ಚಿನ್ನಸ್ವಾಮಿ ಕ್ರೀಡಾಂಗಣದ ಕಾಲ್ತುಳಿತ : 3 ಐಪಿಎಸ್‌ ಸಸ್ಪೆಂಡ್‌ಗೆ ಕೇಂದ್ರ ಅಸ್ತು

KannadaprabhaNewsNetwork |  
Published : Jun 29, 2025, 01:36 AM ISTUpdated : Jun 29, 2025, 07:16 AM IST
Karnataka Crowd Control Bill 2025 Strict Law After RCB Victory Stampede Tragedy

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

 ಬೆಂಗಳೂರು :  ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ಘಟನೆ ಸಂಬಂಧ ಬೆಂಗಳೂರು ಮಾಜಿ ಪೊಲೀಸ್ ಆಯುಕ್ತ, ಎಡಿಜಿಪಿ ಬಿ.ದಯಾನಂದ್ ಸೇರಿದಂತೆ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ.

ಈ ಸಂಬಂಧ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕೇಂದ್ರ ಸರ್ಕಾರ ಪತ್ರ ಕಳುಹಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ, ಅಮಾನತುಗೊಂಡಿದ್ದ ಎಡಿಜಿಪಿ ಬಿ.ದಯಾನಂದ್‌, ಐಜಿಪಿ ವಿಕಾಸ್ ಕುಮಾರ್ ವಿಕಾಸ್ ಹಾಗೂ ಡಿಸಿಪಿ ಶೇಖರ್ ಟೆಂಕಣ್ಣನವರ್‌ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಇನ್ನೊಂದೆಡೆ ಕಾಲ್ತುಳಿತ ದುರ್ಘಟನೆಯಲ್ಲಿ ಐಪಿಎಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ತನ್ನ ನಿರ್ಧಾರ ಸಮರ್ಥನೆಗೆ ರಾಜ್ಯ ಸರ್ಕಾರಕ್ಕೆ ರಾಜಕೀಯವಾಗಿ ಬಲ ಸಿಕ್ಕಿದೆ.

ಅಖಿಲ ಭಾರತ ಆಡಳಿತ ಸೇವಾ ಮಟ್ಟದ ಅಧಿಕಾರಿಗಳು ಅಂದರೆ ಐಎಎಸ್‌ ಹಾಗೂ ಐಪಿಎಸ್ ಅಧಿಕಾರಿಗಳ ಅಮಾನತು ಬಗ್ಗೆ ನಿಯಮಾನುಸಾರ ಕೇಂದ್ರ ಸರ್ಕಾರವು ಅಂತಿಮ ನಿರ್ಣಯ ತೆಗೆದುಕೊಳ್ಳಬೇಕಿದೆ. ಅಧಿಕಾರಿಗಳ ಕೇಡರ್ ಹಾಗೂ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರ ಅಧಿಕಾರ ಹೊಂದಿದೆ. ಆದರೆ ಅಮಾನತು ವಿಚಾರದಲ್ಲಿ ಕೇಂದ್ರ ಸರ್ಕಾರದ್ದು ಅಂತಿಮ ತೀರ್ಮಾನವಾಗಿದೆ. ಹೀಗಾಗಿ ಈಗಿನ ಐಪಿಎಸ್ ಅಧಿಕಾರಿಗಳ ತಲೆದಂಡ ಕುರಿತು ಕೇಂದ್ರಕ್ಕೆ ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು.

ಏನಿದು ಘಟನೆ?  ಕಾಲ್ತುಳಿತ ದುರ್ಘಟನೆಗೆ ಭದ್ರತಾ ಲೋಪದ ಕಾರಣ ಕೊಟ್ಟು ಬೆಂಗಳೂರು ಪೊಲೀಸ್ ಆಯುಕ್ತರಾಗಿದ್ದ ಎಡಿಜಿಪಿ ದಯಾನಂದ್, ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತ ವಿಕಾಸ್ ಕುಮಾರ್ ವಿಕಾಸ್, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್‌ ಗಿರೀಶ್ ಅ‍ವರನ್ನು ಜೂ.5ರಂದು ರಾತ್ರಿ ರಾಜ್ಯ ಸರ್ಕಾರ ಅಮಾನತುಗೊಳಿಸಿತ್ತು. ಹೀಗಾಗಿ ನಿಯಮಾನುಸಾರ ಐಪಿಎಸ್ ಅಧಿಕಾರಿಗಳ ಅಮಾನತು ಕುರಿತು ಸರ್ಕಾರದಲ್ಲಿ ಉನ್ನತ ಮಟ್ಟದ ಸಭೆ ನಡೆದು ಡಿಪಿಎಆರ್‌ ಇಲಾಖೆ ವರದಿ ಕಳುಹಿಸಿತ್ತು.

ಐಪಿಎಲ್‌ ಟ್ರೋಫಿ ಗೆದ್ದ ಬೆಂಗಳೂರು ರಾಯಲ್ ಚಾಲೆಂಜರ್ಸ್‌ ತಂಡಕ್ಕೆ ಅಭಿನಂದಿಸಲು ಜೂ.4 ರಂದು ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ವಿಧಾನಸೌಧ ಮುಂದೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದ ಸಮಾರಂಭಕ್ಕೆ ಹೋಗಲು ಯತ್ನಿಸಿದ್ದಾಗ ನೂಕು ನುಗ್ಗಲು ಉಂಟಾಗಿ ಕಾಲ್ತುಳಿತದಿಂದ 11 ಮಂದಿ ಆರ್‌ಸಿಬಿ ಅಭಿಮಾನಿಗಳು ಮೃತಪಟ್ಟಿದ್ದರು. 

ಈ ಘಟನೆ ಹಿನ್ನಲೆಯಲ್ಲಿ ಭದ್ರತಾ ಲೋಪ ಹಾಗೂ ಸಂವಹನ ಕೊರತೆ ಕಾರಣ ಕೊಟ್ಟು ಆಗಿನ ಪೊಲೀಸ್ ಆಯುಕ್ತ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಮಾನತಿಗೆ ಆದೇಶಿಸಿದ್ದರು. ಆಯುಕ್ತರ ತಲೆದಂಡಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗಳು ವ್ಯಕ್ತವಾಗಿದ್ದವು.

ಈ ಕಾರ್ಯಕ್ರಮ ನಡೆಯುವ ಬಗ್ಗೆ ಮಾಹಿತಿ ಇದ್ದರು ಕ್ರೀಡಾಂಗಣ ಹಾಗೂ ವಿಧಾನಸೌಧ ಸುತ್ತಮುತ್ತ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸದೆ ಅಧಿಕಾರಿಗಳು ನಿರ್ಲಕ್ಷ್ಯಿಸಿದ್ದಾರೆ. ಅಲ್ಲದೆ ಸಮಾರಂಭಕ್ಕೆ ಆಗಮಿಸಲಿರುವ ಅಭಿಮಾನಿಗಳ ಅಂದಾಜಿಸುವಲ್ಲಿ ಪೊಲೀಸರು ಹಾಗೂ ಗುಪ್ತಚರ ಅಧಿಕಾರಿಗಳು ವಿಫಲರಾಗಿದ್ದರು. ಭದ್ರತಾ ಉಸ್ತುವಾರಿ ಹೊತ್ತಿದ್ದ ಅಧಿಕಾರಿಗಳು ಮುಂಜಾಗ್ರತೆ ವಹಿಸಿದ್ದರೆ ಅನಾಹುತ ತಪ್ಪಿಸಬಹುದಿತ್ತು. ಅಲ್ಲದೆ ಕಾಲ್ತುತಳಿತ ಘಟನೆ ಸಂಬಂಧ ಮುಖ್ಯಮಂತ್ರಿ ಅವರಿಗೆ ಮಾಹಿತಿ ನೀಡುವಲ್ಲಿ ವಿಳಂಬವಾಗಿದೆ. ಅಂದು ಪರಿಸ್ಥಿತಿ ನಿಭಾಯಿಸಲು ಅಧಿಕಾರಿಗಳ ನಡುವೆ ಸಂವಹನ ಕೊರತೆ ಉಂಟಾಗಿದೆ. ಇಲಾಖೆಗಳ ನಡುವೆ ಪರಸ್ಪರ ಸಮನ್ವಯತೆ ಸಾಧಿಸಿಲ್ಲ. ಇತಿಹಾಸದಲ್ಲೇ ದೊಡ್ಡ ದುರಂತ ಸಂಭವಿಸಿ ಜನರು ಪ್ರಾಣ ಕಳೆದುಕೊಂಡ ಘಟನೆಯನ್ನು ಸರ್ಕಾರ ಗಂಭೀರ ಪರಿಗಣಿಸಿದೆ. ಈ ಕಾರಣಕ್ಕೆ ಅಂದು ಭದ್ರತಾ ಹೊಣೆ ಹೊತ್ತಿದ್ದ ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ ಎಂದು ಸರ್ಕಾರ ಸಮರ್ಥನೆ ನೀಡಿತ್ತು. ಈಗ ಸರ್ಕಾರದ ಅಮಾನತು ಆದೇಶಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಮುದ್ರೆ ಬಿದ್ದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ