ಹುಬ್ಬಳ್ಳಿ:ಬೆಣ್ಣಿಹಳ್ಳ ಪ್ರವಾಹ ತಡೆಗೆ ರಾಜ್ಯ ಸರ್ಕಾರ ₹ 200 ಕೋಟಿ ಬಿಡುಗಡೆ ಮಾಡಿರುವುದು ಸ್ವಾಗತಾರ್ಹ. ಈ ಯೋಜನೆಗೆ ವರದಿ ಸಲ್ಲಿಸಿದ್ದು, ಡಿಪಿಆರ್ ಸಲ್ಲಿಸಿದ್ದೆಲ್ಲವೂ ಬಿಜೆಪಿ ಅವಧಿಯಲ್ಲಿ. ಆದರೆ ಎಲ್ಲವನ್ನು ತಾವೇ ಮಾಡಿದ್ದು ಎಂದು ಸ್ಥಳೀಯ ಶಾಸಕರು ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಆರೋಪಿಸಿದರು.
ಬೆಣ್ಣೆಹಳ್ಳ, ತುಪ್ಪರಿಹಳ್ಳ ಹಾಗೂ ವಿಜಯಪುರದ ಡೋಣಿ ನದಿ ನಿರ್ವಹಣೆ ಬಗ್ಗೆ ಸರ್ಕಾರದಲ್ಲಿ ಯಾವುದೇ ದಾಖಲೆ ಇರಲಿಲ್ಲ. 2008-09ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಆಗಿನ ಸಿಎಂ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ಇವುಗಳ ನಿರ್ವಹಣೆಯನ್ನು ಬೃಹತ್ ನೀರಾವರಿ ಇಲಾಖೆಗೆ ಸೇರಿಸಿದ್ದೇವೆ. ಎಐ ಹಾಗೂ ಡ್ರೋಣ್ ಸರ್ವೇಗೆ ಅನುದಾನ ನೀಡಿ ಸಮೀಕ್ಷೆ ನಡೆಸಿದ್ದು ನಾವು. ಇದರ ಫಲವಾಗಿ ಕಾಂಗ್ರೆಸ್ ಸರ್ಕಾರದಿಂದ ಈಗ ₹ 200 ಕೋಟಿ ಬಿಡುಗಡೆ ಮಾಡಲು ಸಾಧ್ಯವಾಗಿದೆ ಎಂದು ತಿಳಿಸಿದರು.
ಬೆಣ್ಣೆಹಳ್ಳದಿಂದ ಉಂಟಾಗುವ ಪ್ರವಾಹದಿಂದ ಹಾವೇರಿ, ಧಾರವಾಡ, ಗದಗ ಜಿಲ್ಲೆಯ ಜನರು ರೋಸಿ ಹೋಗಿದ್ದರು. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಹಳ್ಳದ ನೀರನ್ನು ತಡೆಯಬೇಕು. ಅದನ್ನು ಕುಡಿಯಲು ಹಾಗೂ ಬೇಸಾಯಕ್ಕೆ ಬಳಕೆ ಮಾಡಬೇಕೆಂದು ಸಮಿತಿ ತಿಳಿಸಿದೆ. ಅದರಂತೆ ಡಿಪಿಆರ್ ಸಿದ್ಧಪಡಿಸಿ ನಿರಂತರ ಪ್ರಯತ್ನ ಮಾಡಲಾಗಿತ್ತು. ವರದಿ ಅನುಸಾರ 6 ಗ್ರಾಮಗಳನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಲಾಯಿತು. ಆದರೀಗ ಗ್ಯಾರಂಟಿ ಮೇಲೆ ನಡೆಯುತ್ತಿರುವ ಸರ್ಕಾರದಿಂದ ಪ್ರವಾಹ ಪೀಡಿತ ಗ್ರಾಮಗಳ ಸ್ಥಳಾಂತರ, ಪುನರ್ವಸತಿ ಕಲ್ಪಿಸುವ ಕೆಲಸ ಆಗುತ್ತಿಲ್ಲ ಎಂದು ಮುನೇನಕೊಪ್ಪ ದೂರಿದರು.ಸದ್ಯ ₹ 200 ಕೋಟಿ ಬಿಡುಗಡೆಗೊಳಿಸಿರುವುದು ಸ್ವಾಗತಾರ್ಹ. ಆದರೆ, ಬೆಣ್ಣೆಹಳ್ಳ 141 ಕಿ.ಮೀ. ವ್ಯಾಪ್ತಿಯಲ್ಲೂ ಕಾಮಗಾರಿ ನಡೆಯಬೇಕು. ಇಲ್ಲವಾದಲ್ಲಿ ₹ 200 ಕೋಟಿ ವೆಚ್ಚದಲ್ಲಿ ಮಾಡಿದ ಕಾಮಗಾರಿ ಪ್ರವಾಹದಲ್ಲಿ ಕೊಚ್ಚಿ ಹೋಗಲಿದೆ. ಹಂತ-ಹಂತವಾಗಿಯೇ ಕೆಲಸ ಮಾಡಲಿ. ಆದರೆ, ಬೆಣ್ಣಿಹಳ್ಳದ ಉಗಮ ಸ್ಥಳವಾದ ದುಂಡಸಿಯಿಂದ ಆರಂಭವಾಗಿ ಬಾದಾಮಿ ಸಮೀಪದ ಮೆಣಸಗಿ ವರೆಗೂ ಕಾಮಗಾರಿ ನಡೆದಾಗ ಮಾತ್ರ ಉಪಯೋಗವಾಗುತ್ತದೆ. ಸಿಎಂ ಸಿದ್ದರಾಮಯ್ಯ ಅವರು ಸಂಪೂರ್ಣ ಅನುದಾನ ಬಿಡುಗಡೆ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಈ ನಿಟ್ಟಿನಲ್ಲಿ ಸಿಎಂ ಹಾಗೂ ಡಿಸಿಎಂ ಅವರಿಗೆ ಪತ್ರ ಕೂಡ ಬರೆಯಲಾಗುವುದು ಎಂದು ತಿಳಿಸಿದರು.ತುಪ್ಪರಿಹಳ್ಳ ಪ್ರವಾಹ ನಿಯಂತ್ರಣಕ್ಕೆ ₹ 312 ಕೋಟಿ ಅನುಮೋದನೆ ನೀಡಲಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ ₹ 138 ಕೋಟಿ ವೆಚ್ಚದ ಕಾಮಗಾರಿ ಕೈಗೊಳ್ಳಲಾಗಿತ್ತು. ಆದರೆ, ಉಳಿದ ಅನುದಾನವನ್ನೂ ಸರ್ಕಾರ ಬಿಡುಗಡೆ ಮಾಡಲ್ಲವೆಂದ ಮುನೇನಕೊಪ್ಪ. 2ನೇ ಹಂತದ ಕಾಮಗಾರಿ ಕೈಗೆತ್ತಿಕೊಂಡು ಉಳಿದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಯೋಗೀಶ್ವರ ಏತ ನೀರಾವರಿ ಯೋಜನೆ ಕೈಗೆತ್ತಿಕೊಳ್ಳಲು ಆಸಕ್ತಿ ವಹಿಸಬೇಕಾದ ಸ್ಥಳೀಯ ಶಾಸಕರು ಪ್ರಚಾರದ ಗೀಳು ಬಿಟ್ಟು, ಯೋಜನೆಯನ್ನು ಸಮರ್ಪಕ ಅನುಷ್ಠಾನಕ್ಕೆ ಮುಂದಾಗಬೇಕೆಂದು ಸಲಹೆ ಮಾಡಿದರು.