ಉತ್ತರಾದಿಮಠದಲ್ಲಿ ಚೆನ್ನೈ ರವಿ ಪಾತ್ರವೇನು? : ಭಕ್ತಾದಿಗಳ ಪ್ರಶ್ನೆ

Published : May 02, 2025, 07:19 AM IST
 Uttaradi Math?

ಸಾರಾಂಶ

ಉತ್ತರಾದಿಮಠದ ವ್ಯವಹಾರಗಳಲ್ಲಿ ಚೆನ್ನೈ ರವಿ ಎಂದೇ ಖ್ಯಾತರಾಗಿರುವ ರವೀಂದ್ರನ್ ಅವರು ಸಕ್ರಿಯರಾಗಿದ್ದಾರೆ. ರವಿ ಅವರ ಪಾತ್ರವೇನು

ಬೆಂಗಳೂರು  : ಉತ್ತರಾದಿಮಠದ ವ್ಯವಹಾರಗಳಲ್ಲಿ ಚೆನ್ನೈ ರವಿ ಎಂದೇ ಖ್ಯಾತರಾಗಿರುವ ರವೀಂದ್ರನ್ ಅವರು ಸಕ್ರಿಯರಾಗಿದ್ದಾರೆ. ರವಿ ಅವರ ಪಾತ್ರವೇನು ಎಂಬುದು ಸ್ಪಷ್ಟವಾಗಿ ತಿಳಿಯದಿದ್ದರೂ ಇವರ ಚೆನ್ನೈ ಮೂಲದ ಶ್ರೀನಿವಾಸ ಫ್ಯಾಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವುದು ಬಹಿರಂಗವಾಗಿದೆ ಎಂದು ಮಠದ ಭಕ್ತರು ಆರೋಪಿಸಿದ್ದಾರೆ.

ರವೀಂದ್ರನ್ (ಚೆನ್ನೈ ರವಿ) ಅವರು ಉತ್ತರಾದಿ ಮಠದಲ್ಲಿ ಸಕ್ರಿಯರಾಗಿದ್ದು, ಮಠದಲ್ಲಿ ಅವರ ಪಾತ್ರವೇನು? ಎಂದು ಭಕ್ತಾದಿಗಳು ಪ್ರಶ್ನೆ ಮಾಡಿದ್ದಾರೆ.

ಶ್ರೀನಿವಾಸ ಫ್ಯಾಷನ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿ ಚೆನ್ನೈನಲ್ಲಿ ಕಾರ್ಯಕ್ಷೇತ್ರಹೊಂದಿದೆ. ಈ ಕಂಪೆನಿ ಸಾಲದ ಸುಳಿಗೆ ಸಿಲುಕಿದೆ. ಸಾಲದ ರೇಟಿಂಗ್‌ ಕ್ರಿಸಿಲ್‌ ರೇಟಿಂಗ್ಸ್‌ನಲ್ಲಿ ‘ಡಿ’ ಶ್ರೇಣಿಗೆ ಕುಸಿದಿದೆ. ಅಲ್ಲದೆ, ಕ್ರಿಸಿಲ್‌ ರೇಟಿಂಗ್ ಅಪ್ಡೇಟ್‌ ಮಾಡುವ ಸಲುವಾಗಿ ಸಂಸ್ಥೆ ತನ್ನೊಂದಿಗೆ ಸಹಕರಿಸುತ್ತಿಲ್ಲ ಎಂದು ಕ್ರಿಸಿಲ್ಸ್‌ ತನ್ನ ವರದಿಯಲ್ಲೂ ತಿಳಿಸಿದೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಈ ಕಂಪೆನಿ ಹಲವು ಕೋಟಿ ರು.ಗಳ ಸಾಲದ ಸುಳಿಯಲ್ಲೂ ಸಿಲುಕಿದೆ ಎಂದು ಕ್ರಿಸಿಲ್‌ ಸಂಸ್ಥೆಯ ವರದಿಯಲ್ಲಿ ಹೇಳಲಾಗಿದೆ.

ಇದರ ನಡುವೆ ಮಠದಿಂದ ಚೆನ್ನೈಗೆ ವರ್ಗಾವಣೆಯಾಗಿರುವ ಹಣಕ್ಕೂ ಹಾಗೂ ಚೆನ್ನೈ ರವಿಗೂ ಸಂಬಂಧವಿದೆಯೇ ಅಥವಾ ಇಲ್ಲವೇ ಎಂಬುದು ತನಿಖೆಯಿಂದಲೇ ಸ್ಪಷ್ಟವಾಗಬೇಕಿದೆ ಎಂಬುದು ಭಕ್ತರ ಆಗ್ರಹ.

ಹಣಕಾಸು ಅಕ್ರಮ ಆಗಿಲ್ಲ:

ಉತ್ತರಾದಿಮಠ ಸ್ಪಷ್ಟನೆ 

ಉತ್ತರಾದಿ ಮಠದಲ್ಲಿ ಹಣಕಾಸು ಅಕ್ರಮ ನಡೆದಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ಅಂಥ ಯಾವುದೇ ಲೋಪ ಮಠದಲ್ಲಿ ನಡೆದಿಲ್ಲ ಎಂದು ಉತ್ತರಾದಿ ಮಠ ಸ್ಪಷ್ಟನೆ ನೀಡಿದೆ.

ಉತ್ತರಾದಿಮಠದ ಪರ ಸ್ಪಷ್ಟನೆ ನೀಡಿರುವ ವಿದ್ಯಾಧೀಶಾಚಾರ್ಯ ಗುಟ್ಟಲ್‌ ಅವರು, ಮಠದ ಹಣಕಾಸು ವ್ಯವಹಾರದಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಮಠದ ಲೆಕ್ಕ ಶಾಖೆ ಸ್ಪಷ್ಟಪಡಿಸಿದೆ. ಎಲ್ಲ ಹಣದ ವ್ಯವಹಾರಗಳನ್ನು ಕಾನೂನು ರೀತಿ ನಡೆಸಲಾಗುತ್ತಿದೆ. ಹೀಗಾಗಿ ಭಕ್ತರು ಯಾವುದೇ ಗೊಂದಲ ಆತಂಕಕ್ಕೊಳಗಾಗುವುದು ಬೇಡ ಎಂದು ಹೇಳಿದ್ದಾರೆ.

ದೇಶಾದ್ಯಂತ ಇರುವ ಮಠದ ವಿವಿಧ ಶಾಖೆಗಳಲ್ಲಿ ಅಭಿವೃದ್ಧಿ, ದೇಗುಲ ಜೀರ್ಣೋದ್ಧಾರ, ಕಟ್ಟಡ ನಿರ್ಮಾಣ ಮುಂತಾದ ಕಾರ್ಯಗಳು ಪ್ರಗತಿಯಲ್ಲಿವೆ. ಮಠದ ಖಾತೆಯಿಂದ ವರ್ಗಾಯಿಸಲಾಗಿರುವ ಹಣದ ಬಗ್ಗೆ ಎಲ್ಲ ಲೆಕ್ಕಪತ್ರಗಳೂ ಸರಿಯಾಗಿಯೇ ಇರುತ್ತವೆ ಎಂದು ಲೆಕ್ಕ ಪರಿಶೋಧಕರೂ ಖಚಿತಪಡಿಸಿದ್ದಾರೆ. ಹೀಗಾಗಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

PREV

Recommended Stories

ಗ್ರಾಮೀಣ ಬ್ಯಾಂಕ್‌ಗಳು ರೈತರ ಊರುಗೋಲು
ಹಿಂದುಳಿದ ವರ್ಗಗಳ ಸಮೀಕ್ಷೆಗೆ ಸಹಕರಿಸಿ: ಡೀಸಿ