;Resize=(412,232))
ಬೆಂಗಳೂರು : ಹನೂರು ಅರಣ್ಯ ವ್ಯಾಪ್ತಿಯಲ್ಲಿ ಶೂಟೌಟ್ ಘಟನೆ ಬಳಿಕ ಕೆಲ ದುಷ್ಕರ್ಮಿಗಳು ಇಲಾಖೆಯ ವಿವಿಧ ಬೇಟೆ ತಡೆ ಶಿಬಿರ, ವಸತಿ ಗೃಹಗಳನ್ನು ಬಹುತೇಕ ಧ್ವಂಸಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್ ಕಡ್ಡಿಗಳನ್ನು ಬಳಸಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು ಈ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಆ.15ರಂದು ಹನೂರು ಅರಣ್ಯದ ವನ್ಯಧಾಮ ವ್ಯಾಪ್ತಿಯಲ್ಲಿ ಅರಣ್ಯ ಅಧಿಕಾರಿಗಳಿಂದ ನಡೆದ ಬೇಟೆಗಾರರ ಶೂಟ್‌ಔಟ್ ಘಟನೆ ಬಳಿಕ ಕೆಲ ದುಷ್ಕರ್ಮಿಗಳ ದಾಳಿಯಿಂದ ಅರಣ್ಯ ಇಲಾಖೆಯ 8 ಬೇಟೆ ತಡೆ ಶಿಬಿರಗಳು ಬಹುತೇಕ ದ್ವಂಸಗೊಂಡಿವೆ.
9 ವಸತಿ ಗೃಹಗಳಿಗೆ ಹಾನಿಯಾಗಿದೆ. ಆ ಕಟ್ಟಡಗಳಲ್ಲಿದ್ದ ಪೀಠೋಪಕರಣ, ನಾಲ್ಕು ಚಕ್ರದ ಒಂದು ಇಲಾಖಾ ವಾಹನ, ಸಿಬ್ಬಂದಿಯ ನಾಲ್ಕು ದ್ವಿಚಕ್ರ ವಾಹನಗಳನ್ನು ಜಖಂಗೊಳಿಸಿದ್ದಾರೆ. ಈ ಕೃತ್ಯಕ್ಕೆ ಜಿಲೆಟಿನ್ ಕಟ್ಟಿಗಳನ್ನು ಬಳಸಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ. ತನಿಖೆ ನಡೆಯುತ್ತಿದ್ದು ಎರಡು ದಿನಗಳಲ್ಲಿ ವರದಿ ಬರಲಿದೆ. ನಂತರ ಘಟನೆಯ ಸತ್ಯಾಂಶಗಳ ಕುರಿತು ವಿವರವಾದ ಮಾಹಿತಿ ನೀಡುವುದಾಗಿ ಹೇಳಿದರು.