗೆ ನಮ್ಮ ನೈಸರ್ಗಿಕ ಸಂಪತ್ತು ಬಲಿಯಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸುಲು, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಮತ್ತು ವಿಧಾನ ಪರಿಷತ್ತು ಸದಸ್ಯ ದಿನೇಶ್ ಗೂಳಿಗೌಡ, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ವೆಲ್ ಲ್ಯಾಬ್ ಸಂಸ್ಥೆಯ ಹಿರಿಯ ಸಂಶೋಧನಾ ಸಹಾಯಕಿ ಚೇಷ್ಠಾ ರಜೋರಾ ಸೇರಿದಂತೆ ಇತರರು ಇದ್ದರು.
‘ಇ-ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಬ್ಯಾಟರಿ ತ್ಯಾಜ್ಯ ನಿರ್ವಹಣೆ’ ವಿಷಯದ ಕುರಿತು ಸಂವಾದದಲ್ಲಿ ಸೆಪೆಟ್ ಸಂಸ್ಥೆಯ ಡಾ. ಸುಶಾಂತ್ ಕುಮಾರ್, ಇಸ್ರೋ ನಿವೃತ್ತ ವಿಜ್ಞಾನಿ ವಿ.ಜಗನ್ನಾಥ, ಎನ್ಐಟಿಕೆ ಸಂಸ್ಥೆಯ ಡಾ. ಜಿ.ಶ್ರೀನಿಕೇತನ, ವೇಸ್ಡ್ ಇಂಪ್ಯಾಕ್ಟ್ ಟ್ರಸ್ಟ್‌ನ ಎಚ್.ವಿ.ಗಾಯಿತ್ರಿ ಪಾಲ್ಗೊಂಡಿದ್ದರು.