ಪಾಕ್‌ಗೆ ಅನುಕೂಲ ಹೇಳಿಕೆ ಯಾಕೆ? : ಸಿ.ಟಿ.ರವಿ

Sujatha NRPublished : May 15, 2025 10:56 AM

ದೇಶದ ವಿಚಾರದಲ್ಲೂ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯವಾಗುವಂತೆ ಮಾತನಾಡುತ್ತಿರುವುದು ಯಾಕೆ ಎಂಬುದು ಯಕ್ಷಪ್ರಶ್ನೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

 ಬೆಂಗಳೂರು : ದೇಶದ ವಿಚಾರದಲ್ಲೂ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಸಹಾಯವಾಗುವಂತೆ ಮಾತನಾಡುತ್ತಿರುವುದು ಯಾಕೆ ಎಂಬುದು ಯಕ್ಷಪ್ರಶ್ನೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಬುಧವಾರ ಸುದ್ದಿಗಾರರ ಜತೆ ಮಾತನಾಡಿ ನಮ್ಮ ಸೈನಿಕರ ಬಗ್ಗೆ ಹೆಮ್ಮೆ ಇದ್ದು, ನಾವು ಎಂದಿಗೂ ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿಲ್ಲ ಮತ್ತು ಅವರ ಕ್ರೆಡಿಟ್ ಕಿತ್ತುಕೊಳ್ಳುವ ಕೆಲಸವನ್ನು ಮಾಡಿಲ್ಲ. ಹಿಂದೆ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಕಾಂಗ್ರೆಸ್ಸಿಗರು ಸಾಕ್ಷಿ ಕೇಳಿದ್ದರು. ಅಲ್ಲದೆ, ಸೈನಿಕರ ಕುರಿತು ಅಪನಂಬಿಕೆ ವ್ಯಕ್ತಪಡಿಸಿದ್ದರು. ಆಗ ಸೈನಿಕರ ಬಗ್ಗೆ ನಂಬಿಕೆ ಎಲ್ಲಿ ಹೋಗಿತ್ತು ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

1948ರಲ್ಲಿ ಯುದ್ಧದ ವೇಳೆ ಕೇವಲ 48 ಗಂಟೆಗಳಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯುತ್ತೇವೆ ಎಂದು ಸೈನಿಕರು ಕೇಳಿದ್ದರು. ಆಗ ಯಾಕೆ ಯುದ್ಧ ನಿಲ್ಲಿಸಲಾಯಿತು? ಪರಿಣಾಮ ಕಾಶ್ಮೀರದ ಮೂರನೇ ಒಂದು ಭಾಗ ಪಾಕಿಸ್ತಾನದ ಕೈವಶವಾಯಿತು. ಇವತ್ತಿಗೂ ಅದು ಪಾಕಿಸ್ತಾನದ ಕೈಯಲ್ಲೇ ಇದೆ. ಇದಕ್ಕೆ ಕಾರಣ ಯಾರು? 1962ರ ಭಾರತ- ಚೀನಾ ಯುದ್ಧವನ್ನು ಹೊರತುಪಡಿಸಿ ಇನ್ಯಾವುದೇ ಯುದ್ಧದಲ್ಲಿ ದೇಶದ ಸೈನಿಕರು ಯುದ್ಧಭೂಮಿಯಲ್ಲಿ ಸೋತಿಲ್ಲ ಎಂದು ಹೇಳಿದರು.

ಕಾಂಗ್ರೆಸ್ಸಿಗರ ಹೇಳಿಕೆಯ ಧಾಟಿ ಗಮನಿಸಿದರೆ, ಬಿಜೆಪಿ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಎಂಬುದಾಗಿ ಭಾವಿಸಿದಂತೆ ಕಾಣುತ್ತಿದೆ. ಭಯೋತ್ಪಾದಕರು ರಾಜಕೀಯ ಪಕ್ಷಗಳನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ರಾಜಕೀಯ ಪಕ್ಷಕ್ಕೆ ಮೀರಿ ಭಾರತದ ಸಾರ್ವಭೌಮತೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಸರ್ವ ಧರ್ಮ, ಸಮಭಾವ, ಸಹಬಾಳ್ವೆ ಪ್ರಶ್ನಿಸಿ ಹತ್ಯೆ ನಡೆಸಿದ್ದಾರೆ. ಈ ಮೂಲಕ ಯುದ್ಧಕ್ಕೆ ಪ್ರಚೋದನೆ ನೀಡಿದ್ದಾರೆ ಎಂದು ಟೀಕಿಸಿದರು.

ಹಲವು ಬಾರಿ ಭಯೋತ್ಪಾದಕ ದಾಳಿಗಳು ನಡೆದಾಗ ಕಾಂಗ್ರೆಸ್‌ ಸೈನ್ಯಕ್ಕೆ ಸ್ವಾತಂತ್ರ್ಯ ನೀಡಿರಲಿಲ್ಲ. ಕಲ್ಲು ಹೊಡೆದವರಿಗೆ ವಾಪಸ್ ಗುಂಡು ಹೊಡೆಯುವ ಅಧಿಕಾರ ಕೊಟ್ಟಿರಲಿಲ್ಲ. ಈ ಹಿಂದೆ ಭಯೋತ್ಪಾದಕರ ದಾಳಿ ಬಗ್ಗೆಯೇ ಸಂಶಯ ವ್ಯಕ್ತಪಡಿಸಿದ್ದ ಕಾಂಗ್ರೆಸ್ಸಿಗರು ಇದೊಂದು ಆಂತರಿಕ ಪಿತೂರಿ ಎಂಬಂತೆ ಮಾತನಾಡಿದ್ದರು. ಪಾಕಿಸ್ತಾನದವರು ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಇವರ ಮಾತುಗಳನ್ನೇ ಬಳಸಿದ್ದರು. ದೇಶದ ಹಿತಾಸಕ್ತಿ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಆಗ್ರಹಿಸಿದರು.