- ರೈತಪರ ಹೋರಾಟ ಹತ್ತಿಕ್ಕಲು ಕಾಂಗ್ರೆಸ್ ಯತ್ನ: ರೇಣುಕಾಚಾರ್ಯ ಆರೋಪ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ಡ್ಯಾಂ ಬಳಿ ಅವೈಜ್ಞಾನಿಕ ಕಾಮಗಾರಿ ಸ್ಥಗಿತಗೊಳಿಸುವಂತೆ, ಅಚ್ಚುಕಟ್ಟು ರೈತರ ಹಿತ ಕಾಯುವಂತೆ ನಾವೆಲ್ಲಾ ಹೋರಾಟ ನಡೆಸುತ್ತಿದ್ದರೆ, ಹೋರಾಟ ಹತ್ತಿಕ್ಕುವ ಕೆಲಸವನ್ನು ಕಾಂಗ್ರೆಸ್ಸಿಗರು ಮಾಡಿದ್ದಾರೆ. ಕಾಂಗ್ರೆಸ್ಸಿಗರಿಗೆ ತಾಕತ್ತಿದ್ದರೆ ಬಲದಂಡೆ ನಾಲೆ ಸೀಳಿ ನಡೆಸುತ್ತಿರುವ ಕಾಮಗಾರಿ ನಿಲ್ಲಿಸಲಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.ನಗರದಲ್ಲಿ ಶನಿವಾರ ದಾವಣಗೆರೆ ಬಂದ್ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಭದ್ರಾ ಅಚ್ಚುಕಟ್ಟು ರೈತರ ಹಿತಕ್ಕಾಗಿ ಹೋರಾಟ ನಡೆಸಿದ್ದೇವೆ. ಬಿಜೆಪಿ ಹೆಸರಿನಲ್ಲಿ ನಾವ್ಯಾರೂ ಹೋರಾಟ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ್ಯಾರಿಗೂ ಜೈಕಾರ ಹಾಕಿಲ್ಲ. ರೈತರ ಮಕ್ಕಳಾಗಿ ಜಿಲ್ಲಾ ರೈತರ ಒಕ್ಕೂಟದಿಂದ ಹೋರಾಟ ನಡೆಸಿದ್ದೇವೆ ಎಂದರು.
ರೈತಪರವಾದ ಬಂದ್‌ಗೆ ಎಲ್ಲರೂ ಸಹಕಾರ ನೀಡಿದ್ದಾರೆ. ನಮ್ಮ ಹೋರಾಟವು ಯಶಸ್ವಿಯಾಗಿದೆ. ಭದ್ರಾ ಡ್ಯಾಂ ಬಳಿ ಬಲದಂಡೆ ನಾಲೆ ಸೀಳಿ, ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ ನಮ್ಮ ಸಂಪೂರ್ಣ ವಿರೋಧವಿದೆ ಎಂದು ಅವರು ಪುನರುಚ್ಛರಿಸಿದರು.ಡ್ಯಾಂ ಹಿನ್ನೀರಿನಿಂದ ಅಥವಾ ನದಿಯಿಂದ ನೀರನ್ನು ಒಯ್ಯುವ ಕೆಲಸ ಮಾಡುವುದಕ್ಕೆ ನಮ್ಮ ಸಮ್ಮತಿ ಇದೆ. ಬಲದಂಡೆ ನಾಲೆ ಸೀಳಿ ಕಾಮಗಾರಿ ನಿಲ್ಲಿಸುವವರೆಗೂ ಹಂತ ಹಂತವಾಗಿ ಹೋರಾಟ ನಡೆಯುತ್ತದೆ. ಕಾಂಗ್ರೆಸ್ ಪಕ್ಷದವರು ಮಧ್ಯದಲ್ಲಿ ಬಂದು ರೈತಪರ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದ್ದಾರೆ. ಭದ್ರಾ ಅಚ್ಚುಕಟ್ಟು ರೈತರ ವಿಚಾರದಲ್ಲಿ ಬೇರೆ ಪಕ್ಷದಲ್ಲಿ ಗುರುತಿಸಿಕೊಂಡವರೂ ಈ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ಸಿನವರು ಡೋಂಗಿಗಳು ಎಂದು ಟೀಕಿಸಿದರು.
ರೈತರ ಒಕ್ಕೂಟದ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ಮಾತನಾಡಿ, ದಾವಣಗೆರೆ ಬಂದ್‌ಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುತ್ತೇವೆ. ಕೆಲವು ಪಕ್ಷದವರು ಭದ್ರಾ ಅಚ್ಚುಕಟ್ಟು ರೈತರ ಪರ ಹೋರಾಟದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇಂತಹರಿಂದ ರೈತರಿಗೇ ತೊಂದರೆ ಹೊರತು, ರಾಜಕಾರಣಿಗಳಿಗಲ್ಲ. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ಅವೈಜ್ಞಾನಿಕ ಕಾಮಗಾರಿ ನಡೆಯದಂತೆ ತಡೆಯಬೇಕು ಎಂದು ಮನವಿ ಮಾಡಿದರು.- - -
(-ಫೋಟೋ:)