ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!

Follow Us

ಸಾರಾಂಶ

ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ! ಪುತ್ತೂರಿನ ಅಜ್ಜನಿಗೆ ಬಿದ್ದ ಕನಸು ನಂಬಿ ಹೋದ ಪೊಲೀಸರು ಬೇಸ್ತು । ‘ತಳ್ಬೇಡ್ರಿ ಸಿಎಂ ಹೊಡೀತಾರೆ’ ಅಂತ ಕ್ಯಾಮರಾಮ್ಯಾನ್‌ ಭಯಗೊಂಡಿದ್ದೇಕೆ?

 ಸುಮಾರು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಆ ಆಜ್ಜನಿಗೆ ಆ ರಾತ್ರಿ ಒಂದು ಕನಸು ಬಿದ್ದಿದೆ. ಆ ಕನಸಿನಲ್ಲಿ ಪುತ್ರನೇ ಅಜ್ಜನ ಪತ್ನಿಯನ್ನು ಕೊಲೆ ಮಾಡಿ ಬಿಟ್ಟಿದ್ದಾನೆ. ಕನಸಿನ ಆ ಸನ್ನಿವೇಶದಿಂದ ಗಾಬರಿ ಬಿದ್ದು ಎದ್ದ ಅಜ್ಜ ಪಕ್ಕದಮನೆಯವರ ಬಳಿ ತೆರಳಿ ಕಥೆ ಹೇಳಿದ್ದಾರೆ. 

ಇದನ್ನು ನಂಬಿ ವಿಚಾರಣೆಗೆ ಬಂದ ಪೊಲೀಸರು ಅಂತಿಮವಾಗಿ ಬೇಸ್ತು ಬಿದ್ದಿದ್ದಾರೆ. ಪುತ್ತೂರಿನ ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ಸಮೀಪದ ಅಜಕ್ಕಳದ ಒಂದು ಮನೆ. ಆ ಮನೆಯ ನಿವಾಸಿಯನ್ನು ಒಂದು ದಿನ ಬೆಳ್ಳಂಬೆಳಗ್ಗೆ ಎಬ್ಬಿಸಿದ ಪಕ್ಕದ ಮನೆಯ ಅಜ್ಜ ನನ್ನ ಹೆಂಡ್ತಿಯನ್ನು ನನ್ನ ಮಗನೇ ಕೊಲೆ ಮಾಡಿ ಬಿಟ್ಟಿದ್ದಾನೆ ಎಂದ. ತಕ್ಷಣ ಇದಕ್ಕೆ ಪ್ರತಿಕ್ರಿಯಿಸಿದ ಪಕ್ಕದ ಮನೆಯಾತ ಆ ಅಜ್ಜನನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಪೊಲೀಸ್‌ ಠಾಣೆಗೆ ಕರೆದೊಯ್ದರು. ಠಾಣೆಗೆ ಬಂದ ವೃದ್ಧ ತನ್ನ ಪತ್ನಿಯನ್ನು ಪುತ್ರ ರಾತ್ರಿ ಕೊಲೆ ಮಾಡಿದ ಎಂದು ದುಮ್ಮಾನ ಹೇಳಿದ. ಅತ್ಯಂತ ಗಂಭೀರ ಪ್ರಕರಣವಾದ ಕಾರಣ ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ದೂರು ದಾಖಲಿಸಿ, ತಕ್ಷಣ ಆ ಅಜ್ಜನ ಜತೆ ಮಹಜರ್‌ ಮಾಡಲು ಮನೆಗೆ ತುರ್ತಾಗಿ ತೆರಳಿದರು. ಅಜ್ಜನ ಮನೆಗೆ ಹೋದವರೇ ಬಾಗಿಲು ಬಡಿದರು. ಆಗ ಮನೆ ಒಡತಿ ಅರ್ಥಾತ್‌ ಅಜ್ಜನ ಧರ್ಮಪತ್ನಿ ಮನೆ ಬಾಗಿಲು ತೆರೆದರು!

ಅಷ್ಟೇ ಅಲ್ಲ, ಕೊಲೆಯಾದವರ ಬೆನ್ನ ಹಿಂದೆಯೇ ಕೊಲೆ ಮಾಡಿದ ಪುತ್ರ ಕೂಡ ಬಂದು ಏನಾಯ್ತು ಎಂದ. ಇದನ್ನು ನೋಡಿದ ಪೊಲೀಸರಿಗೆ ಒಂದು ಕ್ಷಣ ಏನು ನಡೆಯುತ್ತಿದೆ ಎಂದೇ ಗೊತ್ತಾಗಲಿಲ್ಲ. ಸಾವರಿಸಿಕೊಂಡು ವಿಚಾರಿಸಿದಾಗ ಬಯಲಿಗೆ ಬಂದ ಸತ್ಯವೇನೆಂದರೆ.... ಸುಮಾರು ದಿನಗಳಿಂದ ಖಿನ್ನತೆಯಿಂದ ಬಳಲುತ್ತಿದ್ದ ಆ ಆಜ್ಜನಿಗೆ ಆ ರಾತ್ರಿ ಒಂದು ಕನಸು ಬಿದ್ದಿದೆ. ಆ ಕನಸಿನಲ್ಲಿ ಪುತ್ರನೇ ಅಜ್ಜನ ಪತ್ನಿಯನ್ನು ಕೊಲೆ ಮಾಡಿ ಬಿಟ್ಟಿದ್ದಾನೆ.

ಕನಸಿನ ಆ ಸನ್ನಿವೇಶದಿಂದ ಗಾಬರಿ ಬಿದ್ದು ಎದ್ದ ಅಜ್ಜ ಪಕ್ಕದಮನೆಯವರ ಬಳಿ ತೆರಳಿ ಕಥೆ ಹೇಳಿದ್ದಾರೆ. ಇದನ್ನು ನಂಬಿ ವಿಚಾರಣೆಗೆ ಬಂದ ಪೊಲೀಸರು ಅಂತಿಮವಾಗಿ ಬೇಸ್ತು ಬಿದ್ದಿದ್ದಾರೆ.

ಹೇಯ್‌... ನಾನೇಕೆ ಹೊಡೆಯಲಿ?’: ಸಿಎಂ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಡ್‌ ಚೆಂದ ಇದ್ದರೆ ಹಾಗೂ ಕಾರ್ಯಕರ್ತರು ಉತ್ತಮ ನಡವಳಿಕೆ ತೋರಿದರೆ ಬಹಿರಂಗವಾಗಿಯೇ ಪ್ರೀತಿ ಸುರಿಸುತ್ತಾರೆ. ಅಕಸ್ಮಾತ್‌ ಲಕ್ಷಣ ರೇಖೆ ದಾಟಿದಿರೋ ಅಷ್ಟೇ ಸರಿಯಾಗಿ ಜಾಡಿಸುತ್ತಾರೆ. ಈ ಮಾತಿಗೆ ಸಾವಿರ ಉದಾಹರಣೆಗಳಿವೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಹಿಳೆಯೊಬ್ಬರು ಮುತ್ತಿಟ್ಟರೂ ತಲೆ ಸವರಿ ಕಳುಹಿಸಿದ್ದ ಶಾಂತಿರಾಮಯ್ಯ, ಅನಗತ್ಯ ಕಿರಿಕಿರಿ ಮಾಡಿದ ಕಾರ್ಯಕರ್ತರಿಗೆ ಕಪಾಳ ಮೋಕ್ಷ ಮಾಡಿದ ಕೋಪರಾಮಯ್ಯ. ಇತ್ತೀಚೆಗೆ ಬೆಳಗಾವಿ ಕಾಂಗ್ರೆಸ್‌ ರ್‍ಯಾಲಿ ವೇಳೆ ಬಿಜೆಪಿ ಗದ್ದಲದಿಂದ ಸಿಟ್ಟಾಗಿದ್ದ ಸಿದ್ದರಾಮಯ್ಯ ಅವರು ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮೇಲೆ ಕಪಾಳ ಮೋಕ್ಷ ಮಾಡಲು ಕೈ ಎತ್ತಿ ಕರ್ತವ್ಯ ನಿರ್ಲಕ್ಷ್ಕ್ಯಕ್ಕೆ ಕಿಡಿಕಾರಿದ್ದರು.

ಈ ವಿಡಿಯೋ ರಾಜ್ಯ, ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಸದ್ದಾಗಿ ಟೀಕೆ ವ್ಯಕ್ತವಾಗಿತ್ತು. ಇದರ ನಡುವೆ ಕಳೆದ ವಾರ ವಿಧಾನಸೌಧದಲ್ಲಿ ಒಳ ಮೀಸಲಾತಿ ಸಮೀಕ್ಷೆ ಕುರಿತ ಸುದ್ದಿಗೋಷ್ಠಿ, ಸಕ್ಕರೆ ಸಚಿವರೊಂದಿಗೆ ಸಭೆ ನಡೆಸಿದ್ದರು. ಸಭೆ ಬಳಿಕ ಕೆಂಗಲ್‌ ಗೇಟ್‌ ಮೂಲಕ ನಿರ್ಗಮಿಸುತ್ತಿದ್ದಾಗ ಮುಖ್ಯಮಂತ್ರಿಗಳ ದೃಶ್ಯಾವಳಿ ಚಿತ್ರಿಸಲು ಸುದ್ದಿವಾಹಿನಿಗಳ ಕ್ಯಾಮೆರಾಮೆನ್‌ಗಳು ಮುಗಿಬಿದ್ದಿದ್ದರು.

ನೂಕುನುಗ್ಗಲು ವೇಳೆ ಕ್ಯಾಮೆರಾಮ್ಯಾನ್‌ ಒಬ್ಬರು, ಹಿಂದಿನಿಂದ ತಳ್ಳುತ್ತಿದ್ದವರಿಗೆ ‘ತಳ್ಳಬೇಡ್ರಿ ಸಿಎಂ ಕಪಾಳಕ್ಕೆ ಹೊಡೆಯುತ್ತಾರೆ’ ಎಂದುಬಿಟ್ಟರು. ಆ ವೇಳೆಗೆ ಹೊರಟಿದ್ದ ಸಿಎಂ, ಕ್ಯಾಮರಾಮ್ಯಾನ್‌ ಮಾತು ಕೇಳಿ ಕ್ಷಣ ನಿಂತು ‘ಹೇಯ್‌.. ನಾನ್ಯಾಕೆ ಹೊಡೆಯಲಿ. ಏನ್‌ ಮಾತಾಡ್ತಿದಿಯಾ?’ ಎಂದು ಪ್ರಶ್ನಿಸಿದರು. ತನ್ನ ಮಾತು ಮುಖ್ಯಮಂತ್ರಿಗಳಿಗೆ ನಾಟಿದ್ದು ಅರ್ಥವಾದ ಕ್ಯಾಮೆರಾಮ್ಯಾನ್‌ ‘ನಿಮಗಲ್ಲ ಸರ್’ ಎನ್ನುತ್ತಾ ಹಿಂದಕ್ಕೆ ಹಂಗೇ ಜಾರಿಕೊಂಡು ಬಿಟ್ಬರು.

 ಗಾಬರಿ ಗೆಳೆಯನ ಪೀಕಲಾಟ! ಯುದ್ಧದ ಸಿದ್ಧತೆಯಲ್ಲಿದ್ದ ಭಾರತ ಸರ್ಕಾರ ಮುನ್ನೆಚ್ಚರಿಕಾ ಕ್ರಮವಾಗಿ ದೇಶಾದ್ಯಂತ ಮಾಕ್‌ಡ್ರಿಲ್‌(ಅಣಕು ಕವಾಯತು) ನಡೆಸಲು ಆದೇಶಿಸಿತ್ತು. ಪಾಕ್‌-ಭಾರತ ಯುದ್ಧ ಆರಂಭಿಸುವ ಮೊದಲೇ ಸುದ್ದಿವಾಹಿನಿಗಳು ಟಿವಿ ಪರದೆಯಲ್ಲಿ ಭೀಕರ ಯುದ್ಧಕ್ಕೆ ಇಳಿದುಬಿಟ್ಟವು.

ಇದ್ಯಾವುದರ ಅರಿವೇ ಇಲ್ಲದ ಗೆಳೆಯನೊಬ್ಬ ಮಾಕ್‌ಡ್ರಿಲ್‌, ಬ್ಲಾಕ್‌ ಔಟ್‌ ಎಂಬ ಪದ ಕೇಳಿ ಬೇಸ್ತು ಬಿದ್ದು ಯುದ್ಧ ಆರಂಭವಾದರೆ ಮುಗೀತು ಎಂದು ಬಗೆದು ಮಾರುಕಟ್ಟೆಗೆ ಓಡಿದ. ಒಂದು ವಾರಕ್ಕಾಗುವಷ್ಟು ತರಕಾರಿ ತೆಗೆದುಕೊಂಡು ಬಂದ. ಜತೆಗೆ ಸ್ಮಾರ್ಟ್ ಬಜಾರ್ ಗೆ ಹೋಗಿ ಬೇಳೆಕಾಳು ಸೇರಿ ಬೇಕಾದ ವಸ್ತುಗಳನ್ನು ತಂದಿಟ್ಟುಕೊಳ್ಳುವಂತೆ ತನ್ನ ಹೆಂಡತಿಗೂ ಆದೇಶಿಸಿದ್ದ.

ಯುದ್ದವೋ, ರಣ ಭೀಕರ ಸಮರವೋ ಹೊಟ್ಟೆ ಪಾಡು ನಡೆಯಲೇಬೇಕಲ್ಲ. ಸೋ, ಒಂದು ದಿನ ಕೆಲಸಕ್ಕೆ ಹೊರಟ. ಈತನ ಆರ್ಭಟದಿಂದ ಪ್ರಭಾವಕ್ಕೆ ಒಳಗಾಗಿದ್ದ ಪತ್ನಿ ಸಂಜೆ 4 ಗಂಟೆಗೆ ಸೈರನ್ ಕೂಗುವುದಕ್ಕೂ ಮೊದಲೇ ಮನೆಗೆ ಬಂದು ಬಿಡಿ, ರಾತ್ರಿ ಲೈಟ್ ಆಫ್ ಮಾಡ್ತಾರಂತೆ ಕತ್ತಲು ಆಗೋ ಮುಂಚೆ ಮನೆ ಸೇರ್ಕೊಂಡು ಬಿಡಿ ಎಂದು ಆತಂಕದಲ್ಲೆ ಗಂಡನಿಗೆ ಸೂಚನೆಯನ್ನೂ ಕೊಟ್ಟಳಂತೆ!

ರಾತ್ರಿ ಮನೆಗೆ ಬಂದ ಮೇಲೆ ಲೈಟ್ ಆಫ್ ಆದ ನಂತರ ಯುಪಿಎಸ್ ಬಳಸಿ ಲೈಟು ಬೆಳಗಿಸಬಹುದೇ ಅಥವಾ ಕ್ಯಾಂಡಲ್ ಹಚ್ಚಿದರೆ ಏನಾದರು ಸಮಸ್ಯೆ ಆಗುತ್ತದೆಯೇ ಎಂಬ ಗೊಂದಲ ಆ ಗಂಡ ಹೆಂಡ್ತಿಗೆ ಶುರುವಾಯ್ತು. ಸೋ, ನನಗೆ ಕರೆ ಮಾಡಿ ಏನು ಮಾಡದು ಎಂಬ ಸಲಹೆ ಕೇಳಿದರು. ಅಳಬೇಕೋ, ನಗಬೇಕೋ ಗೊತ್ತಾಗದೆ ಮಾಕ್ ಡ್ರಿಲ್ ಅಂದ್ರೇನು ಎಂಬುದನ್ನು ವಿವರಿಸಿ ಏನೂ ಆಗುವುದಿಲ್ಲ. ಯುದ್ಧ ಇಲ್ಲಿ ನಡೆದಿಲ್ಲ. ಗಡಿ ಭಾಗದಲ್ಲಿ ಇನ್ನಷ್ಟೇ ಆರಂಭವಾಗಿದೆ ಎಂದೆಲ್ಲ ಅರ್ಥ ಮಾಡಿಸುವ ವೇಳೆಗೆ ಬೆಳಗಾಗಿತ್ತು.  

-ಸಂಶುದ್ದೀನ್ ಸಂಪ್ಯ,

-ಶ್ರೀಕಾಂತ್‌ ಗೌಡಸಂದ್ರ -

ಸಂಪತ್ ತರೀಕೆರೆ