ಬೆಣ್ಣೆಹಳ್ಳದ ಪ್ರವಾಹ: ತಿಂಗಳಾದರೂ ನರಗುಂದ ತಾಲೂಕಲ್ಲಿ ಬಾರದ ಪರಿಹಾರ

KannadaprabhaNewsNetwork |  
Published : Jul 11, 2025, 11:48 PM IST
(10ಎನ್.ಆರ್.ಡಿ4 ಬೆಣ್ಣಿ ಹಳ್ಳದ ಅಬ್ಬರದ ಪ್ರವಾಹಕ್ಕೆ ರೈತರು ಹೆಸರು ಬೆಳೆ ಹಾನಿಯಾಗಿದ್ದು.)    | Kannada Prabha

ಸಾರಾಂಶ

ನರಗುಂದ ತಾಲೂಕಿನ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆ ಹಾನಿ ಉಂಟಾಗಿ ತಿಂಗಳು ಗತಿಸಿದೆ. ಆದರೂ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಬಂದಿಲ್ಲ. ಪರಿಹಾರಕ್ಕಾಗಿ ರೈತರು ಕಾಯುತ್ತಿದ್ದಾರೆ.

ಎಸ್.ಜಿ. ತೆಗ್ಗಿನಮನಿ

ನರಗುಂದ: ತಾಲೂಕಿನ ಬೆಣ್ಣೆಹಳ್ಳದ ಪ್ರವಾಹದಿಂದ ಬೆಳೆ ಹಾನಿ ಉಂಟಾಗಿ ತಿಂಗಳು ಗತಿಸಿದೆ. ಆದರೂ ಸರ್ಕಾರದಿಂದ ಬೆಳೆ ಹಾನಿ ಪರಿಹಾರ ಬಂದಿಲ್ಲ. ಪರಿಹಾರಕ್ಕಾಗಿ ರೈತರು ಕಾಯುತ್ತಿದ್ದಾರೆ.

ತಾಲೂಕಿನ ರೈತ ಸಮುದಾಯ ಹೆಸರು, ಗೋವಿನ ಜೋಳ, ಬಿ.ಟಿ. ಹತ್ತಿ, ತೊಗರಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಆದರೆ ಮೃಗಶಿರಾ ಮಳೆ ಜೂ 11ರಂದು ತಾಲೂಕಿನಲ್ಲಿ ಮತ್ತು ಬೆಣ್ಣೆ ಹಳ್ಳದ ಮೇಲ್ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಸುರಿದಿದ್ದರಿಂದ ಬೆಣ್ಣೆ ಹಳ್ಳಕ್ಕೆ ಅಬ್ಬರದ ಪ್ರವಾಹ ಬಂದು ಮೂಗೂರು, ಬನಹಟ್ಟಿ, ಕುಲ೯ಗೇರಿ, ಸುರಕೋಡ, ಹದಲಿ, ಗಂಗಾಪೂರ, ಖಾನಾಪೂರ, ರಡ್ಡೇರನಾಗನೂರ ನೂರಾರು ರೈತರು ಜಮೀನಗಳಲ್ಲಿರುವ ಎಲ್ಲಾ ಬೆಳೆಗಳು ಕೊಚ್ಚಿ ಹೋಗಿ ಅಪಾರ ಪ್ರಮಾಣದ ಬೆಳೆ ಹಾನಿ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೆಸರು 650.8 ಹೆಕ್ಟೇರ್‌, ಗೋವಿನಜೋಳ 150.5 ಹೇ, ಬಿ.ಟಿ. ಹತ್ತಿ 15.2 ಹೆ, ಈರುಳ್ಳಿ 30.5 ಹೆ ಸೇರಿ ಒಟ್ಟು 847 ಹೆಕ್ಟೇರ್‌ ಬೆಳೆ ಹಾನಿಯಾಗಿದೆ ಎಂದು ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸರ್ಕಾರಕ್ಕೆ ವರದಿ ಕಳುಹಿಸಿದ್ದಾರೆ.

ತಾಲೂಕಿನಲ್ಲಿ ಜೂ. 11ರಂದು ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಪಟ್ಟಣದ ಸೇರಿದಂತೆ ತಾಲೂಕಿನ ವಿವಿಧ ಹಳ್ಳಗಳಿಂದ ಕೂಡ ರೈತರ ಜಮೀನುಗಳಲ್ಲಿ ಬೆಳೆ ಹಾನಿಯಾಗಿವೆ. ಕೃಷಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಯ ಬಗ್ಗೆ ಸಮರ್ಪಕ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಕಳಸದೇ, ಕೇವಲ ಬೆಣ್ಣೆ ಹಳ್ಳದ ಪಕ್ಕದ ಜಮೀನುಗಳು ಮಾತ್ರ ಹಾನಿಯಾಗಿವೆ ಎಂದು ಸರ್ಕಾರ ವರದಿ ಕಳುಹಿಸಿದ್ದು ಖಂಡನೀಯ. ಅಧಿಕಾರಿಗಳು ವಿವಿಧ ಗ್ರಾಮಗಳಲ್ಲಿ ಬೆಳೆ ಹಾನಿಯಾದ ಮಾಹಿತಿ ಸಂಗ್ರಹ ಮಾಡಿ ಸರ್ಕಾರಕ್ಕೆ ಕಳಿಸಿ ರೈತರು ಹಾನಿ ಮಾಡಿಕೊಂಡು ಪ್ರತಿ ಎಕರಗೆ 50 ಸಾವಿರ ಪರಿಹಾರವನ್ನು ಒಂದು ವಾರದಲ್ಲಿ ನೀಡಲು ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಗದಗ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನಾ ಅಧ್ಯಕ್ಷ ಬಸವರಾಜ ಸಾಬಳ ಎಚ್ಚರಿಸಿದರು.

ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಜಂಟಿಯಾಗಿ ಎಲ್ಲಾ ಬೆಳೆ ಹಾನಿ ಸಮೀಕ್ಷೆ ಮಾಡಿದ್ದು ಒಟ್ಟು 847 ಹೆಕ್ಟೇರ್‌ ಪ್ರದೇಶ ಬೆಣ್ಣೆಹಳ್ಳದ ಪ್ರವಾಹಕ್ಕೆ ಹಾನಿಯಾಗಿವೆ ಎಂದು ವರದಿ ಮಾಡಲಾಗಿದೆ ಎಂದು ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌. ಕುಲಕರ್ಣಿ ಹೇಳಿದರು.

ಬೆಣ್ಣೆಹಳ್ಳದ ಪ್ರವಾಹಕ್ಕೆ ಹಾನಿಯಾದ ಬೆಳೆಗಳ ಸಮೀಕ್ಷೆ ಮಾಡಿ ಸರ್ಕಾರ ಪರಿಹಾರ ನೀಡಬೇಕೆಂದು ವರದಿ ಕಳಿಸಿಕೊಟ್ಟಿದ್ದೇವೆ ಎಂದು ತಹಸೀಲ್ದಾರ್‌ ಶ್ರೀಶೈಲ ತಳವಾರ ಹೇಳಿದರು.

PREV