ಇಂದು ರಾಜ್ಯದಲ್ಲಿ 5 ಲಕ್ಷ ಜನರಿಂದ ಯೋಗ - ಅಂ.ರಾ. ಯೋಗ ದಿನಾಚರಣೆ

Published : Jun 21, 2025, 09:01 AM IST
Yoga Day 2025, Yogandhra

ಸಾರಾಂಶ

ರಾಜ್ಯಾದ್ಯಂತ ಶನಿವಾರ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯುಷ್‌ ಇಲಾಖೆ ಸೇರಿ ವಿವಿಧ ಸಂಘ-ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಐದು ಲಕ್ಷ ಮಂದಿ ಭಾಗಿಯಾಗಲಿದ್ದಾರೆ.

 ಬೆಂಗಳೂರು :  ರಾಜ್ಯಾದ್ಯಂತ ಶನಿವಾರ 11ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಆಯುಷ್‌ ಇಲಾಖೆ ಸೇರಿ ವಿವಿಧ ಸಂಘ-ಸಂಸ್ಥೆಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಐದು ಲಕ್ಷ ಮಂದಿ ಭಾಗಿಯಾಗಲಿದ್ದಾರೆ. ಆಯುಷ್‌ ಇಲಾಖೆಯಿಂದ ವಿಧಾನಸೌಧದ ಆವರಣ ಸೇರಿ ರಾಜ್ಯಾದ್ಯಂತ ಲಕ್ಷಾಂತರ ಮಂದಿ ಯೋಗ ಆಚರಣೆಗೆ ಸರ್ಕಾರ ವ್ಯವಸ್ಥೆ ಮಾಡಿಕೊಟ್ಟಿದೆ. ರಾಜ್ಯದ 100 ಆರೋಗ್ಯ ಕೇಂದ್ರಗಳಲ್ಲಿ 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನ ಮಾಡಲಾಗುತ್ತದೆ.

ವಿಧಾನಸೌಧದ ಮುಂದೆ ಆಯೋಜಿಸಿರುವ ರಾಜ್ಯಮಟ್ಟದ ‘ಯೋಗ ಸಂಗಮ’ ಕಾರ್ಯಕ್ರಮವನ್ನು ರಾಜ್ಯಪಾಲ ಥಾವರ್‌ಚಂದ ಗೆಹಲೋತ್‌ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸರ್ಕಾರದ ಸಚಿವ, ಶಾಸಕರು, ಚಲನಚಿತ್ರ ತಾರೆಯರು ಭಾಗವಹಿಸಲಿದ್ದಾರೆ. ಬೆಳಗ್ಗೆ 7 ರಿಂದ 7.45ರವರೆಗೆ ಯೋಗ ಪ್ರಾತ್ಯಕ್ಷಿಕೆ ನಡೆಯಲಿದೆ. 5 ಸಾವಿರ ಯೋಗಪಟುಗಳು ಪಾಲ್ಗೊಳ್ಳಲಿದ್ದಾರೆ, ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ದೃಷ್ಟಿಕೋನದಡಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಕ್ಷರ ಯೋಗ ಕೇಂದ್ರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವದ ಅತಿ ದೊಡ್ಡ ಯೋಗ ಕಾರ್ಯಕ್ರಮ ಆಯೋಜಿಸುವ ಮೂಲಕ 12ನೇ ಗಿನ್ನೆಸ್‌ ವಿಶ್ವ ದಾಖಲೆ ನಿರ್ಮಾಣಕ್ಕೆ ಮುಂದಾಗಿದೆ. ಈ ಯೋಗ ಕಾರ್ಯಕ್ರಮದಲ್ಲಿ 80ಕ್ಕೂ ಅಧಿಕ ದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಬೆಳಗ್ಗೆ 9 ಗಂಟೆ ಈ ಕಾರ್ಯಕ್ರಮ ಆರಂಭಗೊಳ್ಳಲಿದೆ.

ನಿಮ್ಹಾನ್ಸ್‌ನ ಮೈದಾನದಲ್ಲಿ ಬೆಳಗ್ಗೆ 7 ಗಂಟೆ ಆಯೋಜಿಸಿರುವ ಯೋಗ ದಿನಾಚರಣೆಯನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ ಡಾ.ಎಲ್‌.ಸ್ವಸ್ತಿಚರಣ್‌ ಉದ್ಘಾಟಿಸಲಿದ್ದಾರೆ. ಸಾಮೂಹಿಕ ಯೋಗದಲ್ಲಿ ನಿಮ್ಹಾನ್ಸ್‌ ಸಂಸ್ಥೆ ನೌಕಕರು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ನಂತರ 9 ಗಂಟೆಗೆ ಅಶ್ವಿನಿ ಹಾಲ್‌ನಲ್ಲಿ ರೋಗಿಗಳಿಗೆ ಯೋಗ ಅಧಿವೇಶನ ನಡೆಯಲಿದೆ.

ಸರಳ ಯೋಗ ಸಂಸ್ಥೆಯಿಂದ ಅರಮನೆ ಮೈದಾನದ ತ್ರಿಪುರ ವಾಸಿನಿ ಮೈದಾನದಲ್ಲಿ ಬೆಳಗ್ಗೆ 7 ರಿಂದ 9 ಗಂಟೆ ವರೆಗೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿದ್ದು, ಎಲ್ಲರಿಗೂ ಉಚಿತ ಪ್ರವೇಶ ಇರಲಿದೆ. ಜತೆಗೆ, ಮೈಸೂರು, ಬೆಳಗಾವಿ, ಧಾರಾವಾಡ ಸೇರಿ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಯೋಗ ದಿನಾಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.

PREV
Read more Articles on

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ